ಸೋಮವಾರ, ಆಗಸ್ಟ್ 8, 2022
23 °C
ಎಸ್‌.ಎಸ್‌.ಕೆ. ಸಮಾಜದ ಯುವ ಸಮಾವೇಶದಲ್ಲಿ ಶಾಸಕ ಶೆಟ್ಟರ್‌ ಸಲಹೆ

ಹುಬ್ಬಳ್ಳಿ: ಅಪಸ್ವರ ಬಂದಾಗ ಪರಿಹಾರ ಕಂಡುಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸಮಾಜದಲ್ಲಿ ಅಪಸ್ವರ ಬಂದಾಗ ತಕ್ಷಣ ಪರಿಹಾರ ಕಂಡುಕೊಂಡು, ಒಡಕು ಮೂಡದಂತೆ ಒಗ್ಗಟ್ಟಿನಲ್ಲಿ ಮುನ್ನಡೆಯಬೇಕು. ಹಾಗಾದಾಗ ಮಾತ್ರ ಎಲ್ಲ ಕ್ಷೇತ್ರದಲ್ಲೂ ಸಮಾಜ ಅಭಿವೃದ್ಧಿ ಸಾಧಿಸಬಹುದು’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಎಸ್.ಎಸ್.ಕೆ. ಸಮಾಜದ ರಾಜ್ಯ ಸಂಘಟನೆ ವತಿಯಿಂದ ನಗರ ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಶನಿವಾರ ನಡೆದ ‘ಯುವ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ‘ಎಸ್.ಎಸ್.ಕೆ. ಸಮಾಜ ಚಿಕ್ಕದಾದರೂ ಉಳಿದ ಎಲ್ಲ ಸಮಾಜಕ್ಕಿಂತ ಭಿನ್ನವಾಗಿದೆ. ಸಮಾಜದಲ್ಲಿನ ಆದರ್ಶ, ಸಂಘಟನೆ ಹಾಗೂ ಶೌರ್ಯ ಎಲ್ಲ ಸಮಾಜಕ್ಕೂ ಮಾದರಿಯಾಗಿದೆ. ಯಾವುದಾದರೂ ಕೆಲಸ ಮಾಡಬೇಕೆಂದು ನಿಶ್ಚಯಿಸಿದರೆ ಸಾಕು, ಗುರಿ ತಲುಪವವರೆಗೂ ಬಿಡುವುದಿಲ್ಲ. ಕಠಿಣ ಪರಿಶ್ರಮ ಹಾಗೂ ಬದ್ಧತೆ ಸಮಾಜದ ಜನರಲ್ಲಿ ಇದೆ. ಅದು ಹಾಗೆಯೇ ಮುಂದುವರಿಯಲಿ’ ಎಂದು ಆಶಿಸಿದರು.

‘ಹಿಂದುತ್ವದ ವಿಚಾರ ಬಂದಾಗ ಎಸ್‌.ಎಸ್‌.ಕೆ. ಸಮಾಜ ಗಟ್ಟಿಯಾಗಿ ಧ್ವನಿ ಎತ್ತುತ್ತದೆ. ಈದ್ಗಾ ಮೈದಾನ, ಅಯೋಧ್ಯಾ ರಾಮ ಮಂದಿರ ಸ್ಥಾಪನೆ ಹೀಗೆ ಅನೇಕ ವಿಷಯಗಳಲ್ಲಿ ಸಮಾಜದವರು ಹೋರಾಟ ನಡೆಸಿದ್ದು ಇತಿಹಾಸ. ಅಲ್ಲದೆ, ಸಮಾಜಮುಖಿ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡು ಉಳಿದ ಸಮಾಜಕ್ಕೂ ಮಾದರಿಯಾಗುತ್ತಾರೆ. ಈ ಸಮಾಜದಲ್ಲಿ ಸಾಕಷ್ಟು ಯುವ ಪ್ರತಿಭಾವಂತರಿದ್ದಾರೆ. ಆ ಪ್ರತಿಭೆಗಳು ಎಲ್ಲ ಕ್ಷೇತ್ರದಲ್ಲಿಯೂ ಛಾಪು ಮೂಡಿಸುವಂತಾಗಬೇಕು. ಆರ್ಥಿಕವಾಗಿ ಹಿಂದುಳಿದವರ ಬೆನ್ನಿಗೆ ನಿಂತು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು’ ಎಂದು ಹೇಳಿದರು.

ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ‘ಎಸ್‌.ಎಸ್‌.ಕೆ. ಸಮಾಜ ಎಂದೂ ತನ್ನ ಸ್ವಾರ್ಥಕ್ಕಾಗಿ ಹೋರಾಟ ನಡೆಸಿಲ್ಲ. ಅದು ನಡೆಸಿರುವ ಹೋರಾಟವೆಲ್ಲ ಹಿಂದುತ್ವದ ಏಳ್ಗೆಗಾಗಿ ಹಾಗೂ ಅಭಿವೃದ್ಧಿಗಾಗಿ. ಆರ್ಥಿಕವಾಗಿ ಸದೃಢವಾಗಿದ್ದವರು ತಮ್ಮ ಸಮಾಜದ ಬಡವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಅವರಲ್ಲಿ ಪ್ರಗತಿ ಕಂಡರೆ ಮಾಡಿರುವ ಕೆಲಸ ಸಾರ್ಥಕವಾಗುತ್ತದೆ. ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಆಗಬೇಕು. ಅವರು ಮನೆ ಮಕ್ಕಳಾಗಿರದೆ ದೇಶದ ಹೆಮ್ಮೆಯ ಮಕ್ಕಳಾಗಿ ಸಾಧನೆಯ ಶಿಖರ ಏರಬೇಕು’ ಎಂದರು.

ಶಾಸಕರಾದ ಅರವಿಂದ ಬೆಲ್ಲದ ಮತ್ತು ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಎಸ್.ಎಸ್.ಕೆ. ಸಮಾಜದ ಮುಖಂಡರಾದ ಅಶೋಕ ಕಾಟವೆ, ನಾರಾಯಣ ಭಾಂಡಗೆ, ಡಾ. ಶಶಿಕುಮಾರ ಮೆಹರವಾಡೆ, ಶ್ಯಾಮ್ ಕಬಾಡೆ, ಸತೀಶ ಮೆಹರವಾಡೆ, ನೀಲಕಂಠ ಜಡಿ, ರಘು ಮಗಜಿಕೊಂಡಿ, ಗೋಪಾಲ ಬದ್ದಿ, ವಿಠ್ಠಲ ಲದ್ವಾ, ಡಿ.ಕೆ. ಚವ್ಹಾಣ, ನಾಗೇಶ ಕಲಬುರ್ಗಿ ಇದ್ದರು.

ದೇವಸ್ಥಾನ ನಿರ್ಮಾಣಕ್ಕೆ ನಿವೇಶನ
‘ಹುಬ್ಬಳ್ಳಿಯಲ್ಲಿ ಸಹಸ್ರಾರ್ಜುನ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ಬೇಕು ಎನ್ನುವುದು ಎಸ್‌.ಎಸ್‌.ಕೆ. ಸಮಾಜದ ಬಹುದಿನದ ಬೇಡಿಕೆಯಾಗಿತ್ತು. ಅದಕ್ಕೆ ಮೂವತೈದು ಗುಂಟೆಯಿಂದ‌ ಒಂದು ಎಕರೆವರೆಗಿನ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ ದೇವಸ್ಥಾನ ನಿರ್ಮಾಣವಾಗಲಿದ್ದು, ಸರ್ಕಾರದಿಂದ ಎಲ್ಲ ಸೌಲಭ್ಯ ನೀಡಲು ಪ್ರಯತ್ನಿಸಲಾಗುವುದು’ ಎಂದು ಶಾಸಕ ಜಗದೀಶ ಶೆಟ್ಟರ್‌ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು