ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಹುದ್ದೆ ತುಂಬಿ, ಖಾಸಗೀಕರಣ ನಿಲ್ಲಿಸಿ

ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಡಿಕ್ರೂಜ್ ಆಗ್ರಹ
Last Updated 17 ಡಿಸೆಂಬರ್ 2022, 4:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನೈರುತ್ಯ ರೈಲ್ವೆ ವಲಯ ಸೇರಿದಂತೆ ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಹೊಸ ಪಿಂಚಣಿ ಬದಲು ಹಳೆ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು. ರೈಲ್ವೆಯ ಖಾಸಗೀಕರಣ ನಿಲ್ಲಿಸಬೇಕು’ ಎಂದು ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಜ್ ಆಗ್ರಹಿಸಿದರು.

ನಗರದ ಗದಗ ರಸ್ತೆಯಲ್ಲಿರುವ ಯೂನಿಯನ್ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಭಾಗೀಯ ಸಮಿತಿ ಸಭೆ ಹಾಗೂ ಮೆರವಣಿಗೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇತನ ಆಯೋಗದ ಶಿಫಾರಸುಗಳನ್ನು ರದ್ದು ಮಾಡಬೇಕು. ರದ್ದುಪಡಿಸಿರುವ ಎಲ್ಲಾ ಭತ್ಯೆಗಳನ್ನು ಮರುಸೇರ್ಪಡೆ ಮಾಡಿ ವೇತನ ನೀಡಬೇಕು. ಫೆಬ್ರುವರಿಯೊಳಗೆ ಈ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೋವಿಡ್–19 ಸಂದರ್ಭದಲ್ಲಿ ಜೀವ ಲೆಕ್ಕಿಸದ ಕೆಲಸ ಮಾಡಿದ ಸಿಬ್ಬಂದಿಗೆ, ಸೇವಾ ವೇತನ ನೀಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಪ್ರಯಾಣಿಕರ ರೈಲು ಸ್ಥಗಿತಗೊಂಡಿದ್ದರಿಂದ ಸಿಬ್ಬಂದಿಗೆ ಡಿ.ಎ ನಿಲ್ಲಿಸಲಾಗಿತ್ತು. ಆದರೆ, ಸರಕು ಸಾಗಣೆ ರೈಲುಗಳನ್ನು ಓಡಿಸಿ ಆದಾಯ ತಂದು ಕೊಟ್ಟಿದ್ದೇವೆ. ಇದನ್ನು ನೈರುತ್ಯ ರೈಲ್ವೆ ಮರೆತಿದೆ. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈಲ್ವೆಯನ್ನು ಖಾಸಗೀಕರಣ ಮಾಡುವುದಿಲ್ಲ ಎನ್ನುವ ಸರ್ಕಾರ, ಹಿಂಬಾಗಿಲಿನಿಂದ ಹಂತ ಹಂತವಾಗಿ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಖಾಸಗಿ ತೆಕ್ಕೆಗೆ ರೈಲ್ವೆಯನ್ನು ಕೊಡಬಾರದು. ಸರ್ಕಾರದ ಈ ನಡೆ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದರು.

ಮೆರವಣಿಗೆ: ವಿಭಾಗೀಯ ಸಮಿತಿ ಸಭೆ ಅಂಗವಾಗಿ, ಯೂನಿಯನ್‌ ಕಚೇರಿಯಿಂದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ರೈಲ್ವೆಯ ನೂರಾರು ನೌಕರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯೂನಿಯನ್ ಅಧ್ಯಕ್ಷ ಅಶೋಕ ಕುಮಾರ, ಖಜಾಂಚಿ ವಿ.ಇ. ಚಾರ್ಕಾನಿ, ಆರ್ಥರ್ ಫರ್ನಾಂಡಿಸ್, ಜಯಲಕ್ಷ್ಮಿ, ಆಂಟನಿ ಜೆನಿ ಡಿಕ್ರೂಜ್, ಸಿ. ಮುರುಗನ್, ವೆಂಕಟೇಶ, ಶಿವಕುಮಾರ್, ವೆಂಕಟೇಶ ನಾಯ್ಕ, ಪ್ರವೀಣ ಪಾಟೀಲ, ಜಾಕಿರ್ ಸನದಿ, ಆರ್. ಕುಮಾರವೇಲನ್, ಸತೀಶ್ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT