ಸೋಮವಾರ, ಮೇ 23, 2022
30 °C

ಧಾರವಾಡ | ಸಂಭ್ರಮದ ಈದ್‌ ಉಲ್ ಫಿತ್ರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಈದ್‌–ಉಲ್‌–ಫಿತ್ರ್‌ ಹಬ್ಬವನ್ನು ಮುಸಲ್ಮಾನರು ಮಂಗಳವಾರ ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಗಡರದಿಂದ ಆಚರಿಸಿದರು.

ಪವಿತ್ರ ರಂಜಾನ್ ಮಾಸದ ಮೂವತ್ತು ದಿನಗಳ ಉಪವಾಸ ವ್ರತ ಕೊನೆಗೊಳಿಸಿದ ಮುಸಲ್ಮಾನರು, ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜುಮ್ಮಾ ಮಸೀದಿಯ ಪೇಶ ಇಮಾಮ್ ಮೊಹಮ್ಮದ್ ಉಮರ್ ತಹಶೀಲ್ದಾರ್‌ ಅವರು ಪ್ರಾರ್ಥನೆ ಬೋಧಿಸಿದರು.

ಕೋವಿಡ್–19 ಕಾರಣದಿಂದ ಕಳೆದ ಎರಡು ವರ್ಷಗಳಿಂದ ಮನೆಯಲ್ಲೇ ಪ್ರಾರ್ಥನೆ ನಡೆಯುತ್ತಿತ್ತು. ಆದರೆ, ಈ ಬಾರಿ ಸೋಂಕು ಪ್ರಮಾಣ ಇಳಿಮುಖವಾಗಿರುವುದರಿಂದ ಮುಸಲ್ಮಾನರು ಮುಕ್ತವಾಗಿ ಬೆರೆತು, ಶುಭಾಶಯ ವಿನಿಮಯ ಮಾಡಿಕೊಂಡರು. ಬೆಳಿಗ್ಗೆ 10.30ಕ್ಕೆ ಪ್ರಾರ್ಥನೆಗೆ ಸಮಯ ನಿಗದಿಯಾಗಿತ್ತಾದರೂ, ಒಂದು ಗಂಟೆ ಮುಂಚಿತವಾಗಿಯೇ ಹಲವರು ಮೈದಾನದತ್ತ ಹೆಜ್ಜೆ ಹಾಕಿದರು. ಹೊಸ ವಸ್ತ್ರ ತೊಟ್ಟ ದೊಡ್ಡವರು, ಚಿಕ್ಕ ಮಕ್ಕಳು ಚಾಪೆ, ಜಮಖಾನ ಹಿಡಿದು ಪ್ರಾರ್ಥನೆಗೆ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಪ್ರಾರ್ಥನೆ ಸಲ್ಲಿಸಿದ ನಂತರ ಬಡವರು, ನಿರ್ಗತಿಕರು, ಅಂಗವಿಕಲರಿಗೆ ನಗದು, ಧವಸ, ವಸ್ತ್ರ ಹಾಗೂ ಮತ್ತಿತರ ಸಾಮಗ್ರಿಗಳನ್ನು ದಾನ ಮಾಡಿದರು.

ಸಮಾಜದ ಮುಖಂಡರಾದ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ, ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ, ಉಪಾಧ್ಯಕ್ಷ ಆಶ್ಪಾಕ್ ಬೆಟಗೇರಿ, ಕಾರ್ಯದರ್ಶಿ ನಜೀರ ಮನಿಯಾರ, ಗಣ್ಯರಾದ ಐ.ಎ.ಪಿಂಜಾರ, ಖಲೀಲ್ ಅಹ್ಮದ್ ದಾಸನಕೊಪ್ಪ, ಜಬ್ಬಾರ ನಿಪ್ಪಾಣಿ, ರಫೀಕ್ ಶಿರಹಟ್ಟಿ, ಶಫಿ ಕಳ್ಳಿಮನಿ, ಯಾಸೀನ್ ಹಾವೇರಿಪೇಟ, ಖಲೀಲ ದಾಸನಕೊಪ್ಪ, ಮೈನುದ್ದೀನ ನದಾಫ್, ಅಜಗರ ಮುಲ್ಲಾ, ಇಕ್ಬಾಲ್ ಲಗದಗ. ನಿಜಾಮ ರಾಹಿ, ಮುಕ್ತಿಯಾರ ಪಠಾಣ, ಶಕೀಲ ಮುಲ್ಲಾ ಸೇರಿದಂತೆ ಅನೇಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಶಿರ್‌ಖುರ್ಮಾ, ಬಿರಿಯಾನಿ, ಮಾಂಸದ ವಿವಿಧ ಖಾದ್ಯಗಳು, ತಿಂಡಿ ಹಾಗೂ ಪಾನಕಗಳನ್ನು ಮನೆಯಲ್ಲೇ ತಯಾರಿಸಿ ಕುಟುಂಬ ಸಮೇತರಾಗಿ ಸವಿದರು. ಹಲವೆಡೆ ಹಿಂದೂ ಬಾಂಧವರು ಸಾಕಷ್ಟು ಸಂಖ್ಯೆಯಲ್ಲಿ ಔತಣ ಕೂಟದಲ್ಲಿ ಪಾಲ್ಗೊಂಡು ಶುಭಾಶಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು