ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ:' ನವೋದ್ಯಮಿಗೆ ಸಮಸ್ಯೆಗಳೇ ಯಶಸ್ಸಿನ ಮೆಟ್ಟಿಲು'

‘ಸ್ಟಾರ್ಟ್‌ಅ‍‍ಪ್ ಗ್ರ್ಯಾವಿಟಿ’ ಸಮಾವೇಶ: ಇನ್ಫೊಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಅಭಿಪ್ರಾಯ
Last Updated 4 ಫೆಬ್ರುವರಿ 2023, 6:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜೀವನ ನಿರಂತರ ಹೋರಾಟವಿದ್ದಂತೆ. ಎಲ್ಲರೂ ಸಮಸ್ಯೆಗಳ ವಿರುದ್ಧ ಹೋರಾಡುತ್ತಲೇ ಇರುತ್ತಾರೆ. ಪ್ರತಿ ಸಮಸ್ಯೆ ನಮ್ಮ ಸಾಮರ್ಥ್ಯವನ್ನು ತೋರಿಸಲು ದೇವರು ಕೊಟ್ಟಿರುವ ಅವಕಾಶ ಎಂದು ಭಾವಿಸಿ, ಹೊಸ ಆಲೋಚನೆಯೊಂದಿಗೆ ಎದುರಿಸಬೇಕು. ಆಗ ಸಮಸ್ಯೆಗಳೇ ಯಶಸ್ಸಿನ ಮೆಟ್ಟಿಲುಗಳಾಗುತ್ತಾ ಹೋಗುತ್ತವೆ’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.

ಗೋಕುಲ ರಸ್ತೆಯಲ್ಲಿರುವ ದೇಶಪಾಂಡೆ ಫೌಂಡೇಷನ್‌ ಕೇಂದ್ರದಲ್ಲಿ ಯುವ ಉದ್ಯಮಿಗಳಿಗಾಗಿ ಶುಕ್ರವಾರ ಆಯೋಜಿಸಿದ್ದ ‘ಸ್ಟಾರ್ಟ್‌ಅ‍‍ಪ್ ಗ್ರ್ಯಾವಿಟಿ’ ಸಮಾವೇಶದಲ್ಲಿ ಮಾತನಾಡಿ, ಇನ್ಫೊಸಿಸ್ ಆರಂಭದ ದಿನಗಳ ಅನುಭವವನ್ನು ಹಂಚಿಕೊಳ್ಳುತ್ತಲೇ ಯುವ ಉದ್ಯಮಿಗಳಿಗೆ ಸ್ಫೂರ್ತಿ ತುಂಬಿದರು.

‘ನಾವು ಸಾಫ್ಟ್ರಾನಿಕ್ಸ್‌ ಆರಂಭಿಸಿದಾಗ, ಇತರ 13 ಕಂಪನಿಗಳು ಸಹಆರಂಭವಾಗಿದ್ದವು. ಹಲವು ಸಮಸ್ಯೆಗಳನ್ನು ಎದುರಿಸಿ ಹಂತಹಂತವಾಗಿ ಮೇಲಕ್ಕೆ ಬಂದು 1981ರ ಹೊತ್ತಿಗೆ ಇನ್ಫೊಸಿಸ್‌ ಸ್ಥಾಪಿಸಿದಾಗ, ನಮ್ಮ ಕಂಪನಿ ಬಿಟ್ಟರೆ ಉಳಿದವು ಇರಲೇ ಇಲ್ಲ. ತಂಡದ ಸತತ ಪರಿಶ್ರಮ ಮತ್ತು ತ್ಯಾಗದಿಂದಾಗಿ ಮಾರುಕಟ್ಟೆಯಲ್ಲಿ ನಾವು ಲೀಡರ್ ಆದೆವು’ ಎಂದು ಮೆಲುಕು ಹಾಕಿದರು.

‘ಯಾವುದೇ ಸಮಸ್ಯೆ ಎದುರಾದಾಗ, ದತ್ತಾಂಶ ಮತ್ತು ವಾಸ್ತವ ಗಮನಿಸಿ ನಿರ್ಧಾರ ಕೈಗೊಳ್ಳಬೇಕು. ಉದ್ಯಮಕ್ಕೆ ಪೂರಕವಾಗಿರುವ ಸಂಘ–ಸಂಸ್ಥೆಗಳ ಸದಸ್ಯರಾಗಬೇಕು. ಕೆಲ ಸಮಸ್ಯೆಗಳನ್ನು ಎಲ್ಲರೂ ಒಗ್ಗೂಡಿ ಸುಲಭವಾಗಿ ನಿವಾರಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಎನ್‌.ಸಿ. ಮೂರ್ತಿ ಆಹಾರ್ ಅವಿನ್ಯೂ ಫುಡ್ ಟೆಕ್ ಇನ್ನೊವೇಷನ್ ಸೆಂಟರ್ ಅನ್ನು ನಾರಾಯಣಮೂರ್ತಿ ಉದ್ಘಾಟಿಸಿದರು.

ನವೋದ್ಯಮಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅಮೆರಿಕದ ಡಾ.‌ಎನ್.ಸಿ. ಮೂರ್ತಿ ಮತ್ತು ಡಾ. ಜೀವನಾ, ಜಯಶ್ರೀ ದೇಶಪಾಂಡೆ ಇದ್ದರು.

‘ನವೋದ್ಯಮಗಳಿಗೆ ಸದಾವಕಾಶ’

‘ಕೋವಿಡ್‌ ನಂತರ ದೇಶದಲ್ಲಿ ನವೋದ್ಯಮಗಳ (ಸ್ಟಾರ್ಟ್‌ಅಪ್‌) ಉಗಮಕ್ಕೆ ಅವಕಾಶಗಳ ದೊಡ್ಡ ಬಾಗಿಲು ತೆರೆದಿದೆ. ಆತ್ಮನಿರ್ಭರ ಭಾರತ್ ಯೋಜನೆಯಡಿ, ಸರ್ಕಾರ ಸಹ ಹೆಚ್ಚಿನ ಉತ್ತೇಜನ ನೀಡುತ್ತಿದೆ’ ಎಂದು ದೇಶಪಾಂಡೆ ಫೌಂಡೇಷನ್‌ನ ಸಹ ಸಂಸ್ಥಾಪಕ ಡಾ. ಗುರುರಾಜ್ ದೇಶಪಾಂಡೆ ಅಭಿಪ್ರಾಯಪಟ್ಟರು.

ಸಮಾವೇಶವನ್ನು ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಬೆಳವಣಿಗೆಯು ದೇಶವು ಎಲೆಕ್ಟ್ರಾನಿಕ್ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳಿಗಾಗಿ ಚೀನಾ ಸೇರಿದಂತೆ ಇತರ ದೇಶಗಳ ಮೇಲಿನ ಅವಲಂಬನೆಯನ್ನು ನಿಧಾನವಾಗಿ ತಗ್ಗಿಸಲು ನೆರವಾಗಿದೆ’ ಎಂದರು.

ಉದ್ಯಮಶೀಲತೆ ಬೆಳೆಯಲಿ: ‘ಉಕ್ರೇನ್ ಯುದ್ಧದ ಬಳಿಕ, ಆಹಾರ ಉತ್ಪನ್ನಗಳಿಗಾಗಿ ವಿಶ್ವವು ಭಾರತದತ್ತ ದೃಷ್ಟಿ ಹಾಯಿಸುತ್ತಿದೆ. ಪ್ರಪಂಚಕ್ಕೆ ಆಹಾರ ಪೂರೈಸುವ ಸಾಮರ್ಥ್ಯ ದೇಶಕ್ಕಿದ್ದು, ವೈವಿಧ್ಯಮಯ ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸಬೇಕಿದೆ. ಮಾರುಕಟ್ಟೆ ಜೊತೆಗೆ, ಉತ್ತಮ ಬೆಲೆ ಒದಗಿಸಬೇಕಿದೆ. ಕೃಷಿಕರಲ್ಲಿ ಉದ್ಯಮಶೀಲತೆ ಬೆಳೆಸಬೇಕಿದೆ. ಈ ದಿಸೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳು ಬರುತ್ತಿರುವುದು ಸಕಾರಾತ್ಮಕ ಬೆಳವಣಿಗೆ’ ಎಂದು ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ದೇಶಪಾಂಡೆ ಹೇಳಿದರು.

ದೇಶಪಾಂಡೆ ಸ್ಟಾರ್ಟ್‌ಅಪ್ ಸಿಇಒ ಅರವಿಂದ ಚಿಂಚೋರೆ, ‘ಹೊಸ ಉತ್ಪನ್ನಗಳು ಹಾಗೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಸ್ಟಾರ್ಟ್‌ಅಪ್‌ಗಳ ಪಾತ್ರ ಮಹತ್ತರವಾದುದು. ಉದ್ಯಮ ಸ್ಥಾಪನೆಗೆ ಅಗತ್ಯ ಮಾಹಿತಿ ಮತ್ತು ಪೂರಕ ವ್ಯವಸ್ಥೆಯನ್ನು ಒದಗಿಸುವ ಕೆಲಸವನ್ನು ಫೌಂಡೇಷನ್ ಮಾಡುತ್ತಿದೆ’ ಎಂದರು.

ಯಶಸ್ವಿ ನವೋದ್ಯಮಿಗಳೊಂದಿಗೆ ಚರ್ಚೆ ಹಾಗೂ ಸಂವಾದ ನಡೆಯಿತು. ವಿವಿಧ ಕ್ಷೇತ್ರಗಳ ನವೋದ್ಯಮಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT