ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಬೆಟಗೇರಿ: ಸಂಭ್ರಮದ ಮಡಿವಾಳೇಶ್ವರ ರಥೋತ್ಸವ

ಜಾತ್ರೆಗೆ ಹರಿದು ಬಂದ ಭಕ್ತರ ದಂಡು
Last Updated 9 ಫೆಬ್ರುವರಿ 2023, 6:32 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಭಾರತ ಹುಣ್ಣಿಮೆ ನಂತರ ನಡೆಯುವ ಅತಿ ದೊಡ್ಡ ಜಾತ್ರೆಯಾದ ಗರಗ ಮಡಿವಾಳೇಶ್ವರ ಜಾತ್ರೆಯು ಬುಧವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ತಾಲ್ಲೂಕಿನ ಅತಿ ದೊಡ್ಡ ರಥೋತ್ಸವ ಎಂದೇ ಕರೆಯಲಾಗುವ ಗರಗ ಜಾತ್ರೆಗೆ ತಾಲ್ಲೂಕಿನ ಕೋಟೂರು, ತಡಕೋಡ, ಹಂಗರಕಿ, ಮರೇವಾಡ, ಪುಡಕಲಕಟ್ಟಿ, ಯಾದವಾಡ, ಉಪ್ಪಿನ ಬೆಟಗೇರಿ, ಹೆಬ್ಬಳ್ಳಿ, ಅಮ್ಮಿನಬಾವಿ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಿಂದ ಬಂದ ಭಕ್ತರು ಮಡಿವಾಳೇಶ್ವರರ ರಥ ಎಳೆದು ಧನ್ಯರಾದರು. ಜಿಲ್ಲೆಯವರಷ್ಟೆ ಅಲ್ಲದೆ ಪಕ್ಕದ ಬೆಳಗಾವಿ ಹಾಗೂ ಇನ್ನಿತರ ಜಿಲ್ಲೆಗಳ ಭಕ್ತರೂ ಪಾಲ್ಗೊಂಡರು.

ಗರಗದ ತುಪ್ಪರಿ ಹಳ್ಳದ ದಂಡೆಯ ಮೇಲಿರುವ ಮಡಿವಾಳೇಶ್ವರ ದೇವಸ್ಥಾನದ ಮುಂದೆ ಸುಂದರವಾಗಿ ಅಲಂಕರಿಸಲಾದ ಪಲ್ಲಕ್ಕಿ ಹಾಗೂ ರಥೋತ್ಸವದಲ್ಲಿ ರಥವನ್ನು ಸುಮಾರು 200 ಮೀಟರ್ ಉದ್ದದ ಪಾದಗಟ್ಟೆಯವರೆಗೆ ಎಳೆದ ಭಕ್ತರು ಮರಳಿ ಮೂಲ ಗದ್ದುಗೆಗೆ ತಂದರು. ರಥೋತ್ಸವಕ್ಕೆ ಗರಗ ಮಡಿವಾಳೇಶ್ವರ ಮಠದ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು.

ಶಾಸಕ ಅಮೃತ ದೇಸಾಯಿ, ಅಶೋಕ ದೇಸಾಯಿ ಹಾಗೂ ನಾಡಿನ ವಿವಿಧ ಮಠಾಧೀಶರು ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ಹರ ಹರ ಮಹಾದೇವ, ಗರಗದ ಮಡಿವಾಳೇಶ್ವರ ಮಹಾರಾಜ ಕೀ ಜೈ, ಜೈ ಬಸವೇಶ ಎಂಬ ಘೋಷಗಳೊಂದಿಗೆ ತೇರಿಗೆ ಉತ್ತುತ್ತಿ, ಬಾಳೆಹಣ್ಣು, ಲಿಂಬೆ ಹಣ್ಣುಗಳನ್ನು ಎಸೆದು ಭಕ್ತಿಯಿಂದ ಪ್ರಾರ್ಥಿಸಿದರು. ಇದಕ್ಕೂ ಮೊದಲು ಮಡಿವಾಳೇಶ್ವರರ ಕತೃ ಗದ್ದುಗೆಯ ದರ್ಶನ ಪಡೆದರು.

ಗ್ರಾಮದ ಸುತ್ತಲಿನ ಭಕ್ತರು ಎತ್ತಿನಬಂಡಿ, ಟ್ರ್ಯಾಕ್ಟರ್‌ ಹಾಗೂ ಇನ್ನಿತರ ವಾಹನಗಳ ಮೂಲಕ ದೇವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ಮಾದಲಿ, ಚಪಾತಿ, ರೊಟ್ಟಿ. ಪಲ್ಯೆ, ಮೊಸರು, ಚಟ್ನಿ, ಅನ್ನ, ಸಾಂಬಾರು, ಬುತ್ತಿಯನ್ನು ತಂದು ಕುಟುಂಬಸ್ಥರು ಕೂಡಿ ಭೋಜನ ಸವಿದರು.

ಮಹಿಳೆಯರು ಮತ್ತು ಮಕ್ಕಳು ಜಾತ್ರೆಯಲ್ಲಿ ಸ್ಥಾಪಿಸಲಾಗಿರುವ ಡ್ರ‍್ಯಾಗನ್ ಹಾಗೂ ತೂಗು ತೊಟ್ಟಿಲು, ಜಿಗ್‌ಜಾಗ್ ಆಡಿ ಸಂಭ್ರಮಿಸಿದರು. ದೇವರಿಗೆ ಹೂಮಾಲೆ, ಬಾಳೆಹಣ್ಣು, ತೆಂಗಿನಕಾಯಿ ತಂದು ನೈವೇದ್ಯ ಅರ್ಪಿಸಿದರು. ದೇವಸ್ಥಾನದಲ್ಲಿ ಮಧ್ಯಾಹ್ನ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT