ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪ್ರತಿಭಟನಾಕಾರರಿಗಿಂತ ಪೊಲೀಸರೇ ಹೆಚ್ಚು ಸಂಖ್ಯೆಯಲ್ಲಿ ಜಮಾವಣೆ

ರೈಲ್‌ ರೋಕೊ ಮಾಡದೇ ವಾಪಸ್‌
Last Updated 18 ಫೆಬ್ರುವರಿ 2021, 9:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕೃಷಿ, ಎಪಿಎಂಸಿ ಮತ್ತು ಅಗತ್ಯ ವಸ್ತುಗಳ ಸಂಗ್ರಹ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ನಗರದ ರೈಲು ನಿಲ್ದಾಣದಲ್ಲಿ ಗುರುವಾರ ನಡೆಸಲು ಉದ್ದೇಶಿಸಿದ್ದ ರೈಲ್‌ ರೋಕೊಗೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದಾಗಿ ಸಮಿತಿಯ ಪದಾಧಿಕಾರಿಗಳು ರೈಲು ನಿಲ್ದಾಣದ ಮುಂದೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ವಾಪಸ್‌ ಹೋದರು.

ರೈಲು ನಿಲ್ದಾಣದ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. ಈ ಕಾಯ್ದೆಗಳನ್ನು ವಿರೋಧಿಸಿ ರೈತರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟಿಸಿದರೂ ಆ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲ. ದೆಹಲಿ ಗಡಿಯಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಬಳಿಕ ರೈಲು ನಿಲ್ದಾಣದ ಒಳಗೆ ನುಗ್ಗಲು ಪ್ರಯತ್ನಿಸಿದರಾದರೂ, ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರು ಅವರನ್ನು ನಿಲ್ದಾಣ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಮೊದಲೇ ಬ್ಯಾರಿಕೇಡ್‌ಗಳನ್ನು ಹಾಕಿ ನಿಲ್ದಾಣದ ಹೊರಭಾಗ ಹಾಗೂ ಒಳಭಾಗದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬ್ಯಾರಿಕೇಡ್‌ ಸಮೀಪ ಬಂದವರನ್ನು ತಳ್ಳಿಕೊಂಡು ಪೊಲೀಸರು ನಿಲ್ದಾಣದ ಮುಂಭಾಗದಿಂದ ಹೊರಗಡೆ ಕರೆದುಕೊಂಡು ಬಂದರು.

ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೊಲೀಸರ ಮೂಲಕ ರೈತರ ಹಾಗೂ ವಿವಿಧ ಸಂಘಟನೆಗಳ ಹೋರಾಟಗಳನ್ನು ಹತ್ತಿಕ್ಕುವ ಕೆಲಸಗಳನ್ನು ಮಾಡುತ್ತಿದೆ. ಸರ್ಕಾರ ಏನೇ ತಂತ್ರ ಮಾಡಿದರೂ ನಮ್ಮ ಹೋರಾಟ ನಿರಂತರ ಎಂದರು.

ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ, ಉಪಾಧ್ಯಕ್ಷ ಬಾಬಾಜಾನ್‌ ಮುಧೋಳ, ಪ್ರಮುಖರಾದ ಬಿ.ಎ. ಮುಧೋಳ, ಎ.ಎಸ್‌.ಫಿರ್ಜಾದೆ, ರಮೇಶ ಬೋಸ್ಲೆ, ಸಾಜೀದ್‌ ಹಾಲಭಾವಿ, ಎಂ.ಎ. ಮುಲ್ಲಾ, ಆಂಜನೇಯ ಪೂಜಾರ, ಕಿರಣ ಬಳ್ಳಾರಿ, ಸಂದೀಪ ರೆಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT