ಶುಕ್ರವಾರ, ಸೆಪ್ಟೆಂಬರ್ 30, 2022
26 °C
ಧಾರವಾಡ ಕೃಷಿ ಮೇಳ ಆರಂಭ; ಬೀಜ ಮೇಳಕ್ಕೆ ಚಾಲನೆ

ಮೊದಲ ದಿನವೇ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಕೊರೊನಾ ಸೋಂಕು, ಲಾಕ್‌ಡೌನ್‌ನಿಂದಾಗಿ ಎರಡು ವರ್ಷಗಳ ಅಂತರದ ನಂತರ ಶನಿವಾರ ಆರಂಭಗೊಂಡ ಧಾರವಾಡ ಕೃಷಿ ಮೇಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ, ವಿವಿಧ ಮಳಿಗೆಗಳನ್ನು ವೀಕ್ಷಿಸಿದರು.

ಬೆಳಿಗ್ಗೆಯಿಂದಲೇ ಕೃಷಿ ವಿಶ್ವವಿದ್ಯಾಲಯದತ್ತ ಜನರು ತಂಡೋಪತಂಡವಾಗಿ ಧಾವಿಸಿದರು. ಕೃಷಿ ವಿವಿ ಮೈದಾನ, ಸುತ್ತಮುತ್ತಲಿನ ಶಾಲಾ, ಕಾಲೇಜುಗಳ ಆವರಣಗಳು ವಾಹನಗಳಿಂದ ತುಂಬಿದ್ದವು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲಿ ನೋಡಿದರೂ ಅಪಾರ ಜನಸ್ತೋಮ ಕಂಡುಬಂತು.

ರೈತರ ಜ್ಞಾನಾಭಿವೃದ್ಧಿ ಕೇಂದ್ರ, ಕೃಷಿ ಮೇಳ ನಡೆಯುವ ಮೈದಾನಗಳಲ್ಲಿ ಸ್ಥಾಪಿಸಲಾಗಿರುವ 700ಕ್ಕೂ ಹೆಚ್ಚು ಮಳಿಗೆಗಳಲ್ಲಿ ರೈತರು, ಕೃಷಿ ಆಸಕ್ತರಿಂದಲೇ ತುಂಬಿತ್ತು. ಹೊಸ ತಾಂತ್ರಿಕತೆ, ಕೃಷಿ ಯಂತ್ರೋಪಕರಣಗಳು, ಬೀಜಗಳು, ಕೀಟ ಹಾಗೂ ಕಳೆ ನಿರ್ವಹಣಾ ತಂತ್ರಗಳು, ಕೊಯ್ಲೋತ್ತರ ವಿಧಾನಗಳು, ಮೌಲ್ಯವರ್ಧನೆಯ ತಂತ್ರಗಳ ಕುರಿತಂತೆ ಹಲವು ಮಳಿಗೆಗಳಿಗೆ ಜನರು ಭೇಟಿ ನೀಡಿ ಮಾಹಿತಿ ಪಡೆದರು.

ಎತ್ತರ ತಳಿಯ ಕಬ್ಬು, ಕುಬ್ಜ ತಳಿಯ ತೆಂಗು, ಅಡಿಕೆ, ತಾಳೆ, ಜೋಳ, ಸೋಯಾಬೀನ್, ಹತ್ತಿ ಹೀಗೆ ಹಲವು ಬಗೆಯ ಬೆಳೆಗಳ ತಳಿಗಳು ಒಂದೆಡೆ. ಸಿರಿಧಾನ್ಯಗಳ ವೈವಿಧ್ಯತೆ ಮತ್ತು ಅವುಗಳಿಂದ ತಯಾರಾದ ತರಹೇವಾರಿ ತಿನಿಸುಗಳ ಮಳಿಗೆಗಳೂ ಸಾಕಷ್ಟು ಗಮನ ಸೆಳೆದವು. ವಿಶ್ವವಿದ್ಯಾಲಯಗಳ ಮಳಿಗೆಗಳು, ಕೃಷಿ ವಿಜ್ಞಾನ ಕೇಂದ್ರಗಳ ಸಲಹಾ ಕೇಂದ್ರಗಳು, ಖಾಸಗಿ ಸಂಸ್ಥೆಗಳ ಮಳಿಗೆಗಳು, ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿದ ರೈತರು ಅಗತ್ಯ ಮಾಹಿತಿ ಪಡೆದರು.

ಕೃಷಿಯ ನಂತರ ಮನೆಗಾಗಿ ಕಂಬಳಿ, ಜಾಡಿ, ಬುಟ್ಟಿ, ಬಕೆಟ್‌, ಸಾಂಬಾರು ಪುಡಿ, ಚಟ್ನಿ ಪುಡಿ, ಹಿಟ್ಟಿನ ಯಂತ್ರಗಳನ್ನು ಖರೀದಿಸಲು ರೈತರು ಮರೆಯಲಿಲ್ಲ. ಕೃಷಿ ಮೇಳಕ್ಕೆ ಬಂದಿದ್ದ ರೈತರು ಹಾಗೂ ಅವರ ಕುಟುಂಬದವರು ಅಲ್ಲೇ ಸಿಗುತ್ತಿದ್ದ ಕುರುಕಲು ತಿಂಡಿ, ಐಸ್‌ಕ್ರೀಂಗಳನ್ನು ಸವಿಯುತ್ತಿದ್ದ ದೃಶ್ಯ ಕಂಡುಬಂತು. ಹೆಣ್ಣು ಮಕ್ಕಳು ವಸ್ತ್ರ ಮತ್ತು ಆಲಂಕಾರಿಕ ವಸ್ತುಗಳತ್ತ ಆಕರ್ಷಿತರಾದರೆ, ಹುಡುಗರು ಆಟಿಕೆಗಳನ್ನು ಕೊಡಿಸುವಂತೆ ಪಾಲಕರ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು.

ಮತ್ತೊಂದೆಡೆ ವೇದಿಕೆ ಕಾರ್ಯಕ್ರಮದಲ್ಲಿ ಬೀಜ ಮೇಳದೊಂದಿಗೆ, ಗುಣಮಟ್ಟದ ಬೀಜಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಶ್ರೇಷ್ಠ ಕೃಷಿಕ, ಕೃಷಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಯಶಸ್ವಿ ರೈತರು ತಮ್ಮ ಅನಿಸಿಕೆಯನ್ನು ರೈತರೊಂದಿಗೆ ಹಂಚಿಕೊಂಡರು. ಆದರೆ ವೇದಿಕೆ ಕಾರ್ಯಕ್ರಮದಲ್ಲಿ ಅಷ್ಟಾಗಿ ಜನರು ಕಂಡುಬರಲಿಲ್ಲ.

ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಲ್ಲಲ್ಲಿ ನಿಂತು ಮೇಳಕ್ಕೆ ಬರುವವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಕೃಷಿ ವಿಜ್ಞಾನಿಗಳು ರೈತರ ಸಂದೇಹಗಳನ್ನು ಪರಿಹರಿಸುತ್ತಿದ್ದ ದೃಶ್ಯ ಕಂಡುಬಂತು.

ಮಾಸ್ಕ್ ಧರಿಸಿದವರ ಸಂಖ್ಯೆ ವಿರಳವಾಗಿತ್ತು. ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆಯ ವತಿಯಿಂದ ಸುರಕ್ಷಿತ ಮುಟ್ಟು ಕುರಿತ ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಸಂಜೆ ಹೊತ್ತಿಗೆ ಕೃಷಿ ವಿವಿಯ ಮುಖ್ಯ ರಸ್ತೆಯಲ್ಲಿ ಸ್ಥಳವೇ ಕಾಣದಷ್ಟರ ಮಟ್ಟಿಗೆ ಜನರು ತುಂಬಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.