ಹುಬ್ಬಳ್ಳಿ: ಗಣೇಶ ಹಬ್ಬದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಜಿಲ್ಲೆಯ ವಿವಿಧೆಡೆ ಇರುವ ಪಟಾಕಿ ಸಂಗ್ರಹ ಗೋದಾಮು ಹಾಗೂ ಮಾರಾಟ ಮಳಿಗೆಗಳ ಪರಿಶೀಲನೆಗೆ ಮುಂದಾಗಿದೆ. ನಿಯಮ ಉಲ್ಲಂಘಿಸಿದ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ, ಬೀಗ ಹಾಕಲು ನಿರ್ಧರಿಸಿದೆ.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ವಿಶೇಷ ತಂಡ, ಪಟಾಕಿ ಅಂಗಡಿಗಳ ಪರಿಶೀಲನೆ ನಡೆಸಲು ಸಿದ್ಧತೆ ನಡೆಸಿವೆ. ಅಂಗಡಿಗಳ ಪರವಾನಗಿ, ಕೈಗೊಂಡ ಮುಂಜಾಗ್ರತಾ ಕ್ರಮಗಳು, ಹಸಿರು ಪಟಾಕಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಹಬ್ಬಕ್ಕಿಂತ ಮೊದಲು ಪರಿಶೀಲನಾ ವರದಿ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಧಾರವಾಡ ಜಿಲ್ಲೆ ಸೇರಿದಂತೆ ಅವಳಿನಗರದಲ್ಲಿ 29 ಪಟಾಕಿ ಮಾರಾಟ ಮಳಿಗೆಗಳು ಹಾಗೂ ಎರಡು ಪಟಾಕಿ ಸಂಗ್ರಹ ಗೋದಾಮುಗಳಿವೆ. ಪಟಾಕಿ ಸಂಗ್ರಹ ಮತ್ತು ಮಾರಾಟ ಮಾಡಲು ಮಹಾನಗರ ಪಾಲಿಕೆ, ತಾಲ್ಲೂಕಾಡಳಿತ ಮತ್ತು ಅಗ್ನಿ ಶಾಮಕ ದಳದಿಂದ ನಿಪೇಕ್ಷಣಾ ಪತ್ರ ಪಡೆಯಬೇಕು. ಅವುಗಳನ್ನು ಪರಿಶೀಲಿಸಿ ಜಿಲ್ಲಾಡಳಿತ ಪರವಾನಗಿ ನೀಡುತ್ತದೆ. ಆ ಸಂದರ್ಭ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗುತ್ತದೆ. ಆದರೆ, ನಗರ ಮತ್ತು ಪಟ್ಟಣಗಳಲ್ಲಿರುವ ಬಹುತೇಕ ಪಟಾಕಿ ಮಾರಾಟ ಮಳಿಗೆಗಳು ಸುರಕ್ಷತಾ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಪಟಾಕಿ ಅಂಗಡಿಗಳನ್ನು ಸ್ಥಳಾಂತರಿಸಬೇಕೆಂದರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಬೇಕು. ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು.ಈಶ್ವರ ಉಳ್ಳಾಗಡ್ಡಿ, ಆಯುಕ್ತ ಹು–ಧಾ ಮಹಾನಗರ ಪಾಲಿಕೆ
‘ಜನದಟ್ಟಣೆ ಮತ್ತು ಜನವಸತಿ ಪ್ರದೇಶದಲ್ಲಿ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ, ನಗರದಲ್ಲಿರುವ ಪಟಾಕಿ ಅಂಗಡಿಗಳೆಲ್ಲ ಪ್ರಮುಖ ವೃತ್ತಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಹಾಗೂ ಇಕ್ಕಟ್ಟಾದ ಜಾಗದಲ್ಲಿಯೇ ಇವೆ. ಅಕ್ಕಪಕ್ಕ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು, ಗ್ಯಾರೇಜ್‌ಗಳು, ಆಟೊ ನಿಲ್ದಾಣ ಹಾಗೂ ವಸತಿ ಸಮುಚ್ಚಯಗಳಿವೆ. ಹೈ ಟೆನ್ಸನ್ ವಿದ್ಯುತ್ ಕೇಬಲ್‌ಗಳು, ವಿದ್ಯುತ್ ಟ್ರಾನ್ಸಫಾರ್ಮರ್ ಸಹ ಅಂಗಡಿಗಳ ಸನಿಹವೇ ಇವೆ. ತುರ್ತು ಸಂದರ್ಭದಲ್ಲಿ ಅಗ್ನಿಶಾಮ ವಾಹನ ಸಹ ಬರಲಾಗದ ಸ್ಥಿತಿಯಿದೆ. ಅಪಾಯ ಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆ’ ಎಂದು ಸಮತಾ ಸೇನೆಯ ಗುರುನಾಥ ಉಳ್ಳಿಕಾಶಿ ಆತಂಕ ವ್ಯಕ್ತಪಡಿಸುತ್ತಾರೆ.
‘ಗಣೇಶ ಹಬ್ಬ ಮತ್ತು ದೀಪಾವಳಿ ಹಬ್ಬದ ಸಂದರ್ಭ ಮಾತ್ರ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಪಟಾಕಿ ಮಾರಾಟ ಮಾಡಲು ಪ್ರತ್ಯೇಕ ಸ್ಥಳ ಗುರುತಿಸಲಾಗುತ್ತದೆ. ಆ ವೇಳೆಯೂ ಪರವಾನಗಿ ಪಡೆದ ಮೂಲ ಸ್ಥಳದಲ್ಲಿ ಪಟಾಕಿ ಮಾರಾಟ ಮಾಡದಂತೆ ಪೊಲೀಸ್ ಇಲಾಖೆ ನಿಷೇಧ ಹೊರಡಿಸುತ್ತದೆ. ಆದರೂ, ಕೆಲವರು ಅಲ್ಲಿಯೇ ಮಾರಾಟ ಮಾಡುತ್ತಾರೆ. ಅನಾಹುತ ನಡೆದ ನಂತರ ಎಚ್ಚೆತ್ತುಕೊಳ್ಳುವ ಬದಲು ಜಿಲ್ಲಾಡಳಿತ, ಮುಂಜಾಗ್ರತಾ ಕ್ರಮವಾಗಿ ನಗರ ಪ್ರದೇಶದಲ್ಲಿರುವ ಎಲ್ಲಾ ಪಟಾಕಿ ಮಳಿಗೆಗಳ ಪರವಾನಗಿ ರದ್ದುಪಡಿಸಿ, ತೆರೆದ ಜಾಗದಲ್ಲಿ ಮಳಿಗೆ ತೆರೆಯಲು ಅನುಮತಿ ನೀಡಬೇಕು’ ಎಂದು ಅವರು ಆಗ್ರಹಿಸಿದರು.
‘ಅವಳಿನಗರದ ಮಾರುಕಟ್ಟೆ ಪ್ರದೇಶದಲ್ಲಿ ಪಟಾಕಿ ಅಂಗಡಿಗಳಿರುವುದು ಗಮನಕ್ಕೆ ಬಂದಿವೆ. ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಂತಹ ಮಳಿಗೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
‘ನಿಯಮ ಉಲ್ಲಂಘನೆಯೇ ಹೆಚ್ಚು’
‘ಜನವಸತಿಯಿಲ್ಲದ ತೆರೆದ ಪ್ರದೇಶದಲ್ಲಿ ಪಟಾಕಿ ಅಂಗಡಿ ಗೋದಾಮು ಇರಬೇಕು. ಮಾರಾಟ ಮಳಿಗೆಯಲ್ಲಿ 50 ಕೆ.ಜಿ.ಗಿಂತ ಹೆಚ್ಚು ಸಿಡಿಮದ್ದುಗಳನ್ನು ಇಟ್ಟುಕೊಳ್ಳಬಾರದು. ಬೆಳಕು ಗಾಳಿ ಸಾಕಷ್ಟು ಪ್ರಮಾಣದಲ್ಲಿ ಇದ್ದು ವಿದ್ಯುತ್ ಪರಿವರ್ತಕಗಳು ಕೇಬಲ್‌ಗಳು ಸನಿಹದಲ್ಲಿ ಇರಬಾರದು. ಸ್ವಿಚ್ ಬೋರ್ಡ್‌ಗಳು ಸುರಕ್ಷಿತವಾಗಿರಬೇಕು. ನೀರಿನ ಡ್ರಮ್ ಅಗ್ನಿಶಾಮಕ ಸಿಲಿಂಡರ್‌ಗಳು ಮರಳು ತುಂಬಿದ ಬಕೆಟ್ ಇರಬೇಕು. ಅಕ್ಕಪಕ್ಕ ಯಾವುದೇ ಅಂಗಡಿ ಇರಬಾರದು. ಅಗ್ನಿ ನಿರೋಧಕ ಸಾಮಗ್ರಿ ಬಳಸಿ ಅಂಗಡಿ ನಿರ್ಮಿಸಿರಬೇಕು. ಆದರೆ ನಗರದಲ್ಲಿನ ಬಹುತೇಕ ಅಂಗಡಿಗಳು ಷರತ್ತುಗಳನ್ನು ಉಲ್ಲಂಘಿಸಿವೆ’ ಎಂದು ಹೆಸರು ಹೇಳಲಿಚ್ಛಿಸದ ಅಗ್ನಿಶಾಮಕ ಸಿಬ್ಬಂದಿ ಹೇಳುತ್ತಾರೆ.
ಪರವಾನಗಿ ರದ್ದತಿಗೆ ಕ್ರಮ: ಡಿ.ಸಿ ದಿವ್ಯಪ್ರಭು
‘ಅವಳಿನಗರದಲ್ಲಿರುವ ಪಟಾಕಿ ಮಾರಾಟ ಮಳಿಗೆಗಳ ಸುರಕ್ಷತೆ ಬಗ್ಗೆ ಮಹಾನಗರ ಪಾಲಿಕೆ ಕಂದಾಯ ಇಲಾಖೆ ಅಗ್ನಿ ಶಾಮಕ ದಳ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಚರ್ಚಿಸಲಾಗುವುದು. ಮಳಿಗೆಗಳು ಕೈಗೊಂಡಿರುವ ಸುರಕ್ಷತಾ ಕ್ರಮಗಳು ಹಾಗೂ ನಿಯಮಾವಳಿ ಉಲ್ಲಂಘನೆ ಕುರಿತು ಪರಿಶೀಲನೆ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿದ ಸುರಕ್ಷತಾ ಕ್ರಮ ಅನುಸರಿಸದ ಅಂಗಡಿಗಳ ಪರವಾನಗಿ ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.