ಶುಕ್ರವಾರ, ಏಪ್ರಿಲ್ 16, 2021
23 °C
ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ: ರಂಗೋಲಿ ಬಿಡಿಸಿ ಸಂಭ್ರಮಿಸಿದ ಮಹಿಳೆಯರು

ಮನಸೂರೆಗೊಂಡ ‘ಹಬ್ಬ’ದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಓಣಿಯ ತುಂಬೆಲ್ಲಾ ಬಣ್ಣಬಣ್ಣದ ರಂಗವಲ್ಲಿ, ಕಣ್ಣು ಹಾಯಿಸಿದಷ್ಟೂ ದೂರ ಕಣ್ಮನ ಸೆಳೆಯುವ ಚಿತ್ತಾರ, ಹಬ್ಬದಂತೆ ಅಲ್ಲಿಯ ಪ್ರತಿಯೊಂದು ಓಣಿಯ ಇಕ್ಕೆಲಗಳಲ್ಲಿಯೂ ಆಕಾಶ ಬುಟ್ಟಿ ಸಾಲು ಸಾಲಾಗಿ ತೂಗಾಡುತ್ತಿದ್ದವು.

ನಗರದ ಕಮರಿಪೇಟೆಯ ಸುತ್ತಮುತ್ತಲಿನ 32 ಓಣಿಗಳಲ್ಲಿ ಭಾನುವಾರ ಕಂಡು ಬಂದ ಸುಂದರ ಚಿತ್ರಣಗಳಿವು. ದೀಪಾವಳಿ ಮತ್ತು ಕಾರ್ತಿಕ ಮಾಸದ ಅಂಗವಾಗಿ ಅಲ್ಲಿಯ ಯುವಕರು ‘ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ’ ಹಮ್ಮಿಕೊಂಡಿದ್ದರು. ಹಬ್ಬದ ಅಂಗವಾಗಿ ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಕೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬೆಳಿಗ್ಗೆಯಿಂದಲೇ ಮಕ್ಕಳು ಬಣ್ಣ ಬಣ್ಣದ ನಕ್ಷತ್ರ, ದೀಪ, ಚೌಕಾಕಾರ ಸೇರಿದಂತೆ ವಿವಿಧ ಬಗೆಯ ಆಕಾಶ ಬುಟ್ಟಿಗಳನ್ನು ತಯಾರಿಸಿದರು. ಸ್ಪರ್ಧೆಯಲ್ಲಿ ಒಟ್ಟು 35 ಮಕ್ಕಳು ಪಾಲ್ಗೊಂಡಿದ್ದರು. ನಂತರ ತಾವು ತಯಾರಿಸಿ ಆಕಾಶ ಬುಟ್ಟಿಗಳನ್ನು ಕಮರೆಮ್ಮ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಮನೆಯ ಎದುರಿನ ರಸ್ತೆಯನ್ನೇ ಅಂಗಳವನ್ನಾಗಿ ಮಾಡಿಕೊಂಡು, ರಂಗೋಲಿ ಬಿಡಿಸಿದರು. ಸಹಸ್ರಾರ್ಜುನ ಮಹಾರಾಜ, ರಂಗೋಲಿ ಎದುರು ದೀಪ ಹಿಡಿದು ಕುಳಿತ ಗೃಹಿಣಿ, ಆಕಾಶ ಬುಟ್ಟಿ ತಯಾರಿಸುತ್ತಿರುವ ಮಕ್ಕಳು, ಮಹಾ ಪುರುಷರು, ಶ್ರೀಕೃಷ್ಣ, ರಾಷ್ಟ್ರಧ್ವಜ, ಚುಕ್ಕಿ ರಂಗೋಲಿ ಸೇರಿದಂತೆ ಬಗೆ ಬಗೆಯ ರಂಗೋಲಿಗಳು ಜನರನ್ನು ಆಕರ್ಷಿಸಿದವು.

ಒಂದೊಂದು ಓಣಿಗೆ ನಾಲ್ಕು ಬಹುಮಾನ ನಿಗದಿಪಡಿಸಲಾಗಿತ್ತು. ಸಂಜೆ ಜೈ ಭಾರತ್‌ ವೃತ್ತದಲ್ಲಿ ನಡೆದ ಆಕಾಶಬುಟ್ಟಿ ಹಬ್ಬ ಉದ್ಘಾಟನೆ ಸಮಾರಂಭದಲ್ಲಿ ಅವರಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ‘ದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಹೋಳಿ, ಜಗ್ಗಲಗಿ, ಆಕಾಶ ಬುಟ್ಟಿ ಹಬ್ಬಗಳು ಪ್ರತಿವರ್ಷವೂ ನಡೆಯಬೇಕು. ಆ ಮೂಲಕ ನಾಡಿನ ಸಂಸ್ಕೃತಿಯನ್ನು ಮುಂಬರುವ ಪೀಳಿಗೆಗೂ ಕೊಂಡೊಯ್ಯಬೇಕು’ ಎಂದರು.

ನಂತರ ಓಣಿಯ ಯುವಕರು, ಮಹಿಳೆಯರು, ಮಕ್ಕಳು ಆಕಾಶ ಬುಟ್ಟಿಗಳನ್ನು ಬಾನಂಗಳಕ್ಕೆ ಹಾರಿಸಿ ಸಂಭ್ರಮಿಸಿದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಆಕಾಶಬುಟ್ಟಿ ಹಬ್ಬದ ಅಧ್ಯಕ್ಷ ರಾಜು ಜರತಾರಘರ, ಎಸ್‌ಎಸ್‌ಕೆ ಸಮಾಜದ ಮುಖ್ಯಸ್ಥ ನೀಲಕಂಠಸಾ ಜಡಿ, ವಿಠ್ಠಲ ಲದವಾ, ರಂಗಾ ಬದ್ದಿ, ವಿನಾಯಕ ಲದ್ವಾ, ಚಂದ್ರಶೇಖರ ಗೋಕಾಕ, ಪ್ರಭು ನವಲಗುಂದಮಠ, ಡಿ.ಕೆ. ಚವ್ಹಾಣ, ಮಂಜು ದಲಬಂಜನ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು