ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರಭಾತದ ಕವಿ ಗಂಗಪ್ಪ ವಾಲಿ

‘ಕಿನ್ನರ ಕಂಠದ ಕವಿ’ ಎಂದು ವರ್ಣಿಸಿದ್ದ ದ.ರಾ. ಬೇಂದ್ರೆ
Last Updated 20 ಮಾರ್ಚ್ 2022, 4:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಾರಜ್ಜ’ ಅಂಕಿತನಾಮದಿಂದ ಪ್ರಸಿದ್ಧರಾಗಿರಾಗಿರುವ ಗಂಗಪ್ಪ ವಾಲಿ ನಾದಮಾಧುರ್ಯದ ಗಮಕಿಗಳು. ವೃತ್ತಿಯಿಂದ ವ್ಯಾಪಾರಸ್ಥರು. ಸುಪ್ರಭಾತ ಕವಿಗಳು ಎಂದೇ ಪ್ರಸಿದ್ಧರು.

ವರಕವಿ ಬೇಂದ್ರೆಯವರು ಗಂಗಪ್ಪ ವಾಲಿ ಅವರನ್ನು ‘ವೃತ್ತಿಯಿಂದ ವ್ಯಾಪಾರಿ, ಶೀಲದಿಂದ ಗೃಹಸ್ಥ, ಹೃದಯದಿಂದ ಕವಿ, ಕಲಾತ್ಮಕತೆಯಿಂದ ಸಹಜ ಗಮಕಿ. ಎಲ್ಲರನ್ನೂ ಸ್ವಾಗತಿಸುವ ಹಸನ್ಮುಖ. ಮಿತಭಾಷಿ, ಎಲ್ಲರಿಗೂ ಕಿವಿ ಕೊಡುತ್ತಾರೆ, ಕೆಲವರಿಗೆ ಮಾತ್ರ ಧ್ವನಿಯನ್ನು ನೀಡುತ್ತಾರೆ. ಕಿನ್ನರ ಕಂಠದ ಕವಿ’ ಎಂದು ವರ್ಣಿಸಿದ್ದಾರೆ.

ಗಂಗಪ್ಪ ಅವರು 1912 ಮಾರ್ಚ್ 20ರಂದು ಜನಿಸಿದರು. ಅವರ ಪೂರ್ವಜರು ಬಿಜಾಪುರ (ಇಂದಿನ ವಿಜಯಪುರ)ದವರು. ಕಾರಣಾಂತರಗಳಿಂದ ವಿಜಯಪುರ ತೊರೆದು ಹುಬ್ಬಳ್ಳಿಗೆ ಬಂದು ವ್ಯಾಪಾರ ಮಾಡುತ್ತಾ ನೆಲೆಕಂಡುಕೊಂಡರು. ಅವರು ತಾಡ ಓಲೆ ಬರೆಯುವ ಕೆಲಸ ಮಾಡುತ್ತಿದ್ದರು. ‘ತಾಡ’ ಲೋಪವಾಗಿ ‘ಓಲೆ’ ವಾಲಿಯಾಗಿ ಪರಿವರ್ತನೆ ಆಗಿರಬಹುದು. ಆದ್ದರಿಂದ ಅವರನ್ನು ವಾಲಿ ಮನೆತನದವರು ಎಂದೇ ಕರೆಯುತ್ತಾರೆ.

ಗಂಗಪ್ಪನವರು ಮಾಧ್ಯಮಿಕ ಶಿಕ್ಷಣವನ್ನು ಮೊಟಕುಗೊಳಿಸಿ ವ್ಯಾಪಾರದಲ್ಲಿ ತೊಡಗಿಕೊಂಡರು. ತಂದೆ ವೀರಪ್ಪನವರು ಕಾವ್ಯಾಸಕ್ತರು, ವೇದಾಂತ ಪ್ರಿಯರು, ಸಾಹಿತ್ಯಾಸಕ್ತರು ಆಗಿದ್ದರಿಂದ ಅವರಿಂದ ಬಳುವಳಿಯಾಗಿ ಬಂದ ಎಲ್ಲ ವಿದ್ಯೆಗಳನ್ನು ಶ್ರದ್ಧೆಯಿಂದ ವೃದ್ಧಿಸಿಕೊಂಡರು. ಬೇಂದ್ರೆ, ಡಿ.ವಿ.ಜಿ ಮೊದಲಾದವರು ಮೆಚ್ಚಿನ ಕವಿಗಳಾದರು. ಬಾಲ್ಯದಿಂದ ಒದಗಿಬಂದ ಸಂಗೀತದ ಒಲವು ಮಲ್ಲಿಕಾರ್ಜುನ ಮನಸೂರ ಅವರ ಸಾನ್ನಿಧ್ಯದಿಂದ ಇನ್ನಷ್ಟು ಬಲಿಯುವಂತಾಯಿತು. ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಬಿಡಿ ಕವನಗಳಿಗೆ ಇವರ ಮನಸ್ಸು ಸ್ಪಂದಿಸಿತು. ಸಂಗೀತ-ನಾಟಕ ಎಲ್ಲಿಯೇ ಇದ್ದರೂ ವಾಲಿಯವರು ಅಲ್ಲಿರುತ್ತಿದ್ದರು.

ಮನೆಯಲ್ಲಿ ತಾಯಿ ಹಾಡುವ ಜೋಗುಳದ ಪದ, ಸೋದರತ್ತೆ ಹೇಳುತ್ತಿದ್ದ ಜನಪದ ಹಾಡುಗಳು, ತಂದೆ ಹೇಳುತ್ತಿದ್ದ ನಿಜಗುಣ ಶಿವಯೋಗಿಯ ಹಾಗೂ ಸರ್ಪಭೂಷಣರ ಹಾಡುಗಳು ಅವರ ಹೃದಯವನ್ನು ತಿದ್ದಿ, ಅವರಲ್ಲಿ ನಾದಮಾಧುರ್ಯ ತುಂಬಿ ಅರಳಿಸಿತ್ತು. ಗಂಗಪ್ಪ ವಾಲಿಯವರು, ಕಲ್ಯಾಣಕ್ರಾಂತಿ, ಚಂದ್ರಮಾಯೆ (ಅನುವಾದ), ಕಾವ್ಯ ಕಿನ್ನರಿ(ಕವನ ಸಂಕಲನ), ‘ಕಾವ್ಯ ಮಂಜರಿ ಅವರ ಸಮಸ್ತ ಕವಿತೆಗಳು‘ ಕೃತಿ ರಚಿಸಿದ್ದಾರೆ.

ಕವಿಯಾಗಿ, ಸುಶ್ರಾವ್ಯ ಕಂಠದ ಗಾಯಕರಾಗಿ ಸ್ವರ ಸಂಯೋಜಕ ಆಗಿರುವುದು ಅಪರೂಪ. ಇಂತಹ ಸೃಜನಶೀಲ ಸೃಷ್ಟಿಗೆ ಗಂಗಪ್ಪನವರ ಕವಿತೆಗಳೇ ಸಾಕ್ಷಿ. ಈ ಸಹೃದಯದ ಕವಿ ಬರೆದಿರುವುದು ಅನೇಕ. ಜನರಿಗೆ ಕಾಣುವಂತೆ ಇರುವುದು ಸ್ವಲ್ಪ. ಜನರಿಗೆ ಕಾಣದಂತೆ ಕಳೆದು ಹೋಗುವುದು ಹೆಚ್ಚು.

-ಸರ್ವಮಂಗಳಾ ಪಿ.ಆರ್. ಉಪನ್ಯಾಸಕಿ, ಹುಬ್ಬಳ್ಳಿ

ವಾಲಿ ಜನ್ಮದಿನ ಇಂದು

ಹುಬ್ಬಳ್ಳಿ: ನುಡಿ ಕನ್ನಡ ಬಳಗದ ವತಿಯಿಂದ ಮಾರ್ಚ್ 20ರಂದು ಬೆಳಿಗ್ಗೆ 11ಗಂಟೆಗೆ ಪತ್ರಕರ್ತರ ಸಂಘದ ಸಭಾಭವನದಲ್ಲಿ ಕವಿ ಗಂಗಪ್ಪ ವಾಲಿ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಸಾನ್ನಿಧ್ಯವನ್ನು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಪತ್ರಕರ್ತ ಪುಟ್ಟು ಕುಲಕರ್ಣಿ ಅತಿಥಿಯಾಗಿ ಭಾಗವಹಿಸಲಿದ್ದು, ಸಾಹಿತಿ ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ಏಕನಾಥ ಕಲಬುರ್ಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT