ನಿಯಮ ಜಾರಿಗೆ ಮಾರ್ಗದರ್ಶಿ ಸೂತ್ರಗಳೇ ಇಲ್ಲ!

7
ಎಂಬಿಬಿಎಸ್ ಪದವೀಧರರಿಗೆ ಕಡ್ಡಾಯ ಗ್ರಾಮೀಣ ಸೇವೆ: ಕಿಮ್ಸ್‌ನ ಒಬ್ಬ ವಿದ್ಯಾರ್ಥಿಯೂ ಸಲ್ಲಿಸಿಲ್ಲ

ನಿಯಮ ಜಾರಿಗೆ ಮಾರ್ಗದರ್ಶಿ ಸೂತ್ರಗಳೇ ಇಲ್ಲ!

Published:
Updated:

ಹುಬ್ಬಳ್ಳಿ: ಎಂಬಿಬಿಎಸ್ ಪದವೀಧರರಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿದ್ದರೂ, ಅದನ್ನು ಜಾರಿಗೊಳಿಸಲು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿಲ್ಲ. ಪರಿಣಾಮ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯ ಒಬ್ಬ ವಿದ್ಯಾರ್ಥಿಯೂ ಈವರೆಗೂ ಗ್ರಾಮೀಣ ಸೇವೆ ಸಲ್ಲಿಸಿಲ್ಲ.

ಸರ್ಕಾರಿ ಕೋಟಾದಲ್ಲಿ ಸೀಟು ಪಡೆದವರಿಗೆ ಇದು ಕಡ್ಡಾಯ. ಗ್ರಾಮೀಣ ಸೇವೆ ಸಲ್ಲಿಸಲು ಆಗದವರು ₹ 1 ಲಕ್ಷ ದಂಡ ಕಟ್ಟಿ ಪದವಿ ಪ್ರಮಾಣ ಪತ್ರ ಪಡೆಯಲು ಸಹ ಅವಕಾಶ ಇದೆ. ಆದರೆ, ದಂಡವನ್ನು ಒಬ್ಬರೂ ಕಟ್ಟಿಲ್ಲ. ‘ಗ್ರಾಮೀಣ ಸೇವೆ ಸಲ್ಲಿಸುತ್ತೇನೆ, ಇಲ್ಲವೇ ದಂಡ ಪಾವತಿಸುತ್ತೇನೆ’ ಎಂದು ಬಾಂಡ್ ಬರೆದುಕೊಟ್ಟ ನಂತರವೇ ಪ್ರವೇಶ ನೀಡಲಾಗುತ್ತದೆ. ಹೈಕೋರ್ಟ್ ಮೊರೆ ಹೋಗಿ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ.

‘ಈ ನಿಯಮದ ಬಗ್ಗೆ ಒಂದಿಷ್ಟೂ ಸ್ಪಷ್ಟತೆ ಇಲ್ಲ. ಮಾರ್ಗದರ್ಶಿ ಸೂತ್ರಗಳಂತೂ ಇಲ್ಲವೇ ಇಲ್ಲ. ಆದ್ದರಿಂದ, ಇದನ್ನು ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ವಿದ್ಯಾರ್ಥಿಯೊಬ್ಬ ಗ್ರಾಮೀಣ ಸೇವೆ ಮಾಡಲು ಸಿದ್ಧವಿರುವುದಾಗಿ ತಿಳಿಸಿದ ಎಂದರೆ ಆತನನ್ನು ಯಾವ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಬೇಕು. ವಸತಿ ವ್ಯವಸ್ಥೆ ಏನು, ಗೌರವ ಸಂಭಾವನೆ ಎಷ್ಟು ಎಂಬುದನ್ನು ಸರ್ಕಾರ ತಿಳಿಸಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗೊಳಿಸಲು ಇಚ್ಛಿಸದ ಕಿಮ್ಸ್‌ನ ಹಿರಿಯ ಅಧಿಕಾರಿಯೊಬ್ಬರು.

‘ಪಿಜಿ ಡಿಪ್ಲೊಮಾ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿ ಪಡೆದವರೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲೇಬೇಕು. ಮಾಡಲಿಲ್ಲ ಎಂದರೆ ಡಿಪ್ಲೊಮಾದವರು ₹25 ಲಕ್ಷ ಹಾಗೂ ಸ್ನಾತಕೋತ್ತರ ಕೋರ್ಸ್‌ ಮುಗಿಸಿದವರು ₹50 ಲಕ್ಷ ದಂಡ ಕಟ್ಟಬೇಕು’ ಎಂದು ಅವರು ಹೇಳುತ್ತಾರೆ.

‘ಎಂಬಿಬಿಎಸ್ ಮಾತ್ರ ಮಾಡಿದರೆ ಉನ್ನತ ಸಾಧನೆ ಮಾಡಲಾಗದು. ಆದ್ದರಿಂದ ಪ್ರತಿಯೊಬ್ಬರೂ ಸ್ನಾತಕೋತ್ತರ ಕೋರ್ಸ್ ಮಾಡಲು ಇಚ್ಛಿಸುತ್ತಾರೆ. ಇಲ್ಲಿ ಸರ್ಕಾರಿ ಸೀಟು ಗಿಟ್ಟಿಸಬೇಕಾದರೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಉತ್ತಮ ರ‍್ಯಾಂಕ್ ಗಳಿಸಬೇಕಾಗುತ್ತದೆ. ಪದವಿ ಮುಗಿಸಿದ ವರ್ಷವೇ ಪಿಜಿ ಕೋರ್ಸ್‌ಗೆ ಪ್ರವೇಶ ಸಿಗದವರು, ಮುಂದಿನ ವರ್ಷವೂ ಅದನ್ನು ಸಾಧಿಸಲು ಪ್ರಯತ್ನಿಸುತ್ತಿರುತ್ತಾರೆ. ಇಷ್ಟೊಂದು ಸ್ಪರ್ಧೆ ಇರುವಾಗ, ನೀಟ್‌ಗೆ ತಯಾರಿ ನಡೆಸುವ ಬದಲು ಗ್ರಾಮೀಣ ಸೇವೆಗೆ ಹೋಗಲು ಯಾರೂ ಇಷ್ಟಪಡುವುದಿಲ್ಲ’ ಎಂದು ಎಂಬಿಬಿಎಸ್ ವಿದ್ಯಾರ್ಥಿ ಅಮೃತ್ ಹೇಳುತ್ತಾರೆ.

ಗ್ರಾಮೀಣ ಸೇವೆ ಮಾಡುವ ಮನಸ್ಸಿದ್ದರೂ ಸೌಲಭ್ಯಗಳು ಎಲ್ಲಿವೆ ಎಂದು ಪ್ರಶ್ನಿಸುತ್ತಾರೆ ಇನ್ನೊಬ್ಬ ವಿದ್ಯಾರ್ಥಿ ಸಿದ್ಧಲಿಂಗೇಶ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಕನಿಷ್ಠ ಸೌಲಭ್ಯಗಳೂ ಇರುವುದಿಲ್ಲ. ಹೆಚ್ಚು ಕಡಿಮೆಯಾದರೆ ಜನರು ನಮ್ಮ ಮೇಲೆ ದಾಳಿ ಮಾಡುತ್ತಾರೆ ಎನ್ನುತ್ತಾರೆ ಅವರು.
ಕಿಮ್ಸ್‌ನಲ್ಲಿ ಪ್ರತಿ ವರ್ಷ 200 ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ 164 ವಿದ್ಯಾರ್ಥಿಗಳು ಪಿಜಿ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ವೈದ್ಯರ ಕೊರತೆಯನ್ನು ನೀಗಿಸಲು ಸರ್ಕಾರ ಈ ನಿಯಮ ಜಾರಿ ಮಾಡಿದೆ. ಆದರೆ, ಮಾರ್ಗದರ್ಶಿ ಸೂತ್ರ ಕೊರತೆಯಿಂದ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !