ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅಪ್ಪು–ಗಣೇಶನಿಗೆ ಭಾರಿ ಬೇಡಿಕೆ

ಹುಬ್ಬಳ್ಳಿಯ ಕಾಂಬಳೆ ಕುಟುಂಬ ಸಿದ್ಧಪಡಿಸಿದೆ ಅಪ್ಪು–ಗಣೇಶನ 10 ಮೂರ್ತಿಗಳು
Last Updated 30 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಹಲೋಕ ತ್ಯಜಿಸಿ 10 ತಿಂಗಳೇ ಗತಿಸಿವೆ. ಪ್ರತಿಕ್ಷಣ ಅವರನ್ನು ಅಭಿಮಾನಿಗಳು ಸ್ಮರಿಸಿದ್ದಾರೆ. ಹಲವು ಜಾತ್ರೋತ್ಸವಗಳಲ್ಲಿ, ಶೋಭಾಯಾತ್ರೆ
ಗಳಲ್ಲಿ ಅವರ ಭಾವಚಿತ್ರ ಮೆರವಣಿಗೆ ಮಾಡಿದ್ದರು. ಸಭೆ–ಸಮಾರಂಭಗಳಲ್ಲಿ ಅಭಿಮಾನಿಗಳು ಸ್ಮರಿಸಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ಗಣೇಶೋತ್ಸವದಲ್ಲಿಯೂ ಅವರನ್ನು ಸ್ಮರಿಸುವ ಕೆಲಸ ನಡೆದಿದೆ. ಗಣೇಶನ ಜೊತೆ ಅಪ್ಪುವಿನ ಮೂರ್ತಿ ಇಡಲು ಮುಂದಾಗಿದ್ದಾರೆ. ಅಪ್ಪು–ಗಣೇಶ ಮೂರ್ತಿಗಳಿಗೆ ಅಭಿಮಾನಿಗಳಿಂದ ಬೇಡಿಕೆ ಹೆಚ್ಚಿದೆ.

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಬೇಡಿಕೆ ವಿನಂತಿಗೆ ಓಗೊಟ್ಟ ವಾಣಿಜ್ಯನಗರದ ಬಮ್ಮಾಪುರ ಓಣಿಯ ಗಣಪತಿ ಮೂರ್ತಿ ಕಲಾವಿದ ವಿಜಯಕುಮಾರ ಕಾಂಬಳೆ ಅಪ್ಪು–ಗಣೇಶನ ಹತ್ತು ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಈ ಹತ್ತರಲ್ಲಿ ಮೂರು ಹುಬ್ಬಳ್ಳಿ ನಗರದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಉಳಿದವು ಹಾವೇರಿ, ರಾಣೆಬೆನ್ನೂರು, ಧಾರವಾಡ, ಬೆಳಗಾವಿ, ದಾವಣಗೆರೆ, ಮಂಗಳೂರು, ಬೆಂಗಳೂರಿಗೆ ಹೋಗಲಿವೆ.

ಕಾಂಬಳೆ ಕುಟುಂಬ 150 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಲೇ ಬಂದಿದೆ. ಈ ಬಾರಿ 300 ಗಣೇಶ ಮೂರ್ತಿಗಳ ಜೊತೆಗೆ ವಿಶೇಷ ಬೇಡಿಕೆ ಮೇರೆಗೆ 10 ಅಪ್ಪು–ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.

‘ಕಳೆದೆರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಗಣಪತಿ ಹಬ್ಬ ಕಳೆಗುಂದಿದ್ದರಿಂದ ಮೂರ್ತಿ ತಯಾರಿಕೆಯಲ್ಲಿ ನಷ್ಟವಾಗಿತ್ತು. ಆದರೆ ಈ ಭಾರಿ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಜನರು ಉತ್ಸುಕರಾಗಿದ್ದಾರೆ. ಅಪ್ಪು–ಗಣೇಶ ಮೂರ್ತಿಗಾಗಿ ಅಭಿಮಾನಿಗಳು ಮೂರು ತಿಂಗಳ ಹಿಂದೆಯೇ ಬೇಡಿಕೆಯನ್ನಿಟ್ಟಿದ್ದಾರೆ. ಆದರೆ ಗಣೇಶ ಚೌತಿ ಹತ್ತಿರ ಬರುತ್ತಲೇ ಅಪ್ಪು–ಗಣೇಶನ ಮೂರ್ತಿಗೆ ಬೇಡಿಕೆ ಇಡುವವರು ಹೆಚ್ಚಿದ್ದಾರೆ. ಆದರೆ ತಡವಾಗಿ ಬಂದ ಆರ್ಡರ್‌ಗಳನ್ನು ಪೂರೈಸಲಾಗಲಿಲ್ಲ’ ಎಂದು ಗಣೇಶ ಮೂರ್ತಿ ಕಲಾವಿದ ರಿತೇಶ ಕಾಂಬಳೆ ಹೇಳಿದರು.

ಈ ಬಾರಿ 50ಕ್ಕೂ ಹೆಚ್ಚು ಅಪ್ಪು–ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿದ್ದು, ಸಮಯಾಭಾವದಿಂದ, ನಿರಂತರ ಮಳೆಯಿಂದ ಆರ್ಡರ್‌ಗೆ ಒಪ್ಪಿಕೊಳ್ಳಲಾಗಲಿಲ್ಲ ಎಂದು ಗಣೇಶ ಮೂರ್ತಿ ಕಲಾವಿದ ವಿಜಯಕುಮಾರ ಕಾಂಬಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT