ಶನಿವಾರ, ಮೇ 28, 2022
30 °C
ಮತ್ತಿಗಟ್ಟಿ: 72 ದೇಸಿ ರಾಗಿ ಕ್ಷೇತ್ರೋತ್ಸವ

ದೇಸಿ ರಾಗಿ ಕ್ಷೇತ್ರೋತ್ಸವ- ‘ಸಿರಿಧಾನ್ಯ ಕೃಷಿಯಿಂದ ಆರ್ಥಿಕ ಭದ್ರತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ಸಿರಿಧಾನ್ಯ ಕೃಷಿ ಸೂಕ್ತ ಪರಿಹಾರವಾಗಿದ್ದು, ಕಡಿಮೆ ವೆಚ್ಚದ ಈ ಬೇಸಾಯದಿಂದ ರೈತರು ಆರ್ಥಿಕ ಭದ್ರತೆ ಹೊಂದಬಹುದು ಎಂದು ಹೈದರಾಬಾದ್‌ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ (ಐಐಎಂಆರ್) ವಿಜ್ಞಾನಿ ಡಾ. ಸೂಗಣ್ಣ ಸಲಹೆ ನೀಡಿದರು.

ಸಹಜ ಸಮೃದ್ಧ, ಐಐಎಂಆರ್ ಹಾಗೂ ಮಳೆಬೇಸಾಯ ಪುನಶ್ಚೇತನ ವೇದಿಕೆ ಸಹಯೋಗದಲ್ಲಿ ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿಯ ಈಶ್ವರಗೌಡ ಪಾಟೀಲ ಹೊಲದಲ್ಲಿ ನಡೆದ 72 ದೇಸಿ ತಳಿ ರಾಗಿ ವೈವಿಧ್ಯ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು ಈಗ ಸುಧಾರಿತ ಹಾಗೂ ಹೈಬ್ರಿಡ್ ತಳಿಗಳನ್ನು ಬೆಳೆಯುತ್ತಿದ್ದಾರೆ. ಇದರ ಜತೆಗೆ ದೇಸಿ ತಳಿಗಳನ್ನು ಸಹ ಬೆಳೆಯಬೇಕು. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವ ಜವಾರಿ ತಳಿಗಳು, ನಮ್ಮ ಕೃಷಿ ವೈವಿಧ್ಯದ ಸಂಕೇತ’ ಎಂದರು.

ಹಾವೇರಿ ಜಿಲ್ಲೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಶೋಕ್ ಪಿ., ‘ಸಾವಯವ ಕೃಷಿಯಲ್ಲಿ ಅನುಭವ ಪಡೆದಿರುವ ಈಶ್ವರಗೌಡ ಪಾಟೀಲರು ಒಂದೇ ಕಡೆ 72 ದೇಸಿ ತಳಿಗಳನ್ನು ಸಂರಕ್ಷಿಸಿ ಬೆಳೆಸಿರುವುದು ಮಾದರಿಯಾಗಿದೆ. ಇಲ್ಲಿ ಅಳವಡಿಸಿರುವ ತಂತ್ರಜ್ಞಾನ ಹಾಗೂ ದಾಖಲಾತಿ ಕ್ರಮಗಳು ವೈಜ್ಞಾನಿಕವಾಗಿವೆ’ ಎಂದರು.

ಸಹಜ ಸಮೃದ್ಧ ನಿರ್ದೇಶಕ ಜಿ. ಕೃಷ್ಣಪ್ರಸಾದ್, ‘ಪ್ರತಿ ತಳಿಗೂ ಒಂದೊಂದು ವಿಶೇಷ ಗುಣವಿದೆ. ಬಗೆಬಗೆಯ ಅಡುಗೆ, ಔಷಧೀಯ ಗುಣಗಳಿಗೆ ದೇಸಿ ತಳಿ ಪ್ರಖ್ಯಾತಿ ಪಡೆದಿವೆ’ ಎಂದರು.

ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಖಾನೂರೆ, ವಿಜ್ಞಾನಿ ರಘುನಾಥ ಕುಲಕರ್ಣಿ, ಪ್ರಗತಿಪರ ರೈತರಾದ ಗಂಗಾಧರ ಅಳಗವಾಡಿ ಹಾಗೂ ಆರ್‌.ಜಿ. ಅಳಗವಾಡಿ, ಕೊಪ್ಪಳದ ಕೃಷಿಕ ಶಂಕರ ರಡ್ಡಿ ಕಾಟ್ರಳ್ಳಿ, ಮೃತ್ಯುಂಜಯ ರಾಮಜಿ, ನಾಗರಾಜ, ನಿಶಾಂತ್ ಬಂಕಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.