ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಮಸೂದೆಗೆ ನೌಕರರ ವಿರೋಧ

ಹೆಸ್ಕಾಂ ಎ.ಡಿ ಕಚೇರಿ ಎದುರು ಕೆಪಿಟಿಸಿಎಲ್ ನೌಕರರ, ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
Last Updated 8 ಆಗಸ್ಟ್ 2022, 14:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸಿರುವ ವಿದ್ಯುತ್ ತಿದ್ದುಪಡಿ ಮಸೂದೆ–2022 ವಿರೋಧಿಸಿ ಕೆಪಿಟಿಸಿಎಲ್ ಅಧಿಕಾರಿಗಳ ಹಾಗೂ ನೌಕರರ ಒಕ್ಕೂಟ, ಕೆಪಿಟಿಸಿಎಲ್ ನೌಕರರ ಸಂಘ, ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘ ಹಾಗೂ ಹೆಸ್ಕಾಂ ಗುತ್ತಿಗೆ ನೌಕರರ ಸಂಘದ ಸದಸ್ಯರು ನಗರದಲ್ಲಿರುವ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಮಸೂದೆ ವಿರುದ್ಧ ಘೋಷಣೆ ಕೂಗಿದ ಸದಸ್ಯರು, ಸರ್ಕಾರದ ನಿರ್ಧಾರವು ವಿದ್ಯುತ್ ಕ್ಷೇತ್ರದ ಖಾಸಗೀಕರಣದ ನೀಲನಕ್ಷೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕೆಪಿಟಿಸಿಎಲ್ ನೌಕರರ ಸಂಘದ ಕಾರ್ಯದರ್ಶಿ ಅಡಿವೆಪ್ಪ ಮೆಣಸಿನಕಾಯಿ, ‘ಕೇಂದ್ರ ಸರ್ಕಾರ ಹಿಂದೆಯೂ ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಲು ಮುಂದಾದಾಗ ದೇಶದಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ರೈತರು, ನೌಕರರು ಹಾಗೂ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆದರಿದ್ದ ಮಸೂದೆ ಮಂಡಿಸದೆ ಹಿಂದೆ ಸರಿದಿದ್ದ ಸರ್ಕಾರ, ಈಗ ಮತ್ತೆ ಮಂಡಿಸಿದೆ. ವಿದ್ಯುತ್ ಖಾಸಗೀಕರಣ ತಡೆಯಲು ಒಗ್ಗಟ್ಟಿನ ಹೋರಾಟವೊಂದೇ ದಾರಿ’ ಎಂದರು.

ಸಂಘಟನಾ ಕಾರ್ಯದರ್ಶಿ ಆಸಿಫ ಶಿವಳ್ಳಿ ಮಾತನಾಡಿ, ‘ಮಸೂದೆ ಜಾರಿಯಾದರೆ ಕರ್ನಾಟಕ ವಿದ್ಯುತ್ ನಿಗಮ, ಕೆಪಿಟಿಸಿಎಲ್, ಹೆಸ್ಕಾಂ ಎಲ್ಲಾ ಎಸ್ಕಾಂಗಳು,ವಿದ್ಯುತ್ ಉತ್ಪಾದನೆ, ಸರಬರಾಜು ಹಾಗೂ ವಿತರಣೆಯ ಕಂಪನಿಗಳು ಕಾರ್ಪೊರೇಟ್ ಕಂಪನಿಗಳ ಕೈವಶವಾಗಲಿವೆ. ಇದರಿಂದ ಕ್ರಾಸ್ ಸಬ್ಸಿಡಿಗೆ ಹೊಡೆತ ನೀಡಿ, ಸೇವಾ ಯೋಜನೆಗಳು ಇಲ್ಲವಾಗಿ ಗ್ರಾಹಕರ ಲೂಟಿಗೆ ಕಾರಣವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಐಪಿಎಫ್-ಎಐಯುಟಿಯುಸಿಯ ಗಂಗಾಧರ ಬಡಿಗೇರ, ‘ವಿದ್ಯುತ್ ಸೇವಾ ಕ್ಷೇತ್ರವಾಗಿದ್ದು ಲಕ್ಷಾಂತರ ರೈತರ ಕೃಷಿ ಪಂಪ್‍ಸೆಟ್‍ಗಳು, ಕುಠೀರ ಜ್ಯೋತಿ ಯೋಜನೆ ಫಲಾನುಭವಿಗಳು, ಸಣ್ಣ ಕೈಗಾರಿಕೆಗಳ ಕುಟುಂಬಗಳು, ಉಚಿತ ಹಾಗೂ ಸಹಾಯಧನದ ಆಧಾರದಲ್ಲಿ ವಿದ್ಯುತ್ ಪ್ರಯೋಜನ ಪಡೆಯವವರು ಅತಂತ್ರರಾಗಲಿದ್ದಾರೆ. ಈ ಕ್ಷೇತ್ರ ಖಾಸಗಿಯವರ ಕೈಗೆ ಸಿಕ್ಕರೆ ಫಲಾನುಭವಿಗಳು ಹಾಗೂ ಗುತ್ತಿಗೆ ನೌಕರರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT