ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ನಿಲ್ದಾಣದಲ್ಲಿ ಸ್ಪೋಟ ಪ್ರಕರಣ | ‘ಅನುಮತಿಯಿಲ್ಲದೇ ಬರುವವರನ್ನು ಹೊರಹಾಕಿ’

ಸ್ಪೋಟದ ಸ್ಥಳ ಪರಿಶೀಲಿಸಿದ ಸುರೇಶ ಅಂಗಡಿ
Last Updated 26 ಅಕ್ಟೋಬರ್ 2019, 13:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈಲ್ವೆ ನಿಲ್ದಾಣಗಳಲ್ಲಿ ವ್ಯಾಪಾರ ಮಾಡಲು ಅನುಮತಿ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎನ್ನುವ ದೂರು ವ್ಯಾಪಕವಾಗಿದೆ. ಆದ್ದರಿಂದ ಅವರನ್ನು ಗುರುತಿಸಿ ನಿಲ್ದಾಣದಿಂದ ಹೊರ ಹಾಕಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇತ್ತೀಚಿಗೆ ನಿಲ್ದಾಣದಲ್ಲಿ ಸ್ಫೋಟ ನಡೆದಿದ್ದ ಜಾಗವನ್ನು ಶನಿವಾರ ಪರಿಶೀಲಿಸಿದ ಅವರು ಘಟನೆ ಬಗ್ಗೆ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌ ’ಘಟನೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದ್ದು, ವರದಿ ಬಳಿಕ ಸತ್ಯ ಗೊತ್ತಾಗಲಿದೆ. ರೈಲ್ವೆ ಸಿಬ್ಬಂದಿ ಮತ್ತು ಪೊಲೀಸರ ಜೊತೆಗೆ ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರಬೇಕು. ಅನುಮಾನಾಸ್ಟದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡುಬಂದರೆ ಕೂಡಲೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಬೇಕು‘ ಎಂದರು.

ಕಿಮ್ಸ್‌ಗೂ ಭೇಟಿ: ಸ್ಫೋಟಕ ವಸ್ತು ಪರೀಕ್ಷಿಸಲು ಹೋಗಿ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುಸೇನ್‌ ಸಾಬ್ ನಾಯಕವಾಲೆ ಅವರನ್ನು ಸುರೇಶ ಅಂಗಡಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಹುಸೇನ್‌ ಸಾಬ್‌ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಸಚಿವರು ₹50 ಸಾವಿರ ಪರಿಹಾರ ಮೊತ್ತ ನೀಡಿದರು.

ಹುಸೇನ್‌ ಸಾಬ್‌ ಅವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿ ಕುಟುಂಬದವರು ಸಚಿವರಿಗೆ ಮನವಿ ಸಲ್ಲಿಸಿದರು. ಹುಸೇನ್‌ ಅವರ ಪತ್ನಿ ರಾಬಿಯಾ ಸಚಿವರ ಕಾಲಿಗೆ ಬಿದ್ದು, ‘ಪರಿಹಾರದ ಬದಲು ಉದ್ಯೋಗ ನೀಡಿ’ ಎಂದು ಕಣ್ಣೀರು ಸುರಿಸಿ ಬೇಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಮೊದಲು ಗುಣಮುಖರಾಗಲಿ. ನಂತರ ಉದ್ಯೋಗದ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

‘ಆರ್‌ಪಿಎಫ್‌ ಪೊಲೀಸರು ಹೇಳಿದರು ಎನ್ನುವ ಕಾರಣಕ್ಕೆ ಅನುಮಾನಾಸ್ಪದ ವಸ್ತುವನ್ನು ಪರಿಶೀಲಿಸಲು ಹೋಗಿದ್ದು ಯಾಕೆ? ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆದರೆ, ನೀವು ಕಳೆದುಕೊಂಡ ಕೈಗೆ ಪರಿಹಾರವೇನು? ನಿಮ್ಮನ್ನು ನಂಬಿಕೊಂಡ ಕುಟುಂಬದ ಕಥೆಯೇನು?’ ಎಂದು ಹುಸೇನ್‌ ಅವರನ್ನು ಅಂಗಡಿ ಪ್ರಶ್ನಿಸಿದರು.

'ಹುಸೇನ್‌ ಅವರ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅನುಮಾನಾಸ್ಪದ ವಸ್ತುವನ್ನು ಪರೀಕ್ಷಿಸಿದ್ದು ತಪ್ಪು' ಎಂದು ಅಭಿಪ್ರಾಯಪಟ್ಟರು.

'ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ತಮ್ಮ ಅಧಿಕಾರದಿಂದ ಗಾಯಾಳುಗೆ ₹50 ಸಾವಿರ ಪರಿಹಾರ ನೀಡಿದ್ದಾರೆ. ಉದ್ಯೋಗ ನೀಡುವ ಕುರಿತು ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗುವುದು' ಎಂದರು.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್, ಡಿಜಿಎಂ ಇ. ವಿಜಯಾ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಅರುಣಕುಮಾರ ಸಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT