ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ: ಸಚಿವ ಜೋಶಿ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೆರೆ ಕಾಮಗಾರಿ ಪರಿಶೀಲಿಸಿದ ಸಚಿವ ಜೋಶಿ
Last Updated 27 ಏಪ್ರಿಲ್ 2021, 13:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಉಣಕಲ್ ಮತ್ತು ತೋಳನಕೆರೆ ಅಭಿವೃದ್ಧಿ ಕಾಮಗಾರಿಯನ್ನು ಅಧಿಕಾರಿಗಳು ಕಾಲಮಿತಿಯಲ್ಲಿ ಮುಗಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಎರಡೂ ಕೆರೆಗಳಿಗೆ ಸೋಮವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ‘ಉಣಕಲ್‌ ಕೆರೆಯನ್ನು ₹51 ಕೋಟಿ ವೆಚ್ಚದಲ್ಲಿ ಮತ್ತು ತೋಳನಕೆರೆಯನ್ನು ₹18.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಉಣಕಲ್‌ ಕೆರೆಯಲ್ಲಿರುವ ಕಳೆ ಸಮಸ್ಯೆ ನಿವಾರಣೆಗೆಪ್ಲೋಟಿಂಗ್ ರ‍್ಯಾಫ್ಟರ್ಸ್ ಮತ್ತು ನೀರನ್ನು ಸ್ವಚ್ಛಗೊಳಿಸುವುದಕ್ಕೆ ಏರೇಷನ್‌ಗಳನ್ನು ಅಳವಡಿಸಲಾಗಿದೆ. ಎರಡೂ ಕೆರೆಗಳ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ’ ಎಂದರು.

‘ಕೆರೆ ದಂಡೆಯಲ್ಲಿ ಉದ್ಯಾನ ಅಭಿವೃದ್ಧಿ ಜತೆಗೆ, ಬೋಟಿಂಗ್‌ನಂತಹ ವಿವಿಧ ರೀತಿಯ ಕ್ರೀಡಾ ಚಟುವಟಿಕೆಗಳನ್ನು ಆರಂಭಿಸಲಾಗುವುದು. ಉಣಕಲ್‌ ಕೆರೆಗೆ ಕೊಳಚೆ ನೀರು ಬಂದು ಸೇರುತ್ತಿರುವ ಬಗ್ಗೆ ದೂರುಗಳಿವೆ. ಈ ಕುರಿತು ಪರಿಶೀಲಿಸಿ, ಕೊಳಚೆ ಕೆರೆಯೊಡಲು ಸೇರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು ಹೇಳಿದರು.

‘ತೋಳನಕೆರೆಯಲ್ಲಿ ತೆರೆದ ಜಿಮ್, ಮಕ್ಕಳ ಆಟಿಕೆಗಳ ಅಳವಡಿಕೆ, ತೆರೆದ ಸಭಾಂಗಣ ಹಾಗೂ ಉದ್ಯಾನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಮಲಿಂಗೇಶ್ವರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಕೆರೆಗೆ ಹರಿದು ಬರುತ್ತಿದ್ದ ಕೊಳಚೆ ನೀರನ್ನು ಬೇರೆ ಕಡೆಗೆ ತಿರುಗಿಸಲಾಗಿದೆ. ನೀರು ಶುದ್ಧಗೊಳಿಸಲು ಇಲ್ಲಿಯೂ ಏರೇಷನ್ ಅಳವಡಿಸಲಾಗಿದೆ’ ಎಂದರು.

ಕಳ್ಳರ ಬಗ್ಗೆ ಎಚ್ಚರ:

ತೋಳನಕೆರೆ ಬಳಿ ನಿರ್ಮಿಸಿರುವ ಸೈಕಲ್ ನಿಲ್ದಾಣ ಪರಿಶೀಲಿಸಿದ ಜೋಶಿ, ‘ಇಲ್ಲಿ ಕಳ್ಳರ ಕಾಟ ಜಾಸ್ತಿ ಇದೆ. ಜನ ಹೇಗೆ ತಮ್ಮ ಸೈಕಲ್‌ಗಳನ್ನು ಇಲ್ಲಿ ನಿಲ್ಲಿಸುತ್ತಾರೆ’ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್‌ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ‘ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜತೆಗೆ, ಕೆರೆಯ ಭದ್ರತಾ ಸಿಬ್ಬಂದಿ ಇರುವುದರಿಂದ ಕಳ್ಳತನ ಆಗುವುದಿಲ್ಲ’ ಎಂದರು. ಕೆರೆಗಳ ಅಭಿವೃದ್ಧಿ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಿ, ವಿವರಿಸಿದರು.

‘ಎರಡೂ ಕೆರೆಗಳ ಕಾಮಗಾರಿ ಮುಗಿದ ಬಳಿಕ, ಗುತ್ತಿಗೆದಾರರೇ ಐದು ವರ್ಷ ನಿರ್ವಹಣೆ ಮಾಡಲಿದ್ದಾರೆ. ಬಳಿಕ, ನಿರ್ವಹಣೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೊಸೈಟಿ ರಚಿಸಲಾಗುವುದು. ಸ್ಥಳೀಯರು ಇದಕ್ಕೆ ಸದಸ್ಯರಾಗಿರಲಿದ್ದು, ಪ್ರತ್ಯೇಕ ಬ್ಯಾಂಕ್ ಖಾತೆ ಕೂಡ ತೆರೆಯಲಾಗುವುದು. ವಿವಿಧ ಚಟುವಟಿಕೆಗಳಿಂದ ಬರುವ ಹಣವನ್ನು ನಿರ್ವಹಣೆಗೆ ಬಳಸಿಕೊಳ್ಳಲಾಗುವುದು. ಜನರ ಕೈಗೆ ಹೊಣೆ ಕೊಟ್ಟರೆ, ನಿರ್ವಹಣೆಯೂ ಚೆನ್ನಾಗಿರಲಿದೆ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಅರವಿಂದ ಬೆಲ್ಲದ, ಬಿಜೆಪಿ ಮುಖಂಡ ಮಹೇಶ ಬುರ್ಲಿ, ಸ್ಮಾರ್ಟ್ ಸಿಟಿ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT