ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನೆಪ: ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಗ್ರಹಣ

ಎರಡು ವರ್ಷದಿಂದ ಗ್ರಾ.ಪಂ.ಗಳ ಕೈ ಸೇರದ ಪುರಸ್ಕಾರ
Last Updated 3 ಅಕ್ಟೋಬರ್ 2021, 6:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಥಳೀಯ ಆಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯ್ತಿಗಳಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು, ಪ್ರತಿ ವರ್ಷ ಗಾಂಧಿ ಜಯಂತಿಯಂದು ನೀಡುತ್ತಿದ್ದ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಎರಡು ವರ್ಷಗಳಿಂದ ಗ್ರಹಣ ಹಿಡಿದಿದೆ. ಪುರಸ್ಕಾರ ಕೇವಲ ಘೋಷಣೆಯಾಗಷ್ಟೇ ಉಳಿದಿದೆ.

ತಳಮಟ್ಟದ ಆಡಳಿತ ಕೇಂದ್ರಗಳನ್ನು ಪ್ರೋತ್ಸಾಹಿಸಲು ನೀಡುವ ಈ ಪುರಸ್ಕಾರವು ₹5 ಲಕ್ಷದ ಚೆಕ್, ಪ್ರಶಸ್ತಿ ಫಲಕ ಹಾಗೂ ಅಭಿನಂದನಾ ಪತ್ರವನ್ನು ಒಳಗೊಂಡಿರುತ್ತದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದ ಇಲಾಖೆಯು ಆಯ್ಕೆಯಾದ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒಗೆ ಪುರಸ್ಕಾರ ಪ್ರದಾನ ಮಾಡುತ್ತಿತ್ತು. ಆದರೆ, 2019–20 ಮತ್ತು 2020–21ನೇ ಸಾಲಿನಲ್ಲಿ ಕಾರ್ಯಕ್ರಮ ಆಯೋಜಿಸಿಲ್ಲ.

‘ನಮ್ಮ ಪಂಚಾಯ್ತಿಯು 2019–20ನೇ ಸಾಲಿನಲ್ಲಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾಗಿತ್ತು. ಆದರೆ, ಎರಡು ವರ್ಷವಾದರೂ ಪುರಸ್ಕಾರ ನಮ್ಮ ಕೈಸೇರಿಲ್ಲ. ಈ ವರ್ಷವಾದರೂ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಇಲಾಖೆಯ ಅಧಿಕಾರಿಗಳಿಂದ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಯಾವಾಗ ಕೊಡುತ್ತಾರೊ ಕಾದು ನೋಡಬೇಕು’ ಎಂದು ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ರವಿ ಹುಲ್ಲಂಬಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ವರ್ಷವೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಿಂದ ಮಾಹಿತಿ ಸಂಗ್ರಹಿಸಿ, ಪ್ರತಿ ತಾಲ್ಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಪಂಚಾಯ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯ್ತಿಗಳ ಹೆಸರು ಸಹ ಘೋಷಣೆಯಾಗಿದೆ. ಇಲಾಖೆಯ ಆಯುಕ್ತರ ಕಚೇರಿಯೇ ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತದೆ’ ಎಂದು ಧಾರವಾಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಸುಶೀಲಾ ಹೇಳಿದರು.

ಕೋವಿಡ್‌ನಿಂದ ವಿಳಂಬ
‘ಕೋವಿಡ್–19ನಿಂದಾಗಿ ಪುರಸ್ಕಾರವನ್ನು ಪ್ರದಾನ ಮಾಡಿಲ್ಲ. ಇಲ್ಲದಿದ್ದರೆ, ಆಯಾ ವರ್ಷವೇ ಪ್ರದಾನ ಮಾಡುತ್ತಿದ್ದೆವು. ಕಳೆದ ವರ್ಷ ಕಾರ್ಯಕ್ರಮ ಆಯೋಜಿಸುವಂತಿರಲಿಲ್ಲ. ಈ ವರ್ಷ ಮೂರನೇ ಅಲೆಯ ಆತಂಕವಿರುವುದರಿಂದ, ಗಾಂಧಿ ಜಯಂತಿಯಂದು ಕಾರ್ಯಕ್ರಮ ಆಯೋಜಿಸಿಲ್ಲ. ಪರಿಸ್ಥಿತಿ ನೋಡಿಕೊಂಡು ಅಕ್ಟೋಬರ್‌ ತಿಂಗಳೊಳಗೆ ಪುರಸ್ಕಾರ ಪ್ರದಾನ ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಣಕಾಸಿನ ನಿರ್ವಹಣೆ, ಮೂಲಸೌಕರ್ಯ, ಉತ್ತಮ ಆಡಳಿತ ಹಾಗೂ ಜೀವನ ಗುಣಮಟ್ಟ ಸುಧಾರಣೆ ವಿಷಯದಲ್ಲಿ ಪಂಚಾಯ್ತಿಗಳು ಮಾಡಿರುವ ಸಾಧನೆಯನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ. ಈ ಕುರಿತು ಇಲಾಖೆ ನೀಡುವ ಪ್ರಶ್ನಾವಳಿಗೆ ಪಂಚಾಯ್ತಿಗಳಿಂದ ಪ್ರತಿಕ್ರಿಯೆ ಪಡೆಯುವ ಜಿಲ್ಲಾ ಮಟ್ಟದ ಸಮಿತಿ, ಅಂತಿಮವಾಗಿ ಪ್ರತಿ ತಾಲ್ಲೂಕಿನಿಂದ ತಲಾ ಒಂದು ಪಂಚಾಯ್ತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡುತ್ತದೆ.

‘ಬಹುಮಾನ ಮೊತ್ತ ಕಡಿತ’
‘ಅನುದಾನದ ಕೊರತೆಯಿಂದಾಗಿ ಪುರಸ್ಕಾರದೊಂದಿಗೆ ನೀಡುತ್ತಿದ್ದ ₹5 ಲಕ್ಷ ಮೊತ್ತವನ್ನು ಕಡಿತ ಮಾಡಲಾಗುವುದು. ಅನುದಾನದ ಲಭ್ಯತೆ ನೋಡಿಕೊಂಡು ಬಹುಮಾನದ ಮೊತ್ತವನ್ನು ನಿಗದಿಪಡಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಧಾನ ಕಾರ್ಯದರ್ಶಿಎಲ್‌.ಕೆ. ಅತೀಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT