ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆ ₹ 216 ಕೋಟಿ, ಖರ್ಚು ₹5.5 ಕೋಟಿ!

ತೆವಳುತ್ತಾ ಸಾಗಿರುವ ಸ್ಮಾರ್ಟ್‌ ಸಿಟಿ ಯೋಜನೆ; ಟೆಂಡರ್‌ ಹಂತದಲ್ಲೇ ಕಾಮಗಾರಿಗಳು
Last Updated 22 ಮೇ 2018, 8:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವರ್ಷದ ಹಿಂದೆ ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿ ಹುಬ್ಬಳ್ಳಿಯ ಹೆಸರೂ ಕಾಣಿಸಿಕೊಂಡಾಗ ಅವಳಿ ನಗರದ ಜನರು ಸಂಭ್ರಮಿಸಿದ್ದರು. ಎಲ್ಲ ಕಾಮಗಾರಿಗಳು ಟೆಂಡರ್, ಪತ್ರ ವ್ಯವಹಾರ ಹಂತದಲ್ಲಿದ್ದು, ಇಲ್ಲಿಯವರೆಗೆ ಒಂದೇ ಒಂದು ಕಾಮಗಾರಿ ಜಾರಿಗೊಳ್ಳದಿರುವುದು ಜನರಲ್ಲಿ ಭ್ರಮ ನಿರಸನ ಮೂಡಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹ 216 ಕೋಟಿ ಅನುದಾನದಲ್ಲಿ ಕೇವಲ ₹ 5.5 ಕೋಟಿ ( ಶೇ 2.54) ಅನುದಾನ ಮಾತ್ರ ಖರ್ಚು ಮಾಡಲು ಸಾಧ್ಯವಾಗಿದೆ.

2017–18ನೇ ಆರ್ಥಿಕ ವರ್ಷದಲ್ಲಿಯೇ ಕೇಂದ್ರ ಸರ್ಕಾರ ₹ 111 ಕೋಟಿ ಹಾಗೂ ರಾಜ್ಯ ಸರ್ಕಾರ ₹ 105 ಕೋಟಿ ಅನುದಾನ ಬಿಡುಗಡೆ ಮಾಡಿವೆ. ಇಲ್ಲಿಯವರೆಗೆ ಆಡಳಿತಾತ್ಮಕ ಕಾರ್ಯಗಳಿಗೆ ಮಾತ್ರ ಹಣ ಖರ್ಚು ಮಾಡಲಾಗಿದೆ.  ಕಾಮಗಾರಿ ಅನುಷ್ಠಾನಕ್ಕೆ ಯಾವುದೇ ಖರ್ಚಾಗಿಲ್ಲ.

ಸ್ಮಾರ್ಟ್‌ ಸಿಟಿ ಕಚೇರಿ ನಿರ್ಮಾಣಕ್ಕೆ ₹39.50 ಲಕ್ಷ ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿತ್ತು. ಪೀಠೋಪಕರಣಗಳ ಅಳವಡಿಕೆ ಪೂರ್ಣಗೊಂಡಿದೆ. ವಿದ್ಯುತ್‌ ವೈರಿಂಗ್‌ ಮಾಡಲು ₹10 ಲಕ್ಷ ಬೇಕಾಗಿದೆ. ಅದಕ್ಕೆ ಪ್ರತ್ಯೇಕವಾಗಿ ಟೆಂಡರ್‌ ಕರೆಯಬೇಕಾಗಿದ್ದು, ಚುನಾವಣಾ ನೀತಿ ಸಂಹಿತೆಯಿಂದಾಗಿ ಕರೆಯಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್‌ ಹೇಳಿದರು.

ಪ್ರಧಾನಿ ಮೋದಿ ಉಲ್ಲೇಖ: ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹುಬ್ಬಳ್ಳಿಗೆ ಬಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಜ್ಯದ ಏಳು ಸ್ಮಾರ್ಟ್‌ ಸಿಟಿ ಯೋಜನೆಗಳ ಜಾರಿಗೆ ₹ 800 ಕೋಟಿ ಬಿಡುಗಡೆ ಮಾಡಲಾಗಿದ್ದು, ಕೇವಲ ₹ 14 ಕೋಟಿ ಮಾತ್ರ ಬಳಸಿಕೊಳ್ಳಲಾಗಿದೆ. ಕೇಂದ್ರದ ಅನುದಾನವನ್ನೂ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಟೆಂಡರ್‌ ಹಂತದಲ್ಲಿಯೇ ಕಾಮಗಾರಿಗಳು: ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕಂಪನಿಯು ಹುಬ್ಬಳ್ಳಿ–ಧಾರವಾಡ
ದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ವಿವಿಧ ಕಾಮಗಾರಿಗಳನ್ನು ಟೆಂಡರ್‌ ಹಂತದಲ್ಲಿಯೇ ಇವೆ. ಒಂದೇ ಒಂದು ಕಾಮಗಾರಿಯ ಅನುಷ್ಠಾನ ಆರಂಭವಾಗಿಲ್ಲ.

ನಗರದ 19 ಕಟ್ಟಡಗಳ ತಾರಸಿ ಮೇಲೆ ಸೋಲಾರ್ ವಿದ್ಯುತ್‌ ಉತ್ಪಾದನೆ ಕೈಗೊಳ್ಳಲು ಯೋಜಿಸಲಾಗಿದೆ. ಪ್ರತಿ ಯೂನಿಟ್‌ಗೆ ₹ 3.35 ರಂತೆ ಖರೀದಿಯ ದರ ನಿಗದಿ ಮಾಡಲಾಗಿದೆ. ಈ ಬೆಲೆ ಕಡಿಮೆಯಾಯಿತು ಎಂದು  ಟೆಂಡರ್‌ನಲ್ಲಿ ಭಾಗವಹಿಸಿದವರೂ ಹಿಂದೆ ಸರಿಯುತ್ತಿದ್ದಾರೆ.

ಸ್ಮಾರ್ಟ್‌ ಸಿಟಿಯ ನಿಯಂತ್ರಣ ಕೊಠಡಿ ಸ್ಥಾಪನೆಗೆ ₹ 39.50 ಕೋಟಿ,ಬಹುಮಹಡಿ ಕಾರ್‌ ಪಾರ್ಕಿಂಗ್‌ಗೆ ₹ 50 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ₹ 3.20 ಕೋಟಿ ಸೇರಿದಂತೆ ವಿವಿಧ ಕಾಮಗಾರಿಗಳು ಟೆಂಡರ್‌ ಹಂತದಲ್ಲಿವೆ.

ಟೆಂಡರ್‌ನಲ್ಲಿ ಗುತ್ತಿಗೆದಾರರೇ ಭಾಗವಹಿಸಿಲ್ಲ: ವಿದ್ಯುತ್‌ ಚಿತಾಗಾರ, ಎಲ್‌ಇಡಿ ಬಲ್ಬ್‌ ಅಳವಡಿಸುವ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿತ್ತು. ಯಾವುದೇ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ. ಎರಡನೇ ಬಾರಿಗೆ ಟೆಂಡರ್‌ ಕರೆದರೂ ಕಾಮಗಾರಿ ತೆಗೆದುಕೊಳ್ಳಲು ಯಾವುದೇ ಗುತ್ತಿಗೆದಾರರು ಮುಂದೆ ಬಂದಿಲ್ಲ.

ಟೆಂಡರ್‌ನಲ್ಲಿ ಗುತ್ತಿಗೆದಾರರು ಭಾಗವಹಿಸದಿರುವುದರಿಂದ ಯೋಜನೆ ಜಾರಿಗೆ ಏನು ಮಾಡಬೇಕು ಎಂಬುದು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಬೇಕಿದೆ.

**
ಚುನಾವಣಾ ನೀತಿ ಸಂಹಿತೆ ಇದ್ದದ್ದರಿಂದ ಆಡಳಿತ ಮಂಡಳಿ ಸಭೆ ಕರೆದಿಲ್ಲ. ಶೀಘ್ರದಲ್ಲಿಯೇ ಸಭೆ ಕರೆದು ಕೆಲ ಕಾಮಗಾರಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು 
- ಎಸ್‌.ಎಚ್‌. ನರೇಗಲ್‌, ವಿಶೇಷಾಧಿಕಾರಿ, ಸ್ಮಾರ್ಟ್‌ ಸಿಟಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT