ಗುರುವಾರ , ಆಗಸ್ಟ್ 22, 2019
27 °C

ಸ್ನೇಹ ಗಟ್ಟಿಗೊಳಿಸುವ ಫ್ರೆಂಡ್‌ಶಿಪ್‌ ಡೇ...

Published:
Updated:
Prajavani

ಹೇಳಿಕೊಳ್ಳಲಾಗದ ಭಾವನೆ, ಉಮ್ಮಳಿಸಿ ಬರುವ ದುಃಖ, ಚಿಕ್ಕ-ಪುಟ್ಟ ಖುಷಿ, ಅತಿಯಾದ ಪ್ರೀತಿ, ಅಪ್ಪನಂತೆ ಗದರುವುದು, ನೊಂದಾಗ ಅಮ್ಮನಂತೆ ಮಡಿಲು ನೀಡುವುದು, ಕಾರಣವಿಲ್ಲದೆ ಬರುವ ಹುಸಿಮುನಿಸು, ಅಣ್ಣನಂತೆ ಕಾಲೆಳೆಯುವುದು, ಅಕ್ಕ-ತಂಗಿಯರಂತೆ ಸುಮ್ ಸುಮ್ಮನೆ ಜಗಳ ಆಡುವುದು ಈ ಎಲ್ಲ ಬಾಂಧವ್ಯಗಳು ಪರಸ್ಪರ ಕಂಡುಬರುವುದು ಬೆಸ್ಟ್ ಫ್ರೆಂಡ್ಸ್‌ಗಳಲ್ಲಿ ಮಾತ್ರ.

ಎಲ್ಲರ ಲೈಫ್‍ನಲ್ಲೂ ಒಬ್ಬ ಮೇಲ್ ಅಥವಾ ಫಿಮೇಲ್ ಬೆಸ್ಟ್ ಫ್ರೆಂಡ್ ಇದ್ದೇ ಇರ್ತಾರೆ. ಕೆಲವರು ಅದನ್ನು ಎಲ್ಲರಿಗೆ ಹೇಳಿದರೆ, ಇನ್ನು ಕೆಲವರು ತುಂಬಾ ಸರಳ ಜೀವಿಗಳಾಗಿ ತೆರೆಮರೆಯಲ್ಲಿ ಸರಿದುಹೋಗಿರುತ್ತಾರೆ. ಆದರೆ ಎಲ್ಲರ ಜೀವನದಲ್ಲೂ ದಿ ಬೆಸ್ಟ್ ಫ್ರೆಂಡ್ ಇರೋದಂತು ಸತ್ಯ.

ಖುಷಿ ಇರಲಿ, ದುಃಖ ಇರಲಿ; ಮೊದಲು ಹೇಳಿಕೊಳ್ಳುವುದೇ ನಮ್ಮ ಆತ್ಮೀಯ ಸ್ನೇಹಿತರ ಹತ್ತಿರ ಅಲ್ವಾ? ನಮ್ಮ ಜೀವನದ ಪ್ರತಿ ಘಟನೆಯನ್ನು ಅವರೆದುರು ತೆರೆದಿಡುವ ನಾವು, ಅವರಿಗಾಗಿ ಒಂದು ಚಿಕ್ಕ ಉಡುಗೊರೆಯಾದ್ರೂ ಕೊಡಬೇಕಲ್ಲವೇ? ಸುಮ್ ಸುಮ್ಮನೆ ಗಿಫ್ಟ್ ಕೊಡುವುದು ಸರಿಯನ್ನಿಸಲ್ಲ ಎಂಬುದು ಬಹುತೇಕರ ಅಭಿಮತ. ಅದಕ್ಕೆ ಫಾದರ್ಸ್ ಡೇ, ಮದರ್ಸ್ ಡೇ, ಸಿಸ್ಟರ್ಸ್ ಡೇ, ಬ್ರದರ್ಸ್ ಡೇ, ವ್ಯಾಲೆಂಟೈನ್ಸ್ ಡೇ ಇದ್ದಂತೆ ಬೆಸ್ಟ್‌ ಫ್ರೆಂಡ್ಸ್‌ಗಳಿಗೂ ಒಂದು ದಿನ ಬೇಕಲ್ಲವೆ? ಅದೇ ಕಣ್ರಿ..ಸ್ನೇಹಿತರ ದಿನ. ಬಂದೇಬಿಡ್ತು! ಇದೇ ಭಾನುವಾರ(ಆ.4); ಅಂದರೆ ಆಗಸ್ಟ್‌ ತಿಂಗಳ ಮೊದಲ ಭಾನುವಾರ.

’ಸ್ನೇಹಿತರ ದಿನಾಚರಣೆಗೆಂದೇ ತರಹೇವಾರಿ ಫ್ರೆಂಡ್‌ಶಿಪ್‌ ಬ್ಯಾಂಡ್‍ಗಳು, ರಿಂಗ್‍ಗಳು, ಬ್ರಾಸ್ಲೆಟ್‍ಗಳು, ಗಿಫ್ಟ್‌ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪ್ರತಿ ವರ್ಷ ಸ್ನೇಹಿತರ ದಿನಾಚರಣೆಗೆಂದೆ ವಿಶೇಷ ಗಿಫ್ಟ್‌, ಫಿಂಗರ್ ರಿಂಗ್‍ಗಳು, ಫ್ರೆಂಡ್‌ಶಿಪ್‌ ರೋಲ್‍ಗಳು, ಕೀ ಚೈನ್‍ಗಳು ಇತ್ಯಾದಿಗಳನ್ನು ಬಾಂಬೆಯಿಂದ ತರಿಸುತ್ತೇವೆ. ವಿಶೇಷವಾಗಿ ಶಾಲಾ ಮಕ್ಕಳು ಫ್ರೆಂಡ್‌ಶಿಪ್‌ ರೋಲ್‍ಗಳನ್ನು ಮತ್ತು ಕಾಲೇಜು ವಿದ್ಯಾರ್ಥಿಗಳು ಬ್ರಾಸ್ಲೆಟ್‍ಗಳನ್ನು ಹೆಚ್ಚು ಖರೀದಿಸುತ್ತಾರೆ‘ ಎನ್ನುತ್ತಾರೆ ಮಾರುತಿನಗರದಲ್ಲಿರುವ ರೇಣುಕಾ ಫ್ಯಾನ್ಸಿ ಸ್ಟೋರ್‌ನ ಮಾಲೀಕ ಮಂಜುನಾಥ ಆಲೂರ.

ಹತ್ತು ರೂಪಾಯಿಯಿಂದ ಆರಂಭವಾಗುವ ಫ್ರೆಂಡ್‌ಶಿಪ್‌ ಬ್ಯಾಂಡ್‍ಗಳು 35ರೂಪಾಯಿವರೆಗೆ ಸಿಗುತ್ತವೆ. ಮತ್ತು ರಿಂಗ್‍ಗಳು ಕಲರ್ ಕಲರ್‌ಗಳಲ್ಲಿ ಲಭ್ಯವಿದ್ದು, ಚಿಕ್ಕ ಮಕ್ಕಳಿಗೆ ಸರಿಹೊಂದುವಂತಹವು 5 ರೂಪಾಯಿಗೆ ಹಾಗೂ ವಯಸ್ಕರಿಗಾಗಿ ಮೆಟಲ್‍ನ ರಿಂಗ್‍ಗಳಿದ್ದು, ಅವು 25 ರಿಂದ 30ರೂಪಾಯಿವರೆಗೆ ಸಿಗುತ್ತವೆ. ಇನ್ನು ಕೀ ಚೈನ್, ಗಿಫ್ಟ್ ಐಟಮ್ಸ್ ಮತ್ತು ಗ್ರಿಟಿಂಗ್ಸ್‌ಗಳು ₹150 ರವರೆಗೆ ಲಭ್ಯ.

ಫ್ರೆಂಡ್‌ಶಿಪ್‌ ಡೇ ಹಿಂದಿನ ದಿನ ಮತ್ತು ಸೋಮವಾರ ಹೆಚ್ಚು ವ್ಯಾಪಾರ ಆಗುತ್ತದೆ ಎನ್ನುವ ಮಂಜು, ’ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ ಬಳಸುವ ಯುವಜನತೆ ಹೆಚ್ಚಾಗಿರುವುದರಿಂದ ಮೆಸೆಜ್‍ಗಳಲ್ಲೇ ವಿಶ್‌ ಮಾಡುವವರೇ ಜಾಸ್ತಿಯಾಗಿದ್ದಾರೆ. ಇದರಿಂದ ವ್ಯಾಪಾರ ಸ್ವಲ್ಪ ಕುಂಠಿತವಾಗುತ್ತದೆ‘ ಎನ್ನುತ್ತಾರೆ.

ಹೌದು ರಕ್ತಸಂಬಂಧವನ್ನು ಮೀರಿದ ಬಾಂಧವ್ಯ ಸ್ನೇಹ ಸಂಬಂಧ. ಅದು ಹಣದಿಂದ ಕೊಳ್ಳುವಂತದ್ದಲ್ಲ, ಅಳತೆ ಮಾಡಿ ತೂಕಕ್ಕೆ ಹಾಕುವಂತದ್ದೂ ಅಲ್ಲ. ಹೇಳಿಕೊಳ್ಳಲಾಗದ ಭಾವನೆ, ಅನುಭವಕ್ಕೆ ಮಾತ್ರ ದಕ್ಕುವಂತದ್ದು.

ಡಿಗ್ರಿ, ಪಿಜಿ ಲೇವೆಲ್‍ನ ಸ್ನೇಹಿತರಲ್ಲಿ ದ್ವೇಷವಿರಬಹುದು. ಆದರೆ ಚಿಕ್ಕ ಮಕ್ಕಳಲ್ಲಿ ಸಣ್ಣ-ಸಣ್ಣ ವಿಷಯಕ್ಕೆ ಉಂಟಾದ ಜಗಳ, ಕೋಪ ಒಂದು ಫ್ರೆಂಡ್‌ಶಿಪ್‌ ಬ್ಯಾಂಡ್‍ನ ಮೂಲಕ ಕೂಡಿಕೊಳ್ಳುತ್ತದೆ. ಒಂದು ಪ್ರೀತಿಯ ಅಪ್ಪುಗೆ, ಮುದ್ದು-ಮುದ್ದು ಕೈಗಳ ಶೇಕ್ ಹ್ಯಾಂಡ್‍ನ ಮೂಲಕ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಕೊಳ್ಳುತ್ತದೆ. ಮಕ್ಕಳಲ್ಲಿರುವ ಮುಗ್ಧತೆ, ದೊಡ್ಡವರಲ್ಲಿ ಕಾಣುವುದು ವಿರಳ. ಸ್ನೇಹಸಂಬಂಧದಲ್ಲಿ ಸೋತಾಗಲೇ ಗೆಲುವು ಎನ್ನುವುದು ದಕ್ಕುವುದು. ಕಾರಣವಿಲ್ಲದೆ ಹುಸಿಮುನಿಸೊಂದು ನಿಮ್ಮ ಮಧ್ಯೆ ತಡೆಗೋಡೆ ನಿರ್ಮಿಸಿದ್ದರೆ, ಅಹಂಗೊಂದು ಫುಲ್‍ಸ್ಟಾಪ್ ಇಟ್ಟು, ನಗುವ ಇಮೋಜಿಯೊಂದಿಗೆ ಒಂದು ವಿಶ್ ನಿಮ್ಮ ಹೆಸರಿನಲ್ಲಿ ಅವರ ಮೊಬೈಲ್‍ನ ಇನ್‌ಬಾಕ್ಸ್‌ಗೆ ಕಳಿಸಿಬಿಡಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ.

Post Comments (+)