ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟದ ನಾಟಕೋತ್ಸವ

7

ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟದ ನಾಟಕೋತ್ಸವ

Published:
Updated:

ಧಾರವಾಡ: ‘ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಅರಿವು ಮೂಡಿಸುವ ಯೋಜನೆ ಅಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣದ ಆಶ್ರಯದಲ್ಲಿ, ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟದ ನಾಟಕೋತ್ಸವ ಆ.3 ರಿಂದ 5ರ ವರೆಗೆ ನಡೆಯಲಿದೆ’ ಎಂದು ರಂಗಾಯಣ ನಿರ್ದೇಶಕ ಪ್ರಮೋದ ಶಿಗ್ಗಾಂವ್ ಹೇಳಿದರು.

‘ಆ.3 ರಂದು ಸಂಜೆ 6ಕ್ಕೆ ಸೃಜನಾ ರಂಗಮಂದಿರದಲ್ಲಿ ಡಾ. ರಾಜೇಶ್ವರಿ ಮಹೇಶ್ವರಯ್ಯ ನಾಟಕೋತ್ಸವಕ್ಕೆ ಚಾಲನೆ ನೀಡುವರು. ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ ಆಗಮಿಸಲಿದ್ದಾರೆ. ಕೆ.ವೈ. ನಾರಾಯಣ ಸ್ವಾಮಿ, ಶಶಿಧರ ಬಾರಿಘಾಟ, ನಾ.ದಾಮೋದರ ಶೆಟ್ಟಿ, ಶಂಕರಯ್ಯ ಘಂಟಿ, ಬಿ.ಆರ್. ಪೊಲೀಸ್‌ಪಾಟೀಲ ಪಾಲ್ಗೊಳ್ಳುವರು’ ಎಂದರು.

‘ನಾಟಕೋತ್ಸವದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಅರಿವು ಮೂಡಿಸುವ ನಾಟಕಗಳು ಪ್ರದರ್ಶನಗೊಳ್ಳಲಿವೆ. ಆ.3 ರಂದು ಸಂಜೆ 7ಕ್ಕೆ ಸೃಜನಾ ರಂಗಮಂದಿರದಲ್ಲಿ ಬೆಂಗಳೂರಿನ ದೃಶ್ಯ ಕಾವ್ಯ ತಂಡದಿಂದ ‘ರೇವತಿ’, ಆ.4 ರಂದು ಸಂಜೆ 7ಕ್ಕೆ ಬೆಂಗಳೂರಿನ ದೃಶ್ಯ ತಂಡದಿಂದ ‘ವಿನಾಶಕಾಲೇ’ ನಾಟಕ, ಆ.5 ರಂದು ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಸಂಜೆ 7ಕ್ಕೆ ಗರಿಕೆ ಬೂಡಿಕೋಟೆ ತಂಡದಿಂದ ‘ಕಸಿಗಿಡದ ಹೂವು’ ಹಾಗೂ ಅಂದೇ ಸಂಜೆ 8ಕ್ಕೆ ಚಿಕ್ಕಮಗಳೂರು ತಂಡದಿಂದ ‘ಪೂರ್ವಿ ಕಲ್ಯಾಣಿ’ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ಹೇಳಿದರು.

‘ರಂಗಾಯಣದಲ್ಲಿ 20 ದಿನಗಳಿಂದ ನಡೆಯುತ್ತಿರುವ ‘ಶಬ್ದ-ನಿಶ್ಯಬ್ದ’ ಒಂದು ಹುಡುಕಾಟ ಕಾರ್ಯಾಗಾರದ ಸಮಾರೋಪ ಸಮಾರಂಭ ಆ.2 ರಂದು ಸಂಜೆ 7ಕ್ಕೆ ರಂಗಾಯಣದ ಬಸವರಾಜ ರಾಜಗುರು ಬಯಲು ರಂಗದ ಒಳಾಂಗಣದಲ್ಲಿ ನಡೆಯಲಿದೆ. ಈ ವೇಳೆ ರಂಗಾಯಣದ ನಟರಿಂದ ‘ಶಬ್ದಗುಣಂ’ ಹಾಗೂ ಹವ್ಯಾಸಿ ನಟ ವರ್ಗದಿಂದ ‘ಚೋರ ಚರಣದಾಸ’ ಪ್ರಾತ್ಯಕ್ಷಿತೆ ಪ್ರದರ್ಶನವಾಗಲಿದೆ. ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ, ರಂಗ ಕಾರ್ಯಾಗಾರದ ನಿರ್ದೇಶಕ ಭೂಷಣ ಭಟ್ ಭಾಗವಹಿಸುವರು’ ಎಂದರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ನಿರ್ದೇಶಕ ಭೂಷಣ ಭಟ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !