ಸೋಮವಾರ, ಏಪ್ರಿಲ್ 19, 2021
32 °C

ನೆರೆ ಬಂದಿತಣ್ಣ ಗಂಗಿಗೂ ಗೌರಿಗೂ ಮುನಿಸುಗಣಪನಿಗಿನ್ನೆಲ್ಲಿ ಸೊಗಸು

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

ಗಂಗೆಗೂ ಗೌರಿಗೂ ಮುನಿಸಂತ..
ಗಣಪಗ ಎಲ್ಲಿಲ್ಲದ ತ್ರಾಸಂತ

ಗಣಪತಿ ಕಥಿ ಹೇಳೂಮುಂದೆಲ್ಲ ನನಗ ಈ ಪಾರ್ವತಿ ಮೈಮ್ಯಾಗ ಯಾಕಷ್ಟು ಮಣ್ಣು ಕುಂತಿತ್ತು... ಅಂತನ್ನೂ ಪ್ರಶ್ನೆ ಮೂಡ್ತಿತ್ರಿ. ಅವಾಗೆಲ್ಲ ಏನು ಬೇಕಾದ್ರೂ ಪ್ರಶ್ನೆ ಕೇಳಬಹುದಿತ್ತು. ಎಷ್ಟು ಬೇಕಾದರೂ ಕೇಳಬಹುದಿತ್ತು. ಯಾರಿಗೆ ಬೇಕಾದ್ರೂ ಕೇಳಬಹುದಿತ್ತು..  ಯಾರಿಗರೆ ಯಾಕ ಕೇಳೂದು..? ಕಥಿ ಹೇಳಿದ್ದ ಅಜ್ಜಗ ಕೇಳ್ತಿದ್ದೆ.. ‘ಅಜ್ಜಾ, ಯಾಕಜ್ಜಾ... ಅಕಿನ ಮೈ ಮ್ಯಾಲೆ ಅಷ್ಟು ಮಣ್ಣಿತ್ತು?’ 

‘ಕಥಿಯಂದ್ರ ಕಥಿ ಕೇಳಬೇಕವಾ.. ಬರೆ ಹೂಂ ಅನ್ಬೇಕು. ಕಥಿಯೊಳಗ ಪ್ರಶ್ನೆ ಕೇಳಿದ್ರ ಕಥಿನೇ ಮರೀತೈತಿ’ ಅಂತಿದ್ದ ನಮ್ಮಜ್ಜ. ಇಲ್ಲಾಂದ್ರ ನೀ ಕೇಳು, ನೀ ಕೇಳಿದ್ದಕ್ಕೆಲ್ಲ ಉತ್ರ ಹುಡುಕೂನಂತ.. ಯಾರಿಗೆ ಗೊತ್ತು ಹೊಸ ಕಥಿನೂ ಸಿಗಬಹುದು ಅಂತಿದ್ದ ನಮ್ಮಜ್ಜ, ಬೊಚ್ಚುಬಾಯಿ ಬಿಟ್ಟು ನಕ್ರ.. ಅಜ್ಜಗೇನು, ಗೌರವ್ವಗ ಪ್ರಶ್ನೆ ಕೇಳಬಹುದು ಅನ್ನೂ ಧೈರ್ಯ ಮೂಡ್ತಿತ್ತು. 

ಅಗಾ.. ಕಥಿಗೆ ಹೂಂ ಅನ್ಲಿಲ್ಲಂದ್ರ ಹಿಂಗ ದಾರದಿಕ್ಕು ಬಿಟ್ಟು ಹಾರಾಡಿಬಿಡ್ತದ.. ಈ ಸಲ ಗಣಪ್ಪಗ ಏನು ಮಾಡ್ಬೇಕು ಅನ್ನೂದ ಮೂಲ ಪ್ರಶ್ನೆ. ಪಿಒಪಿ ಮಾಡಿದ್ರ ಭೂಮ್ತಾಯಿ ಒಲ್ಲೆ ಅಂತಾಳ. ಗಂಗಿ ಮಡಿಲಿಗಿ ಬಾ ಅಂತ ಕರಕೊಳ್ಳೂದಿಲ್ಲ.. ಗಣಪ್ಪ ತ್ರಿಶಂಕು ಸ್ವರ್ಗದಾಗ ಇದ್ದಂಗ ಇರಬೇಕಾಗ್ತದ. ಮಣ್ಣಿಂದು ಮಾಡೂನಂದ್ರ ಈ ಸಲ ಗಂಗಿಗೆ ಅದೆಷ್ಟು ಸಿಟ್ಟು ಬಂದಿತ್ತಂದ್ರ ಉಕ್ಕಿ ಹರದ್ಲು ನೋಡ್ರಿ..ಶಿವನ ಜಟೆಯಿಂದ.. ಗೌರಿ ಮ್ಯಾಲೇನು, ಭೂಮಿ ಮ್ಯಾಲೆ ಮಣ್ಣುಳಿಸಿಲ್ಲ. 

ಇನ್ನ ಗಣಪ್ಪನ್ನ ಮಾಡೂದು ಹೆಂಗ? ಗೌರಿನ್ನ ಕುಂದರಸೂದು ಹೆಂಗ? ಗಣಪ್ಪನ್ನ ಕಳಸೂದೆಲ್ಲಿ.. ಇಂಥ ಪ್ರಶ್ನೆಗಳು ನಮಗ, ನಿಮಗ ಹುಟ್ತಾವ್ರಿ. ಆದ್ರ ನಮ್ಮಂದಿಗೆ ಏನರೆ ಯಾಕ ಆಗವಲ್ದು, ಜೀವ ತೊಯ್ದು ಕಾಗಿ ಆದ್ಹಂಗರೆ ಆಗಲಿ.. ಆದ್ರ ದೇವರಿಗೆ ಮಾತ್ರ ಯಾವ ಲೋಪನೂ ಅಗಬಾರದು. ಯಾಕಂದ್ರ ನಮ್ಮಲ್ಲಿ ಶ್ರಾವಣ ರಾವಣ ಕುಣದ್ಹಂಗ ಬಂದ್ರೂ.. ಲಕುಮಿಗೇನೂ ಕಡಿಮಿ ಮಾಡ್ಲಿಲ್ಲ.

ಇರಲಿ ಬಿಡವಾ ನಮ್ಮ ಲಕ್ಷ್ಮಿಯೇನು ಹೆಚ್ಚಿಂದು ಕೇಳೂದಿಲ್ಲ. ಕಡಲಿ ಉಸುಳಿ, ಪುಠಾಣಿ ಸಕ್ರಿ ನೈವೇದ್ಯಕ್ಕ ಇಟ್ಟರೂ ಸಾಕು.. ಅಕಿಯೇನು ಪರಮಾನ್ನ ಬಯಸೂದಿಲ್ಲ ಅಂದೋರ, ಲಕ್ಷ್ಮಿಗೆ ಜಗುಲಿಗೆ ಕುಂದರಸೇ ಬಿಟ್ರು. ಆದಷ್ಟೂ ಸರಳ ಹಬ್ಬ ಮಾಡ್ಕೊಂಡ್ರು. ನಾಗಪ್ಪಗೂ ಅಷ್ಟೆ! ಮಾಡಿದ್ದ ಉಂಡಿ ಸಂತ್ರಸ್ತರಿಗೆ ಹಂಚಿದ್ರು. ಶ್ರಾವಣದ ಜಾಗರಣಿ ಅದೆಷ್ಟು ಮಂದಿ ಪರಿಹಾರ ಕೇಂದ್ರದಾಗ ಕಳದ್ರೋ ಗೊತ್ತಿಲ್ಲ.

ವರ್ಷಾನುಗಟ್ಲೆ ಸಾಕಾಗುವಷ್ಟು ಮನ್ಯಾಗಿಟ್ಟಿದ್ದ ಧಾನ್ಯ ಕಾಳಿಗೆ, ಕೃಷ್ಣೆಗ, ವರದಾಗ, ಧರ್ಮಾಗ ಎಲ್ಲಾರಿಗೆ ಕೊಟ್ಟು ತಾವು, ಖಟಿರೊಟ್ಟಿಗೆ ಕೈ ಚಾಚಿದ್ರು. ದೇವರ ಪಟಗಳನ್ನು ಎದೆಗವಚಿ ಮನಿಯಿಂದ ಹೊರ ತಂದ್ರು. ದೇವರು ಉಳೀಬೇಕ್ರೀ.. ಜೀವ ತಾನೇ ಉಳೀತದ ಅಂತ ಎಲ್ಲವನ್ನೂ ‘ಕೃಷ್ಣಾರ್ಪಣಮಸ್ತು’ ಅಂದ್ಹಂಗ ವೇದಾಂತಿಗಳಾದ್ರು.

ಮಳಿ ನಿಂತಿತು. ನೆರೆ ನಿಂತಿತು. ನೀರೂ ಹಂಗ ನಿಂತಿತ್ತು. ನೀರು ಬಾಚಿ ಹೊರಚೆಲ್ಲುಮುಂದ ಬರೇ ನೀರು ಚೆಲ್ಲಲಿಲ್ಲ. ತಮ್ಮ ಕನಸುಗಳೆಲ್ಲವನ್ನೂ ಚೆಲ್ಲಿದರು. ಗಳಿಕಿ ಚೆಲ್ಲಿದರು. ಉಳಿತಾಯವನ್ನೂ ಚೆಲ್ಲಿದರು. ಛಲ್ಕೊಂತ ಛಲ್ಕೊಂತ ಮನಿಯೊಳಗಿನ ನೀರಷ್ಟೇ ಅಲ್ಲ, ಕಣ್ಣೀರನ್ನೂ ಖಾಲಿ ಮಾಡಿದ್ರು. 

ಎದಿ ಒಡೀತೈತಿ.. ಆ ಒಡಕಲು ಬಿಂಬಗಳ ಚಿತ್ರ ನೋಡಿದಾಗ.. ಕುಸದ ಬಿದ್ದ ಮನಿಮುಂದ ನಿಂತು ಇಲ್ಲಿ ನಮ್ಮ ಪಡಸಾಲಿ ಇತ್ರಿ, ಇಲ್ಲಿ ಮಕ್ಕಳ ಸಾಲಿ ಚೀಲ ಇದ್ವುರಿ.. ಅಕ್ಕಿ ಯಾರರೆ ಕೊಟ್ಟಾರು.. ಅನ್ನಕ್ಕ ಪಾತ್ರಿ ಇಲ್ಲ. ಪಾತ್ರಿ ಇದ್ರೂ ತಾಟು ಬಟ್ಲಾ ಸೈತ ಉಳದಿಲ್ಲ. ಕಸುವು ಇರೂತನಾ ದುಡೀತೇವ್ರಿ. ಕಾಸು ನಾಲ್ಕು ದಿನಾ ಬರೂದಿಲ್ಲ.. ಲೆಕ್ಕ ಹಾಕೋರು ಏನು ಲೆಕ್ಕಾ ಹಾಕ್ತಾರ? ಯಾರರೆ ಕೊಟ್ರೂ ಎಷ್ಟು ದಿನಾ ಕೊಡ್ತಾರ... ಇಂಥ  ಮಾತುಗಳು ಗಂಟಲಿನಿಂದಾಚೆ ಬರದಂತೆ.. ಎಲ್ಲಿಂದ ಸುರಿದವೋ ಇಷ್ಟು ಮಳೆ ಅನ್ನೂಹಂಗ ಆಕಾಶ ನೋಡ್ಕೊಂತ ಕುಂದರ್ತಾರ.

ಆದರೂ ದೇವರಿಗೆ ಕಡಿಮಿ ಆಗಬಾರದ್ರಿ. ಎಲ್ಲಾ ಛೊಲೊ ಮಾಡ್ತಾನ ದೇವರು ಅಂತ ಮತ್ತ ಕೈ ಮುಗೀತಾರ.. ತೋಳೇರಿಸಿ, ಮನಿ ಸ್ವಚ್ಛ ಮಾಡ್ತಾರ.

ಗೋಕುಲಾಷ್ಟಮಿ ಬಂತಲ್ಲ ಅವಾಗೂ ಅಷ್ಟೆ. ಸಿಟಿಯೊಳಗೆಲ್ಲ ಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಖುಷಿ ಪಡೂಮುಂದ, ನೆರೆ ಬಂದ ಊರಾನ ಮಂದಿ ತಮ್ಮ ಗೋವುಗಳನ್ನು ನೆನಪಿಸಿಕೊಂಡು ಕಣ್ಣೀರಾದ್ರು. ಬೆಳಗ್ಗೆ ಎದ್ದು ಕೈಮುಗಿದು ಕಣ್ಮುಟ್ಟುತ್ತಿದ ಆಕಳು, ಕರು, ಎಮ್ಮಿ, ಎತ್ತು ಎಷ್ಟೋ ಮನಿಗಳಿಗೆ ಹೊಳ್ಳಿ ಬಂದೇ ಇಲ್ಲ. ನೀರಾಗ ಹರಕೊಂಡು ಹೋಗಿದ್ದೆಷ್ಟೊ, ಪರಿಹಾರ ಕೇಂದ್ರದೊಳಗ ನಿದ್ದಿಗಣ್ಣಾಗ ಸೈತ ಹುರ್‌.. ಹುಷ್‌ ಅಂದ್ಕೊಂಡು ತಮ್ಮ ಪ್ರಾಣಿಗಳ ಕಾಳಜಿ ಮಾಡ್ತಿದ್ದೋರು ಮನೀಗೆ ಬಂದ ಮ್ಯಾಲೆ ಎಲ್ಲಿ ಮಾಯವಾದೆಯೋ ಕೃಷ್ಣ.. ಅಂತ ಕಣ್ಣೀರಾದರು.

ನಾವಿಲ್ಲಿ ಬಟರ್‌, ಚೀಸು ಸವಿಯೂಮುಂದ ಅವರಲ್ಲಿ, ನಮಗ ಊಟ ಕೊಡ್ಲಿಕ್ರ ಚಿಂತಿಲ್ರಿ, ಮೇವಿನ ವ್ಯವಸ್ಥಾ ಮಾಡ್ರಿ. ಮೂಕು ಪ್ರಾಣಿಯವು. ನಮ್ಮ ಕಡೆ ನೋಡಿದ್ರ ಕರುಳು ಚುರ್‌ ಅಂತದ ಅಂತ ಕಣ್ಣೀರಾದ್ರು. ಆ ಉಪ್ಪುನೀರಿನ ಮುಂದ ಕಡಲಿನುಪ್ಪು ಸಹ ಮಂದ ಅನಸೂಹಂಗ ಆಗಿತ್ತು. ಜನ್ಮಾಷ್ಟಮಿಗೆ ಕೃಷ್ಣನ ಮುಂದ ಕೈಮುಗದು ನಿಂತ್ರು. ಮತ್ತ ಮೊದಲಿನಷ್ಟು ಹಸು, ಎಮ್ಮಿ, ಎತ್ತು ತರಾಕ ಆಗ್ತಾವೋ ಇಲ್ಲ, ಕಣ್ಬಿಟ್ರ ನೋಡಾಕ ಒಂದು ಗೋವು ಮನ್ಯಾಗಿರಲಿ ಅಂತ ಪ್ರಾರ್ಥಿಸಿದ ಕೈಗಳೆಷ್ಟೊ.. ಆದ್ರ ಪ್ರಾರ್ಥಿಸೂದು ಬಿಡೂದಿಲ್ಲ. ದೇವರ ಮುಂದ ಹಿಡಿಯಾಗೂದು ಮರಿಯೂದಿಲ್ಲ.

ಹಿಂಗಿದ್ದಾಗ ಚೌತಿ ಹೊಸ್ತಲನಾಗದ. ಗೌರಿಗೆ ಕುಂದರಸಬೇಕು. ಗಣಪ್ಪನ ಕೂರಸಬೇಕು. ಒಬ್ಬೊಬ್ಬರ ಮನ್ಯಾಗ ಒಂದೊಂದು ಪದ್ಧತಿ.  5, 9, 11 ದಿನ ಹಿಂಗ. ಎಲ್ಲಾ ಖರೆ ಯಾವ ಗಣಪ್ಪನ್ನ ಕುಂದರಸೂನು? ಇದು ನಾವು ನೀವುಗಳು ಕೇಳಿಕೊಳ್ಳಬೇಕಾದ ಪ್ರಶ್ನೆ. ನಮ್ಮೂರಾನ ಮಂದಿಗೆ ಅದು ಸಮಸ್ಯೆನೇ ಅಲ್ಲ. ಅಡಕಿ ಬೊಟ್ಟು ಇಟ್ರೂ ಗಣಪ್ಪನೇ. ದಾಸವಾಳ ಹೂವಿಟ್ರೂ ಗಣಪತಿನೇ. ಗೌರಿ ಮೈಯ್ಯಾಗ ಮಣ್ಣಿರಲಿಕ್ಕಿಲ್ಲ. ಗಂಗಿಗೆ ಕರುಣೆನೂ ಇರಲಿಕ್ಕಿಲ್ಲ. ಆದ್ರ ಗಣಪನ ಬಗ್ಗೆ ಭಕ್ತಿ ಕಡಿಮಿ ಇಲ್ಲ. ಗಣಪ್ಪಂಗೇ ಪ್ರಶ್ನೆ ಮಾಡ್ತಾರ ನಮ್ಮೋರು.. ಬಾಳೆಹಣ್ಣಿನ ತುದಿ ಮುರದು, ಸಕ್ರಿ ಇಟ್ಟು... ಈ ವರ್ಷ ಇಷ್ಟೇ ನೋಡಪಾ.. ಗಣಪಾ... ಸಾಕು ಹೌದಿಲ್ಲೊ ಅಂತ ಗಣಪ್ಪಗ ಪ್ರಶ್ನೆ ಹಾಕ್ತಾರ.

ಯಾಕಂದ್ರ ಅವನಿಗೆ ಪ್ರಶ್ನೆ ಕೇಳೂದ್ರಿಂದ ಯಾವ ಅಪಾಯನೂ ಇಲ್ಲ ಅನ್ನುವ ಖಾತ್ರಿ ಬ್ಯಾರೆ ಅದ.. ಅದಕ್ಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು