ಸೋಮವಾರ, ಫೆಬ್ರವರಿ 17, 2020
27 °C

ರಾಷ್ಟ್ರೀಯ ಬಂಜಾರ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಂಜಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ‘ರಾಷ್ಟ್ರೀಯ ಬಂಜಾರ ಅಭಿವೃದ್ಧಿ ಮಂಡಳಿ’ ಸ್ಥಾಪಿಸಬೇಕು ಎಂದು ಅಖಿಲ ಭಾರತೀಯ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮರಸಿಂಗ್ ತಿಲಾವತ್ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ 22 ರಾಜ್ಯಗಳಲ್ಲಿ ಬಂಜಾರ ಸಮುದಾಯದವರು ವಾಸಿಸುತ್ತಿದ್ದಾರೆ. 10 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ಇಂದಿಗೂ ಬಹುತೇಕರು ತಾಂಡಾಗಳಲ್ಲಿ ಬದುಕುತ್ತಿದ್ದಾರೆ’ ಎಂದರು.

‘ಬಂಜಾರ ಭಾಷೆಗೆ ಮಾನ್ಯತೆ ನೀಡುವಂತೆ ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡಿವೆ. ಸಂವಿಧಾನದ 8ನೇ ಅನುಚ್ಛೇದದ ಪ್ರಕಾರ ಬಂಜಾರ ಭಾಷೆಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ 4,488 ಬಂಜಾರ ತಾಂಡಾಗಳಲ್ಲಿ 1,345 ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ, ಹೊಸ ಹೆಸರು ಇಡಲು ಸರ್ಕಾರ ನಿರ್ಧರಿಸಿತ್ತು. ಏಳೆಂಟು ವರ್ಷ ಕಳೆದರೂ ಇನ್ನೂ ಅನುಷ್ಠಾನವಾಗಿಲ್ಲ. 30 ದಿನಗಳ ಒಳಗೆ ಕಂದಾಯ ಗ್ರಾಮಗಳೆಂದು ಘೋಷಿಸಬೇಕು ಹಾಗೂ ಹೊಸ ಹೆಸರಿನ ಹಿಂದೆ ‘ತಾಂಡಾ’ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಆಗ್ರಹಿಸಿದರು.

ಬಂಜಾರ ಸಮ್ಮೇಳನ: ಏಪ್ರಿಲ್‌ 12ರಂದು ದೆಹಲಿಯಲ್ಲಿ ‘ಅಖಿಲ ಭಾರತ ಬಂಜಾರ ಮಹಾ ಸಮ್ಮೇಳನ’ ಹಾಗೂ ಏಪ್ರಿಲ್‌ 14 ಮತ್ತು 15 ರಂದು ಮಹಾರಾಷ್ಟ್ರದಲ್ಲಿ ‘ಬಂಜಾರ ಸಾಹಿತ್ಯ ಸಮ್ಮೇಳನ’ ನಡೆಯಲಿದೆ. ಈ ಎರಡೂ ಸಮ್ಮೇಳನಗಳಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಪ್ರಮುಖ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು