ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯಮ ಕ್ಷೇತ್ರದಲ್ಲಿ ನಿಯತ್ತು ಮುಖ್ಯ’

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 91ನೇ ಸಂಸ್ಥಾಪಕರ ದಿನಾಚರಣೆ
Last Updated 1 ಆಗಸ್ಟ್ 2019, 15:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉದ್ಯಮ ಕ್ಷೇತ್ರದಲ್ಲಿ ನಿಯತ್ತು ಬಹಳ ಮುಖ್ಯ. ಅದಿಲ್ಲದಿದ್ದರೆ, ಯಾರೂ ಯಶಸ್ವಿ ಉದ್ಯಮಿಯಾಗಲಾರರು’ ಎಂದು ಸಂಜಯ ಗೋಡಾವತ್ ಗ್ರೂಪ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ ಗೋಡಾವತ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 91ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಉದ್ಯಮದಲ್ಲಿ ನಿಯತ್ತು ಇಲ್ಲದಿದ್ದರೂ ಕೆಲವರು ಯಶಸ್ವು ಕಾಣುತ್ತಾರೆ. ಆದರೆ, ಒಮ್ಮೆ ಕೆಳಕ್ಕೆ ಬಿದ್ದರೆ ಮತ್ತೆ ಎಂದಿಗೂ ಸುಧಾರಿಸಿಕೊಳ್ಳಲಾರರು’ ಎಂದರು.

‘ಶಾಲಾ–ಕಾಲೇಜಿನಲ್ಲಿ ಮೊದಲ ಸಾಲಿನಲ್ಲಿ ಕೂರುವವರು ಪಠ್ಯದಲ್ಲಿರುವ ಯಾವುದೇ ಸಮಸ್ಯೆಯನ್ನು ಪರಿಹರಿಸಬಲ್ಲರು. ಆದರೆ, ಕಡೆಯ ಸಾಲಿನಲ್ಲಿ ಕೂರುವವರು ಜೀವನದಲ್ಲಿ ಎಂತಹ ಸವಾಲು ಬಂದರೂ, ಮೆಟ್ಟಿ ನಿಲ್ಲುವರು. ಅದೇ ರೀತಿ ಹಿಂದಿನ ಸಾಲಿನಲ್ಲಿ ಕುಳಿತಿದ್ದ ನಾನು ಕೂಡ, ಸಾಕಷ್ಟು ಸವಾಲುಗಳನ್ನು ಮೆಟ್ಟಿ ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ’ ಎಂದು ಹೇಳಿದರು.

‘ಹೋರಾಟವಿಲ್ಲದ ಜೀವನ ವ್ಯರ್ಥ. ಸವಾಲುಗಳನ್ನು ಸ್ವೀಕರಿಸಿ ಮುನ್ನಡೆದರೆ ವಿಜಯಿಯಾಗುತ್ತೇವೆ. ಇಲ್ಲದಿದ್ದರೆ, ಮುಂದಿನ ಸವಾಲನ್ನು ಹೇಗೆ ಎದುರಿಸಬೇಕೆಂಬ ಅನುಭವ ಸಿಗುತ್ತದೆ. ಹಾಗಾಗಿ, ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡಾಗ, ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

‘ಕಾರು ಚಾಲನೆ ಮಾಡುವಾಗ ಅಗತ್ಯಕ್ಕೆ ತಕ್ಕಂತೆ ಹೇಗೆ ಗೇರ್ ಬದಲಾಯಿಸುತ್ತೇವೊ ಅದೇ ರೀತಿ, ಜೀವನದಲ್ಲೂ ಸಮಯಕ್ಕೆ ತಕ್ಕಂತೆ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಜ್ಯೋತಿಷ್ಯ ಅಥವಾ ಕುಂಡಲಿಯಿಂದ ಬದುಕು ಬದಲಾಗದು. ಹಾರ್ಡ್‌ ವರ್ಕ್ ಜತೆಗೆ, ಸ್ಮಾರ್ಟ್‌ ವರ್ಕ್ ಇದ್ದಾಗ ಗುರಿ ತಲುಪುವುದು ಸುಲಭ’ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಂಸ್ಥಾಪಕರ ದಿನಾಚರಣೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ವಿ.ಪಿ. ಲಿಂಗನಗೌಡರ ಅತಿಥಿಗಳನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ವಿನಯ ಜೆ. ಜವಳಿ ಸಂಸ್ಥೆಯ ಬಗ್ಗೆ ಪರಿಚಯ ಮಾಡಿಕೊಟ್ಟರು.

‘ವಾಣಿಜ್ಯ ರತ್ನ’ ಪ್ರಶಸ್ತಿ:

ಹುಬ್ಬಳ್ಳಿಯ ಮೈಕ್ರೋಫಿನಿಷ್ ಗ್ರೂಪ್ ಆಫ್ ಕಂಪನೀಸ್‌ನ ತಿಕಲ ವಿಕಮಶಿ, ಕೆನ್ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್‌ನ ವಿವೇಕ ನಾಯಕ, ದಾಸನೂರ ಆಗ್ರೋ ಇಂಡಸ್ಟ್ರೀಸ್‌ನ ಪ್ರಕಾಶ ದಾಸನೂರ, ಲಕ್ಷ್ಮೇಶ್ವರದ ಮಹಾವೀರ ಕುಮಾರ ಅಶೋಕಕುಮಾರ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿಯ ಓಂ ಪ್ರಕಾಶ ಜೈನ್ ಹಾಗೂ ಕಾರವಾರದ ಗೋವಿಂದರಾವ್ ಮಾಂಜ್ರೇಕರ ಕಂಪನಿಯ ಸತೀಶ ಮಾಂಜ್ರೇಕರ ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುವ ಉದ್ಯಮಿಗಳಾದ ಹುಬ್ಬಳ್ಳಿಯ ಪಾಟೀಲ ಎಲೆಕ್ಟ್ರಿಕ್ ವರ್ಕ್ಸ್‌ ಪ್ರೈ.ಲಿ.ನ ಪ್ರಸಾದ ಪಾಟೀಲ ಹಾಗೂ ಬೆಳಗಾವಿಯ ನಿರ್ನಲ್ ವಾಟರ್ ಫಿಲ್ಟರ್ಸ್‌ನ ನಿರಂಜನ ಕಾರ್ಗಿ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷರಾದ ಮಹೇಂದ್ರ ಲದ್ದಡ, ಅಶೋಕ ತೋಳನವರ, ಜಿ.ಕೆ. ಆದಪ್ಪಗೌಡರ, ಗೌರವ ಕಾರ್ಯದರ್ಶಿಗಳಾದ ವಿನಯ ಜೆ. ಜವಳಿ, ಅಶೋಕ ಗಡಾದ, ಸಂಸ್ಥಾಪಕರ ದಿನಾಚರಣೆ ಸಮಿತಿಯ ಮುಖ್ಯಸ್ಥ ಸುಭಾಸ ಬಾಗಲಕೋಟಿ, ಸಂಸ್ಥೆಯ ಹಿಂದಿನ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ಹಾಗೂ ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ ಇದ್ದರು. ಅಪರ್ಣಾ ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT