ಶುಕ್ರವಾರ, ಡಿಸೆಂಬರ್ 13, 2019
20 °C
ಕಿಮ್ಸ್‌ನಲ್ಲಿ ಎರಡು ದಿನಗಳ ಕಾರ್ಯಾಗಾರ: ಅಂಟರತಾನಿ ಅನಿಸಿಕೆ

ತುರ್ತು ಚಿಕಿತ್ಸೆಯೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಚಿಕಿತ್ಸೆ ನೀಡುವುದೇ ವೈದ್ಯರಿಗೆ ದೊಡ್ಡ ಸವಾಲಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಕಿಮ್ಸ್‌ನಲ್ಲಿ ಮಂಗಳವಾರ ಆರಂಭವಾದ ಜೀವ ರಕ್ಷಣೆ ಕೌಶಲ ಕುರಿತು ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ತುರ್ತು ಸಂದರ್ಭದಲ್ಲಿ ಹೇಗೆ ಸೂಕ್ತ ಚಿಕಿತ್ಸೆ ನೀಡಬೇಕು ಎನ್ನುವುದರ ಬಗ್ಗೆ ಯುವ ವೈದ್ಯರಿಗೆ ಹೊಸ ಮಾಹಿತಿಗಳನ್ನು ತಿಳಿಸುವ ಅಗತ್ಯವಿತ್ತು. ಆದ್ದರಿಂದ ಜೀವ ರಕ್ಷಣೆ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ’ ಎಂದರು.

‘ಕಿಮ್ಸ್ ಆಸ್ಪತ್ರೆಯು ಸದ್ಯಕ್ಕೆ 1,200 ಹಾಸಿಗೆಗಳ ಸೌಲಭ್ಯ ಹೊಂದಿದ್ದು, ಕೆಲ ದಿನಗಳಲ್ಲಿ 1800ರಿಂದ 1900 ಹಾಸಿಗೆಗಳ ರಾಜ್ಯದ ಮಾದರಿ ಆಸ್ಪತ್ರೆಯಾಗಿ ಬದಲಾಗಲಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ 60 ವೆಂಟಿಲೇಟರ್‌ಗಳಿದ್ದು, ಹೊಸದಾಗಿ ನಿರ್ಮಿಸಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇನ್ನೂ 30 ವೆಂಟಿಲೇಟರ್‌ಗಳು ಬರುತ್ತವೆ. ಈಗಿರುವ ಎಲ್ಲ ವೆಂಟಿಲೇಟರ್‌ಗಳು ಸದಾ ಕಾಲ ಕಾರ್ಯನಿರ್ವಹಿಸುತ್ತಲೇ ಇರುತ್ತವೆ’ ಎಂದರು.

‘ಹೆರಿಗೆ ಸಮಯದಲ್ಲಿ ರಾಜ್ಯದಲ್ಲಿ ಒಂದು ಲಕ್ಷಕ್ಕೆ ಸರಾಸರಿ 62 ಮಹಿಳೆಯರು ಮೃತಪಡುತ್ತಿದ್ದಾರೆ. ಈ ವಿಷಯದಲ್ಲಿ ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ಮುಂದಿದೆ. ಕ್ರಮೇಣವಾಗಿ ಸಾವಿನ ಪ್ರಮಾಣ ಕಡಿಮೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

ಆಸ್ಟ್ರೇಲಿಯಾದ ಕಮ್ಯುನಿಟಿ ಮೆಡಿಸಿನ್‌ ವಿಭಾಗದ ಸಹ ನಿರ್ದೇಶಕ ಡಾ. ಭೀನಸೇನಾಚಾರ ಪ್ರಸಾದ ‘ಅಪಾಯದಲ್ಲಿರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿ ಅವರ ಪ್ರಾಣ ಉಳಿಸಿಕೊಳ್ಳುವುದೇ ಎಲ್ಲ ವೈದ್ಯರ ಮೊದಲ ಆದ್ಯತೆ. ಈ ಹಂತದಲ್ಲಿ ವೈಜ್ಞಾನಿಕವಾಗಿ ಹಂತ ಹಂತವಾಗಿ ಚಿಕಿತ್ಸೆ ನೀಡಬೇಕು’ ಎಂದರು.

ವೈದ್ಯಕೀಯ ಅಧೀಕ್ಷಕ ಸಿ. ಅರುಣ ಕುಮಾರ ‘ಕಿಮ್ಸ್‌ನಲ್ಲಿಯೇ ಕಲಿತ ಸಾಕಷ್ಟು ವೈದ್ಯರು ಈಗ ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಅಲ್ಲಿನ ಇನ್ನಷ್ಟು ವೈದ್ಯರನ್ನು ಕರೆಯಿಸಿ ನಮ್ಮ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲಾಗುವುದು. ಜೀವ ರಕ್ಷಣೆಯ ಹೊಸ ಆವಿಷ್ಕಾರಗಳ ಬಗ್ಗೆ ಹೇಳಿಕೊಡಲಾಗುವುದು’ ಎಂದರು.

ಸಂಜೆವರೆಗೆ ನಡೆದ ಕಾರ್ಯಾಗಾರದಲ್ಲಿ ವಿವಿಧ ವೈದ್ಯಕೀಯ ವಿಷಯಗಳ ಬಗ್ಗೆ ತಜ್ಞ ವೈದ್ಯರು ಉಪನ್ಯಾಸ ನೀಡಿದರು.

ಅಮೆರಿಕದ ಕ್ರಿಟಿಕಲ್‌ ಕೇರ್‌ ಮೆಡಿಸಿನ್‌ ಸೊಸೈಟಿಯ ಮುಖ್ಯಸ್ಥ ಡಾ. ಕೃಷ್ಣ ಅಪರಂಜಿ, ಕಿಮ್ಸ್‌ ಔಷಧೀಯ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಹಸಬಿ, ಜೀವ ರಸಾಯನವಿಭಾಗದ ಮುಖ್ಯಸ್ಥ ಎಂ.ಸಿ. ಚಂದ್ರು, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ವೈದ್ಯರಾದ ಎ.ಎಸ್‌. ಅಕ್ಕಮಹಾದೇವಿ, ಬಿ.ಎಸ್‌. ಪಾಟೀಲ, ಪ್ರವೀಣ ಹಸಬಿ ಇದ್ದರು.

ಪ್ರತಿಕ್ರಿಯಿಸಿ (+)