ಮಂಗಳವಾರ, ಅಕ್ಟೋಬರ್ 15, 2019
29 °C

ಸಮಗ್ರ ತೆರಿಗೆ ಸುಧಾರಣೆಗೆ ಒತ್ತು: ಸಚಿವೆ ನಿರ್ಮಲಾ ಸೀತರಾಮನ್‌

Published:
Updated:
Prajavani

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್‌ ತೆರಿಗೆಯನ್ನು ಮಾತ್ರ ಕಡಿಮೆ ಮಾಡಿ ಅವರಿಗೆ ರತ್ನಗಂಬಳಿ ಹಾಸುವ ಕೆಲಸ ಮಾಡಿಲ್ಲ; ದೇಶದ ಸಮಗ್ರ ತೆರಿಗೆ ಸುಧಾರಣೆಗೆ ಒತ್ತು ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಹೇಳಿದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಹುಬ್ಬಳ್ಳಿ ಶಾಖೆ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ತೆರಿಗೆ ಸಂಗ್ರಹಿಸುವಲ್ಲಿ ಹೆಚ್ಚು ಪಾರದರ್ಶಕತೆ ತರುವ ಸಲುವಾಗಿ ಕಾರ್ಪೊರೇಟ್‌ ತೆರಿಗೆಯನ್ನು ಶೇ 30ರಿಂದ ಶೇ22ಕ್ಕೆ ಇಳಿಸಲಾಗಿದೆ. ಭಾರತವು ಹೂಡಿಕೆಗೆ ವಿಶ್ವಮಟ್ಟದಲ್ಲಿ ಉತ್ತಮ ಸ್ಥಳವಾಗಬೇಕೆಂಬುದು ಮೋದಿ ಅವರ ಗುರಿಯಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ತೆರಿಗೆ ಪಾವತಿ  ಸರಳೀಕರಣಗೊಳಿಸುವುದು ನಮ್ಮ ಉದ್ದೇಶ’ ಎಂದರು.

‘ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ಬಳಿಕ ದೇಶ ಸುಧಾರಣೆಯ ಹಂತದಲ್ಲಿದೆ. ರೆಡ್‌ ಟೇಪ್‌ ಸಮಾಜದಿಂದ ದೇಶವನ್ನು ಹೂಡಿಕೆದಾರರ ಸ್ನೇಹಿಯಾಗಿ ಪರಿವರ್ತಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಜಿಎಸ್‌ಟಿ ಬಂದ ಬಳಿಕ ಆ ಸುಧಾರಣೆಗಳು ಏನೆಂಬುದು ಎಲ್ಲರಿಗೂ ಗೋಚರಿಸುತ್ತಿವೆ’ ಎಂದರು.

‘ಪ್ರತಿ ವ್ಯವಹಾರವೂ ದೇಶದ ಜಿಡಿಪಿ ಬೆಳವಣಿಗೆಗೆ ನೆರವಾಗುತ್ತವೆ. ಆದ್ದರಿಂದ ದೇಶದ ಎಲ್ಲ ವಹಿವಾಟುಗಳನ್ನು ಜಿಎಸ್‌ಟಿ ಅಡಿ ತರಲಾಗಿದೆ. ಇದರಿಂದ ಹೆಚ್ಚು ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಜಿಎಸ್‌ಟಿಯಲ್ಲಿ ದರ ನಿಗದಿಯ ಸಮಸ್ಯೆಗಳಿದ್ದು ಅವುಗಳನ್ನು ಸರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಜಿಎಸ್‌ಟಿ ಮಂಡಳಿ ಕೆಲಸ ಮಾಡುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಲು ಲೆಕ್ಕ ಪರಿಶೋಧಕರು ಪ್ರಮುಖ ಪಾತ್ರ ವಹಿಸುತ್ತಾರೆ. ಜಿಎಸ್‌ಟಿ ಮತ್ತು ತೆರಿಗೆ ಪದ್ಧತಿ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡುವ ಮೂಲಕ ಅವರು ದೇಶದ ಅಭಿವೃದ್ಧಿಗೆ ನೆರವಾಗಬೇಕು’ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ‘ವಾಣಿಜ್ಯೋದ್ಯಮಿಗಳು ಮತ್ತು ಲೆಕ್ಕ ಪರಿಶೋಧಕರು ಜಂಟಿಯಾಗಿ ಕೆಲಸ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯ’ ಎಂದರು.‌

‘ಭಯೋತ್ಪಾದನೆಯ ವಿಷಯದಲ್ಲಿ ಜಗತ್ತು ಮೊದಲು ಭಾರತವನ್ನು ಬೇರೆ ದೃಷ್ಟಿಕೋನದಲ್ಲಿ ನೋಡುತ್ತಿತ್ತು. ಬಾಲಾಕೋಟ್‌ ಮೇಲೆ ದಾಳಿ ನಡೆಸಿದ ಬಳಿಕ ದೇಶವನ್ನೇ ನೋಡುವ ಚಿತ್ರಣ ಬದಲಾಗಿದೆ. ಇದಕ್ಕೆ ಮೋದಿ ಅವರ ದಿಟ್ಟ ನಿರ್ಧಾರ ಕಾರಣ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಸಂಸದ ಶಿವಕುಮಾರ ಉದಾಸಿ, ಎಸ್‌ಐಆರ್‌ಸಿ ಹುಬ್ಬಳ್ಳಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ದೇಶಪಾಂಡೆ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಇದ್ದರು.

Post Comments (+)