ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ, ಧಾರ್ಮಿಕ, ಸಾಮಾಜಿಕ ಸೇವೆಗೆ ಒತ್ತು ನೀಡಿದ್ದ ವಿಶ್ವೇಶ ತೀರ್ಥರು

Last Updated 29 ಡಿಸೆಂಬರ್ 2019, 4:33 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದೊಂದಿಗೆ ಅರ್ಧಶತಮಾನಕ್ಕಿಂತಲೂ ಹೆಚ್ಚಿನ ಕಾಲದ ನಂಟು ನಮ್ಮದು. ಈ ಭಾಗದಲ್ಲಿ ಕೂಡ ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗೆ ಹೆಚ್ಚಿನ ಒತ್ತು ನೀಡುವುದು ನಮ್ಮ ಆಶಯ. ಹೀಗಾಗಿ ಬಹಳಷ್ಟು ಕಡೆಗಳಲ್ಲಿ ಶೈಕ್ಷಣಿಕ ಕೇಂದ್ರ ಹಾಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯುತ್ತ ಬಂದಿದ್ದೇವೆ. ಹಲವೆಡೆ ಕಲ್ಯಾಣಮಂಟಪಗಳನ್ನು ನಿರ್ಮಾಣ ಮಾಡಿದ್ದೇವೆ. ಭವಿಷ್ಯದಲ್ಲಿ ಈ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ ಎನ್ನುತ್ತಾರೆ ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಸ್ವಾಮೀಜಿ.

ಹುಬ್ಬಳ್ಳಿ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಮಾರ್ಚ್‌ 20ರವರೆಗೆ ನಡೆಯಲಿರುವ ದಶಮಾನೋತ್ಸವ ಭಾಗವತ–ರಾಮಾಯಣ ಪ್ರವಚನ ಮಾಲಿಕೆ ಸಮಾರೋಪ ಸಮಾರಂಭಕ್ಕಾಗಿ ಆಗಮಿಸಿರುವ ಅವರು ಪ್ರಜಾವಾಣಿ ‘ಮೆಟ್ರೊ’ದೊಂದಿಗೆ ಮಾತನಾಡಿದರು.

* ಸ್ವಾಮೀಜಿ, ಉತ್ತರ ಕರ್ನಾಟಕ, ಹುಬ್ಬಳ್ಳಿ–ಧಾರವಾಡದೊಂದಿಗಿನ ನಿಮ್ಮ ನಂಟು ಹೇಳಿ...

‘1952 ರಿಂದ ಹುಬ್ಬಳ್ಳಿಗೆ ಬರುತ್ತಿದ್ದೇನೆ. 1960ರಲ್ಲಿ ಇಲ್ಲಿ ಕೃಷ್ಣ ಮಂದಿರ ನಿರ್ಮಾಣ ಮಾಡಲಾಯಿತು. ವಿದ್ಯಾನಗರದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ, ಸಭಾಭವನ ನಿರ್ಮಾಣ ಮಾಡಲಾಯಿತು. ಎರಡು ವರ್ಷಗಳ ಹಿಂದಷ್ಟೇ ಹುಬ್ಬಳ್ಳಿಯಿಂದ ಎಂಟು ಕಿಮೀ ದೂರದ ಹಾವೇರಿ ರಸ್ತೆಯಲ್ಲಿ ಕರ್ನಾಟಕ ಶಿಕ್ಷಣ ಸೇವಾ ಸಮಿತಿ ಹೆಸರಿನ ರೆಸಿಡೆನ್ಶಿಯಲ್‌ ಸ್ಕೂಲ್‌ ನಿರ್ಮಾಣ ಮಾಡಲಾಗಿದೆ. ಎಸ್ಎಸ್‌ಎಲ್‌ಸಿಯಲ್ಲಿ ಶೇ 94ಕ್ಕಿಂತ ಹೆಚ್ಚು ಅಂಕಗಳಿಸಿದ ಯಾವುದೇ ಜಾತಿ–ಜನಾಂಗದ ವಿದ್ಯಾರ್ಥಿಗೆ ಇಲ್ಲಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ಉಚಿತ ಸೀಟು ನೀಡಲಾಗುತ್ತಿದೆ. ಈ ವರ್ಷದಿಂದ ವಾಣಿಜ್ಯ ವಿಷಯವನ್ನೂ ಬೋಧಿಸಲಾಗುತ್ತಿದೆ’ ಎಂದರು.

ಬೆಂಗಳೂರು, ಮೈಸೂರು, ಉಡುಪಿಯಷ್ಟೇ ಆದ್ಯತೆಯನ್ನು ಉತ್ತರ ಕರ್ನಾಟಕದ ಪ್ರದೇಶಗಳಿಗೂ ನೀಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಇಲ್ಲೆಲ್ಲ ನಮ್ಮ ಮಠದ ವತಿಯಿಂದ, ಮಾಧ್ವ ಮಹಾಮಂಡಳದ ವತಿಯಿಂದ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ವಸತಿ ನಿಲಯ, ಕಲ್ಯಾಣಮಂಟಪ, ಕೃಷ್ಣಮಂದಿರಗಳನ್ನು ನಿರ್ಮಿಸಲಾಗಿದೆ.

ಹಾಗೆಯೇ ಹೈದ್ರಾಬಾದ್‌ ಕರ್ನಾಟಕದ ರಾಯಚೂರು, ಕಲ್ಬುರ್ಗಿ, ಕೊಪ್ಪಳದಲ್ಲಿ ಕೂಡ ವಿದ್ಯಾರ್ಥಿಗಳಿಗೆ ವಸತಿ ನಿಲಯ, ವಿದ್ಯಾಪೀಠ ಸ್ಥಾಪನೆ ಮಾಡಲಾಗಿದೆ. ಪಾಲಿಟೆಕ್ನಿಕ್‌ ಕಾಲೇಜು, ಪ್ರೌಢಶಾಲೆಗಳಿವೆ. ಧಾರವಾಡದ ಜೆಸ್‌ಎಸ್‌ಎಸ್‌ ಕಾಲೇಜು ಒಂದು ಕಾಲದಲ್ಲಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ ಧರ್ಮಸ್ಥಳ ವಿರೇಂದ್ರ ಹೆಗ್ಗಡೆ ಹಾಗೂ ಪೇಜಾವರ ಮಠದ ನೇತೃತ್ವದಲ್ಲಿ ಧನಸಹಾಯ ನೀಡಲಾಯಿತು. ಆಗಿನಿಂದ ಆ ಸಂಸ್ಥೆಯ ಅಧ್ಯಕ್ಷನಾಗಿ ಕೂಡ ಮುಂದುವರಿದಿದ್ದೇನೆ. ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ, ವಿದ್ಯಾರ್ಥಿಗಳ ನೆರವಿಗೆ ನಾವಿದ್ದೇವೆ.

* ಶಿಕ್ಷಣದೊಂದಿಗೆ ಎಲ್ಲೆಡೆ ಧಾರ್ಮಿಕತೆ ಹೆಚ್ಚಿಸುವ ಪ್ರಯತ್ನ ಮಾಡುವುದಾಗಿ ಹೇಳುತ್ತಿದ್ದೀರಿ. ಪ್ರಸ್ತುತ ಸಮಯದಲ್ಲಿ ಧರ್ಮ, ಸಂಸ್ಕೃತಿ, ಧಾರ್ಮಿಕತೆ ವಿಚಾರಗಳತ್ತ ಜನರಿಗೆ ಒಲವಿದೆಯೇ?

–ಖಂಡಿತವಾಗಿಯೂ ನಮ್ಮ ಜನರಿಗೆ, ಮಹಿಳೆಯರಿಗೆ, ಹಿರಿಯರಿಗೆ ಧಾರ್ಮಿಕ ಭಾವನೆ ಸಾಕಷ್ಟಿದೆ. ಆದರೆ ಯುವಜನತೆಗೆ ಮಾತ್ರ ಧಾರ್ಮಿಕ ಭಾವನೆ ಕಡಿಮೆ ಇದೆ. ಅವರಲ್ಲಿ ಕೂಡ ಧಾರ್ಮಿಕತೆ, ನಮ್ಮ ಧರ್ಮ, ಸಂಸ್ಕೃತಿ ಬೆಳೆಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ.

* ಶಾಲೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ವಿಚಾರವನ್ನು ನೀವು ಪ್ರತಿಪಾದಿಸುತ್ತೀರಾ?

– ಹೌದು. ನಮ್ಮ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಗಳ ಅರಿವಿರಬೇಕು. ಈ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಶಿಕ್ಷಣ ಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅದರ ಮೊದಲ ಪ್ರಯತ್ನವಾಗಿ ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರದಲ್ಲಿ ಮೂರು ವರ್ಷದ ಹಿಂದೆಯೇ ರೆಸಿಡೆನ್ಶಿಯಲ್‌ ಸ್ಕೂಲ್‌ (ಸಿಬಿಎಸ್‌ಇ) ಆರಂಭಿಸಿದ್ದೇವೆ. ಒಂದರಿಂದ 10ನೇ ತರಗತಿಯವರೆಗೆ ಇಲ್ಲಿ ಶಿಕ್ಷಣ ನೀಡುತ್ತಿದ್ದೇವೆ. 6ನೇ ತರಗತಿಯಿಂದ ಪುರಾಣ, ಭಾಗವತ, ಭಗವದ್ಗೀತೆ, ನಮ್ಮ ಸಂಸ್ಕೃತಿ, ಪರಂಪರೆ, ಧರ್ಮ... ಹೀಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದೇವೆ. ಧಾರ್ಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗೆ ಶಿಕ್ಷಣ ಶುಲ್ಕ ರಹಿತವಾಗಿದ್ದು ಇದನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದೇವೆ. ಪ್ರಸ್ತುತ 800 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.

* ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳೇನು?

– ನಾವೆಲ್ಲರೂ ಒಗ್ಗಟ್ಟಾಗಿ ಸಂತೋಷದಿಂದ, ಸಾಮರಸ್ಯದಿಂದ ಬದುಕಬೇಕು. ಧಾರ್ಮಿಕವಾಗಿ ಹಾಗೂ ಸಾಮಾಜಿಕ ಸೇವೆ ಮಾಡುವುದು ನಮ್ಮ ಧ್ಯೇಯ. ಹಾಗೆಯೇ ನಮ್ಮ ಪರಂಪರೆ, ತತ್ವ, ಧಾರ್ಮಿಕ ವಿಚಾರಗಳನ್ನು ಪ್ರಚಾರ ಮಾಡುವುದು, ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು, ಪ್ರವಚನ, ಉಪನ್ಯಾಸಗಳನ್ನು ಮಾಡುವ ಮೂಲಕ ಜನರನ್ನು ಹೆಚ್ಚು ಹೆಚ್ಚು ತಲುಪುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಜನರು ಕೂಡ ಸದುಪಯೋಗ ಪಡಿಸಿಕೊಳ್ಳಬೇಕು. ಜತೆಗೆ ಎಲ್ಲ ಭಾಗದ ಜನರನ್ನು ಮುಟ್ಟುವಂತಹ ಕೆಲಸಗಳನ್ನು ಹೆಚ್ಚು ಹೆಚ್ಚಾಗಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಹೊಸ ಹೊಸ ಯೋಜನೆಗಳನ್ನು ಕಾರ್ಯಗತ ಮಾಡುವ ಇಚ್ಛೆ ಹೊಂದಿದ್ದೇವೆ.

* ಸಂಧಾನದಿಂದ ಬಗೆ ಹರಿಯುವ ಭರವಸೆಯಿಲ್ಲ...

ಅಯೋಧ್ಯೆ ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ಭೂ ವಿವಾದ ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವೇಶತೀರ್ಥರು, ‘ಇದೊಂದು ಸ್ವಾಗತಾರ್ಹ ನಡೆ. ಆದರೆ ಸಂಧಾನದ ಮೂಲಕ ಈ ವಿವಾದ ಬಗೆಹರಿಯುವ ಭರವಸೆ ಇಲ್ಲ.ಎರಡೂ ಕಡೆ ಒಪ್ಪಿದರೆ ಸಂತೋಷ. ಆದರೆ ಈಗಿರುವ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಾಣವಾಗಬೇಕು. ಏಕೆಂದರೆ ಅಲ್ಲಿ ಭಾವನಾತ್ಮಕ ಸಂಬಂಧವಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಮಸೀದಿ ನಿರ್ಮಾಣವಾಗಲಿ’ ಎನ್ನುತ್ತಾರೆ.

* ಹಿಂದೂ ಧರ್ಮಕ್ಕೆ ಅನ್ಯಾಯ ಮಾಡದ ಯಾವ ಪಕ್ಷವಾದರೂ ಅಧಿಕಾರಕ್ಕೆ ಬರಲಿ

‘ನಾವು ಯಾವ ರಾಜಕೀಯ ಪಕ್ಷದ ಪರವಾಗಿಯೂ ಇಲ್ಲ; ವಿರೋಧವೂ ಇಲ್ಲ. ಆದರೆ ನಮ್ಮ ಹಿಂದೂ ಧರ್ಮಕ್ಕೆ ಅನ್ಯಾಯ ಆಗದಂತೆ ಸಂರಕ್ಷಣೆ ಮಾಡಿಕೊಂಡು ಹೋಗುವ ರಾಜಕೀಯ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿ ಎನ್ನುವುದು ನಮ್ಮ ಆಶಯ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿವೆ, ಜನೋಪಯೋಗಿ ಯೋಜನೆಗಳು ಜಾರಿಗೆ ಬಂದಿವೆ. ದೇಶದ ರಕ್ಷಣೆ ವಿಚಾರದಲ್ಲಿ ಕೂಡ ಅವರು ಕೈಗೊಂಡ ನಿರ್ಧಾರದ ಬಗ್ಗೆ ಸಂತೋಷವಿದೆ’ ಎನ್ನುತ್ತಾರೆ ಪೇಜಾವರಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT