ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಪೇಯಿಂಗ್ ಗೆಸ್ಟ್‌ ಅಡುಗೆ ಮನೆಯಲ್ಲಿ ಅಗ್ನಿ ಅವಘಡ

ಅಡುಗೆ ಅನಿಲ ಸೋರಿಕೆ: ಆಹಾರ ಸಾಮಾಗ್ರಿ ಬೆಂಕಿಗಾಹುತಿ
Last Updated 16 ಆಗಸ್ಟ್ 2019, 9:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಅನ್ನಪೂರ್ಣೇಶ್ವರಿ ಯುವಕರ ಪೇಯಿಂಗ್ ಗೆಸ್ಟ್‌ನ (ಪಿ.ಜಿ) ಅಡುಗೆ ಮನೆಯಲ್ಲಿ ಗುರುವಾರ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ, ಅಡುಗೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ಆರಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ನಿಂಗನಗೌಡರ ರಾಯನಾಳ ಎಂಬುವರು ನಡೆಸುತ್ತಿದ್ದ ಪಿ.ಜಿ.ಯಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ 12.30ರ ಸುಮಾರಿಗೆ ನಿಂಗನಗೌಡರ ಅವರು, ಪತ್ನಿ ವಿಜಯಲಕ್ಷ್ಮಿ ಹಾಗೂ ಇಬ್ಬರು ಸಹಾಯಕರೊಂದಿಗೆ ಅಡುಗೆ ತಯಾರಿಸುತ್ತಿದ್ದರು. ಈ ವೇಳೆ ಖಾಲಿಯಾದ ಅಡುಗೆ ಸಿಲಿಂಡರ್‌ ಅನ್ನು ಬದಲಾಯಿಸುವಾಗ, ಅನಿಲ ಸೋರಿಕೆಯಾಗಿ ಪಕ್ಕದ ಒಲೆಯಲ್ಲಿ ಉರಿಯುತ್ತಿತದ್ದ ಬೆಂಕಿ ಸಿಲಿಂಡರ್‌ಗೆ ಹೊತ್ತಿಕೊಂಡಿದೆ.

ಬೆಂಕಿ ನಂದಿಸಲು ಯತ್ನಿಸಿದ ನಿಂಗನಗೌಡರ, ಸಿಲಿಂಡರ್ ಅನ್ನು ಅಡುಗೆ ಕೋಣೆಯಿಂದ ಹೊರಕ್ಕೆ ತರಲು ಯತ್ನಿಸಿದ್ದಾರೆ. ಆದರೆ, ಒಮ್ಮೆಲೆ ಬೆಂಕಿಯ ಜ್ವಾಲೆ ಹೆಚ್ಚಿದ್ದರಿಂದ ಸಿಲಿಂಡರ್ ಅನ್ನು ಅಲ್ಲೇ ಬಿಟ್ಟು ಎಲ್ಲರೊಂದಿಗೆ ಹೊರಕ್ಕೆ ಓಡಿ ಬಂದು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎರಡು ವಾಹನಗಳಲ್ಲಿ ಬಂದ ಸಿಬ್ಬಂದಿ ಅರ್ಧ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ತಪ್ಪಿದ ಭಾರಿ ಅನಾಹುತ:

‘ಸಿಲಿಂಡರ್‌ನ ಮುಚ್ಚಳ ತೆಗೆದಾಗ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟಕ್ಕೆ ಸಿಲಿಂಡರ್ ಸ್ಫೋಟಗೊಂಡಿಲ್ಲ. ತಕ್ಷಣ ಮಾಹಿತಿ ನೀಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಲಾಯಿತು. ಐದು ನಿಮಿಷ ತಡವಾಗಿದ್ದರೂ, ಪಕ್ಕದಲ್ಲಿದ್ದ ನಾಲ್ಕು ಸಿಲಿಂಡರ್‌ಗಳಿಗೂ ಬೆಂಕಿ ತಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇತ್ತು. ಇದರಿಂದ ಪಿ.ಜಿ ಕಟ್ಟಡದ ಜತೆಗೆ, ಪಕ್ಕದ ಕಟ್ಟಡಕ್ಕೂ ಹೆಚ್ಚಿನ ಹಾನಿಯಾಗುತ್ತಿತ್ತು’ ಎಂದು ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲಗುಟಕರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಾರ್ಯಾಚರಣೆ ಆರಂಭಿಸಿದ ತಕ್ಷಣ ಒಳಗಿದ್ದ ಸಿಲಿಂಡರ್‌ಗಳನ್ನು ಹೊರಕ್ಕೆ ಸಾಗಿಸಿದೆವು. ಬಳಿಕ ಅಡುಗೆ ಮನೆ ಹಾಗೂ ಸಾಮಗ್ರಿ ಸಂಗ್ರಹ ಕೊಠಡಿಯ ಬೆಂಕಿ ನಂದಿಸಿದೆವು. ಬೆಂಕಿ ಜ್ವಾಲೆ ಇಡೀ ಕೋಣೆಯನ್ನು ವ್ಯಾಪಿಸಿದ್ದರಿಂದ, ಸ್ಥಳದಲ್ಲಿದ್ದ ಅಡುಗೆ ಸಾಮಗ್ರಿ ಸೇರಿದಂತೆ, ಎಲ್ಲಾ ಪಾತ್ರೆಗಳು ಸುಟ್ಟು ಕರಕಲಾಗಿವೆ. ಬೆಂಕಿಯ ತೀವ್ರತೆಗೆ ಅಡುಗೆ ಕೋಣೆಯ ಮೇಲ್ಭಾಗದ ಕೊಠಡಿಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ’ ಎಂದು ಹೇಳಿದರು.

‘ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಆನಂದ ಒಣಕುದುರಿ ತಿಳಿಸಿದರು.

ನಿತ್ಯ 200 ಮಂದಿ ಊಟಕ್ಕೆ ಬರುತ್ತಿದ್ದರು

ರಸ್ತೆಗೆ ಹೊಂದಿಕೊಂಡಂತಿರುವ ಪಿ.ಜಿ.ಯಲ್ಲಿ ಎಂಟು ಕೊಠಡಿಗಳಿದ್ದು, ಅಂದಾಜು 50 ಮಂದಿ ತಂಗಿದ್ದಾರೆ. ಅಲ್ಲದೆ, ನಿತ್ಯ ಮಧ್ಯಾಹ್ನ ಅಕ್ಕಪಕ್ಕದ ಪಿ.ಜಿ.ಗಳಲ್ಲಿ ತಂಗಿರುವ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 200 ಮಂದಿ ಊಟಕ್ಕೆ ಬರುತ್ತಿದ್ದರು. ಗುರುವಾರ ಸ್ವಾತಂತ್ರ್ಯ ದಿನಾಚರಣೆ ಕಾರಣದಿಂದಾಗಿ ರಜೆ ಇದ್ದಿದ್ದರಿಂದ ಯಾರೂ ಬೇಗನೆ ಊಟಕ್ಕೆ ಬಂದಿರಲಿಲ್ಲ.

‘ಬೆಂಕಿ ಹೊತ್ತಿಕೊಂಡ ಸಿಲಿಂಡರ್ ಅನ್ನು ಹೊರಕ್ಕೆ ಎಳೆದು ತರಲು ಯತ್ನಿಸಿದೆ. ಆದರೆ, ಬೆಂಕಿಯ ಉರಿ ಹೆಚ್ಚಾಗಿದ್ದರಿಂದ ಅಡುಗೆ ಕೋಣೆಯ ಮೂಲೆಗೆ ಸಿಲಿಂಡರ್ ಎಸೆದು ಹೊರಕ್ಕೆ ಓಡಿ ಬಂದು, ಅಗ್ನಿಶಾಮಕ ಠಾಣೆಗೆ ಕರೆ ಮಾಡಿದೆ. ತಕ್ಷಣ ಬಂದ ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದರು. ಘಟನೆಯಿಂದಾಗಿ ಅಂದಾಜು ₹1.5 ಲಕ್ಷ ನಷ್ಟವಾಗಿದೆ’ ಎಂದು ಪಿ.ಜಿ ಮಾಲೀಕ ನಿಂಗನಗೌಡರ ರಾಯನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT