ಶನಿವಾರ, ಸೆಪ್ಟೆಂಬರ್ 26, 2020
23 °C
ಸ್ವಾತಂತ್ರ್ಯೋತ್ಸವ ದಿನ ಆಚರಣೆಗೆ ನಗರದಲ್ಲಿ ಸಿದ್ಧತೆ

ಸ್ವಾತಂತ್ರ್ಯ ಯೋಧರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಶುಕ್ರವಾರ ಸಿದ್ಧತೆ ನಡೆದಿತ್ತು. ತಾಲ್ಲೂಕು ಆಡಳಿತದಿಂದ ಒಂದು ದಿನ ಮೊದಲೇ ನಗರದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.

ಸಾಯಿನಗರದ ಟೀಚರ್ಸ್‌ ಕಾಲೊನಿಯಲ್ಲಿರುವ 99 ವರ್ಷದ ಶ್ರೀರಾಮ್ ವಿಷ್ಣು ಪಂತ್ ತೆಂಬೆ ಮತ್ತು ದೇವಾಂಗಪೇಟೆಯ ಗೋಲ್ಡನ್‌ ಪಾರ್ಕ್‌ನಲ್ಲಿರುವ 91 ವರ್ಷದ ಕೆ.ಜಿ. ಕುಲಕರ್ಣಿ ಅವರನ್ನು ತಾಲ್ಲೂಕು ಆಡಳಿತದ ಪ್ರಮುಖ ಅಧಿಕಾರಿಗಳು ಖುದ್ದು ಅವರ ಮನೆಗೆ ಹೋಗಿ ಸನ್ಮಾನಿಸಿದರು. ಸಾಮಾನ್ಯವಾಗಿ ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿತ್ತು. ಕೋವಿಡ್ ಕಾರಣದಿಂದ ಈ ಬಾರಿ ಮನೆಗೆ ಹೋಗಿ ಸನ್ಮಾನಿಸಲಾಯಿತು ಎಂದು ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದರು.

ತಿರಂಗದ ರಂಗು: ಶುಕ್ರವಾರ ನಗರದ ಹಲವು ಕಡೆ ತಿರಂಗದ ರಂಗು ಕಂಡು ಬಂದಿತು. ಹಳೇ ಬಸ್‌ ನಿಲ್ದಾಣ, ದುರ್ಗದ ಬೈಲ್‌, ಕಿತ್ತೂರುರಾಣಿ ಚನ್ನಮ್ಮ ವೃತ್ತ ಹೀಗೆ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರಧ್ವಜ ವ್ಯಾಪಾರದ ಭರಾಟೆ ಜೋರಾಗಿತ್ತು. ಅನೇಕ ಆಟೊ ಚಾಲಕರು ಧ್ವಜಗಳನ್ನು ಖರೀದಿಸಿ ಆಟೊ ಮುಂಭಾಗದಲ್ಲಿ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ ಚಿತ್ರಣ ಕಂಡುಬಂತು.

ಧ್ವಜಾರೋಹಣಕ್ಕಾಗಿ ಈದ್ಗಾ ಮೈದಾನ, ಮಹಾನಗರ ಪಾಲಿಕೆ ಕಚೇರಿ, ಮಿನಿವಿಧಾನ ಸೌಧ, ನೆಹರೂ ಕ್ರೀಡಾಂಗಣ ಮತ್ತು ವಿವಿಧ ಸರ್ಕಾರಿ ಕಚೇರಿಗಳ ಮುಂದೆ ತಯಾರಿ ನಡೆದಿತ್ತು. ನಿರಂತರ ಮಳೆಯಿಂದ ನೆಹರೂ ಮೈದಾನದಲ್ಲಿ ಬೆಳೆದಿರುವ ಕಸವನ್ನು ಎರಡು ದಿನಗಳಿಂದ ತೆಗೆಯಲಾಗಿದೆ. ಪ್ರತಿ ವರ್ಷ ವಿವಿಧ ಶಾಲಾ, ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿದ ಬಳಿಕ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಈ ಬಾರಿ ಸರ್ಕಾರಿ ನೌಕರರಿಗಷ್ಟೇ ಆಹ್ವಾನ ನೀಡಲಾಗಿದೆ.

ಸಂಸ್ಕಾರ ಇಂಗ್ಲಿಷ್‌ ಮಾಧ್ಯಮ ಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು