ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮನೂರು: ಭಾವೈಕ್ಯ ಕೇಂದ್ರದಲ್ಲಿ ಜಾತ್ರೆ

ಉತ್ತರ ಕರ್ನಾಟಕದ ಭಕ್ತರ ಆರಾಧ್ಯ ಕ್ಷೇತ್ರ
Last Updated 20 ಮಾರ್ಚ್ 2022, 6:20 IST
ಅಕ್ಷರ ಗಾತ್ರ

ನವಲಗುಂದ: ಉತ್ತರ ಕರ್ನಾಟಕದಲ್ಲಿ ಎಲ್ಲಾ ಸಮುದಾಯಗಳ ಭಕ್ತರನ್ನು ಒಳಗೊಂಡ ತಾಲ್ಲೂಕಿನ ಯಮನೂರಿನ ಚಾಂಗದೇವ ಮಹಾರಾಜರ ಕ್ಷೇತ್ರ ಈಗ ಆಕರ್ಷಣೆಯ ಕೇಂದ್ರ ಬಿಂದು ಆಗಿದೆ.

ಪೂಜಾರಿಗಳಿಂದ ಪೂಜೆ, ಪೀರಾಗಳಿಂದ ಓದಿಕೆ (ಫಾತೀಹಾ) ಏಕಕಾಲಕ್ಕೆ ನಡೆಯುವುದರಿಂದ ಈ ಕ್ಷೇತ್ರ ಹಿಂದೂ–ಮುಸ್ಲಿಮರ ಭಾವೈಕ್ಯ ತಾಣವಾಗಿದೆ. ಲಕ್ಷಾಂತರ ಭಕ್ತರು ಬೆಣ್ಣಿಹಳ್ಳದ ದಡದ ನೀರಿನಲ್ಲಿ ಮಿಂದೆದ್ದು ದೇವರ ದರ್ಶನ ಪಡೆಯುತ್ತಾರೆ.

ಯಮನೂರ ಚಾಂಗದೇವರ (ರಾಜಭಾಗಸವಾರ) ಸಂದಲ್‌ (21ಕ್ಕೆ) ಹಾಗೂ 22ರಂದು ಉರುಸ್‌ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಗಂದಾಭಿಷೇಕ ಜರುಗಲಿದೆ. ಬರ್ಗೆ ಮನೆತನದ ಸಂತರು ಚಾಂಗದೇವರ ದರ್ಗಾದಿಂದ ಬೆಣ್ಣಿಹಳ್ಳದವರೆಗೆ ಪಾದಯಾತ್ರೆ ಮಾಡಿ ಬೆಣ್ಣಿಹಳ್ಳದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ನೀರು ತಂದು ದೀಪ ಹಚ್ಚುವುದು ವಿಶೇಷ.

ಒಂದು ತಿಂಗಳ ಕಾಲ ಡೊಡ್ಡ ಮಟ್ಟದಲ್ಲಿ ನಡೆಯುವ ಜಾತ್ರೆಗೆ ಜೋರಾಗಿ ತಯಾರಿಯಾಗಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜಾತಿ, ಧರ್ಮದ ಬೇಧವಿಲ್ಲದ ರಾಜ್ಯ ಹಾಗೂ ಹೊರರಾಜ್ಯಗಳ ಜನ ಬರುತ್ತಾರೆ.

ಇಲ್ಲಿ ನೆಲೆ ಊರಿರುವ ಜಾಂಗದೇವರ ಇತಿಹಾಸವೂ ಆಸಕ್ತಿ ಮೂಡಿಸುವಂತದ್ದು. ಈ ಕ್ಷೇತ್ರದ ಆದಿದೈವ ಮಹಾರಾಷ್ಟದ ಸಂತ ಪರಂಪರೆಯ ಮಹಾತಪಸ್ವಿ ಮಹಾರಾಜರು 1400 ವರ್ಷಗಳ ಕಾಲ ಬದುಕಿದ್ದರು ಎನ್ನುವ ನಂಬಿಕೆಯಿದೆ. ಆಗ ವಿಠೋಬಾ ದೇವರು ಸ್ವಪ್ನದಲ್ಲಿ ಬಂದು ‘ಕಾಲಹರಣಕ್ಕೆ ಯಾಕೆ ಮಾರು ಹೋಗಿದ್ದೀಯಾ’ ಎಂದು ಕೇಳಿ ಸಂದೇಶ ನೀಡಿದ್ದರಂತೆ. ಆಗ ಸಂತ ದೇವರ ದೀಕ್ಷೆ ಪಡೆದು ಧರ್ಮ ಪರಿಪಾಲನೆಗೆ ಮುಂದಾಗಿದ್ದರು ಎನ್ನುವ ಪ್ರತೀತಿ ಇದೆ.

ಚಾಂಗದೇವರು ಶಿಷ್ಯರೊಂದಿಗೆ ಯಮನೂರ ಗ್ರಾಮಕ್ಕೆ ಆಗಮಿಸಿ ಅಲ್ಲಿ ನರಸಿಂಹ ಸಾಲಿಗ್ರಾಮ ಪ್ರತಿಷ್ಠಾಪಿಸಿದ್ದರು. ಗುರುವಿನ ಆಜ್ಞೆಯಂತೆ ಅವರ ಶಿಷ್ಯ ಕ್ಷೇತ್ರೋಜಿರಾವ ಭರ್ಗೆ ಸಾಲಿಗ್ರಾಮಕ್ಕೆ ತನ್ನ ಬೆರಳಿನ ಐದು ಹನಿ ರಕ್ತದಿಂದ ಪೂಜೆಸುತ್ತಿದ್ದ ಸಾಲಿಗ್ರಾಮಕ್ಕೆ ಮುಂದಿನ ಪೀಳಿಗೆ ರಕ್ತದಿಂದ ಪೂಜೆ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಸಾಲಿಗ್ರಾಮವನ್ನು ಮುಚ್ಚಿಸಿ ಗದ್ದುಗೆ ರೂಪ ನೀಡಿದ್ದರು ಎನ್ನುವ ಚರಿತ್ರೆಯಿದೆ. ‌ಅಂದಿನಿಂದ ಇಂದಿನವರೆಗೂ ಬರ್ಗೆ ಮನೆತನದವರೆ ಈ ಕ್ಷೇತ್ರದ ಅರ್ಚಕರು ಎಂದು ಹೇಳಲಾಗುತ್ತಿದೆ.

ವ್ಯವಸ್ಥೆ: ಜಾತ್ರೆಗೆ ಬರುವ ಭಕ್ತರಿಗೆ ಗ್ರಾಮ ಪಂಚಾಯ್ತಿ ಸೌಲಭ್ಯಗಳನ್ನು ಕಲ್ಪಿಸಿದೆ. ಐದು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬೆಣ್ಣೆಹಳ್ಳದಿಂದ ಬರುವ ಮಾರ್ಗ ಮಧ್ಯ ಹಾಗೂ ಗ್ರಾಮದ ಹೊರವಲಯದಲ್ಲಿ ಕೊಳವೆ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪೊಲೀಸ್ ಚೌಕಿ ವ್ಯವಸ್ಥೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT