ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೆದರ್‌ ಗಾರ್ಮೆಂಟ್ಸ್‌ ಹಬ್‌ ’ ಆಗಲಿದೆ ಹುಬ್ಬಳ್ಳಿ

ಅಕ್ಟೋಬರ್‌ನಲ್ಲಿ ಶುರುವಾಗಲಿದೆ ಜಿಲ್ಲೆಯ ಮೊದಲ ಚರ್ಮದ ಸಿದ್ಧ ಉಡುಪುಗಳ ತಯಾರಿಕಾ ಕೇಂದ್ರ
Last Updated 14 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೈಮಗ್ಗ ಮತ್ತು ಜವಳಿ ಇಲಾಖೆ ಹುಬ್ಬಳ್ಳಿಯನ್ನು ‘ಲೆದರ್ ಗಾರ್ಮೆಂಟ್ಸ್‌ ಹಬ್‌’ ಆಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಚರ್ಮದ ಸಿದ್ಧ ಉಡುಪುಗಳ ತಯಾರಿಕಾ ಕೇಂದ್ರಗಳ ಆರಂಭಕ್ಕೆ ಶೇ 90ರಷ್ಟು ಸಬ್ಸಿಡಿ ನೀಡುವುದಾಗಿಯೂ ಘೋಷಿಸಿದ್ದು, ಮೊದಲ ಹಂತದಲ್ಲಿ ಧಾರವಾಡ ಜಿಲ್ಲೆಯಲ್ಲಿ 10 ಘಟಕಗಳ ಸ್ಥಾಪನೆಗೆ ನೆರವಾಗಲಿದೆ.

ಇಲ್ಲಿನ ಗಾಮನಗಟ್ಟಿ ಮತ್ತು ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ 20 ಎಕರೆ ಜಾಗ ಗುರುತಿಸಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಸಕ್ತ ಯುವ ಉದ್ಯಮಿಗಳಿಗೆ ಅಲ್ಲಿ ಅವಕಾಶ ನೀಡುವುದಾಗಿ ಜವಳಿ ಇಲಾಖೆ ಹೇಳಿದೆ.

ಇದರ ಮೊದಲ ಹೆಜ್ಜೆಯಾಗಿ ಇಲ್ಲಿನ ನಿವಾಸಿ, ಚಂದ್ರಕಾಂತ ಗಡ್ಕರಿ ಎಂಬುವವರು ₹78 ಲಕ್ಷ ವೆಚ್ಚದಲ್ಲಿ ಗಾಮನಗಟ್ಟಿಯಲ್ಲಿ ಆರಂಭಿಸುತ್ತಿರುವ ಎಲ್‌.ಎನ್‌. ಲೆದರ್‌ ಗಾರ್ಮೆಂಟ್ಸ್‌ಗೆ ಶೇ 90ರಷ್ಟು ಸಬ್ಸಿಡಿ ಘೋಷಿಸಿದೆ. ‘ಮುಂದಿನ ತಿಂಗಳಿಂದ ಇಲ್ಲಿ ಉತ್ಪಾದನೆ ಆರಂಭವಾಗಲಿದ್ದು, ರಫ್ತು ಮಾಡುವ ಉದ್ದೇಶವನ್ನೂ ಹೊಂದಲಾಗಿದೆ. ಆಧುನಿಕ ಯಂತ್ರಗಳನ್ನು ಖರೀದಿಸಿದ್ದು, ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಆದ್ಯತೆ’ ಎಂದು ಗಡ್ಕರಿ ಹೇಳುತ್ತಾರೆ.

ಇದು ಜಿಲ್ಲೆಯ ಮೊದಲ ಚರ್ಮದ ಸಿದ್ಧ ಉಡುಪುಗಳ ತಯಾರಿಕಾ ಕೇಂದ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಲಿದೆ.

‘ಮೊದಲು ಮನೆಯಲ್ಲಿ ಚರ್ಮದ ಜಾಕೆಟ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಅದನ್ನು ದೊಡ್ಡ ಮಟ್ಟದಲ್ಲಿ ಈಗ ಮಾಡುತ್ತಿದ್ದು, ಅಲ್ಲಿ ಉಳಿಯುವ ಚರ್ಮದ ತುಂಡುಗಳಿಂದ ಕೈಗವಸು, ಚಪ್ಪಲಿ, ಶೂ, ಪರ್ಸ್‌, ಕೈಚೀಲಗಳನ್ನು ತಯಾರಿಸುತ್ತೇವೆ. ಸಂಸ್ಕರಿಸಿದ ಚರ್ಮದ ಕಚ್ಚಾವಸ್ತವನ್ನು ತಮಿಳುನಾಡಿನಿಂದ ತರಿಸಿ, ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ಇದಕ್ಕೊಂದು ಒಳ್ಳೆ ಹೆಸರು ಇಟ್ಟು, ಅದರ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗಡ್ಕರಿ ತಿಳಿಸಿದರು.

‘ಚರ್ಮದ ಉಡುಪುಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೇಡಿಕೆಯಿದೆ. ಈ ವೃತ್ತಿಯಲ್ಲಿ ಪಳಗಿದ 20ರಿಂದ 25 ಜನರಿಗೆ ಉದ್ಯೋಗ ಕಲ್ಪಿಸಬಹುದು. ಮುಂಬರುವ ದಿನಗಳಲ್ಲಿ ತರಬೇತಿ ಕೇಂದ್ರ ಆರಂಭಿಸುವ ಗುರಿಯಿದೆ. ಉತ್ಪನ್ನಗಳ ಮಾರಾಟಕ್ಕೆ ಸ್ವಂತ ಅಂಗಡಿಗಳನ್ನು ತೆರೆಯಲಾಗುವುದು. ಜವಳಿ ಇಲಾಖೆಯ ಶೋ ರೂಂಗಳ ಮೂಲಕವೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಧಾರವಾಡ ಜಿಲ್ಲಾ ಉಪ ನಿರ್ದೇಶಕ ವೀರೇಶ ಧವಳೆ ಈ ಕುರಿತು ಪ್ರತಿಕ್ರಿಯಿಸಿ, ‘ಚರ್ಮೋದ್ಯಮ, ಕೈಮಗ್ಗಕ್ಕೆ ಉತ್ತೇಜನ ನೀಡಲು ಇಲಾಖೆ ಹೆಚ್ಚು ಆಸಕ್ತಿ ಹೊಂದಿದೆ. ಇನ್ನೂ ಮೂವರು ಉದ್ಯಮಿಗಳು ಜಂಟಿಯಾಗಿ ₹1 ಕೋಟಿ ವೆಚ್ಚದಲ್ಲಿ ಚರ್ಮದ ಸಿದ್ಧ ಉಡುಪುಗಳ ತಯಾರಿಕಾ ಕೇಂದ್ರ ಸ್ಥಾಪಿಸಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.

‘ಮತ್ತಷ್ಟು ಲೆದರ್‌ ಗಾರ್ಮೆಂಟ್ಸ್‌ ಸ್ಥಾಪನೆ ಗುರಿ’

‘ಚರ್ಮದ ಸಿದ್ಧ ಉಡುಪುಗಳ ತಯಾರಿಕಾ ಕೇಂದ್ರ ರಾಜ್ಯದ ಕೆಲ ಭಾಗಗಳಿಗಷ್ಟೇ ಸೀಮಿತವಾಗಿವೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಹೊಸದಾಗಿ ಕೇಂದ್ರಗಳನ್ನು ಆರಂಭಿಸಲು ಈಗಾಗಲೇ ಆರೇಳು ಜನ ಮುಂದೆ ಬಂದಿದ್ದಾರೆ. ತಯಾರಕರು ಹುಬ್ಬಳ್ಳಿಯಲ್ಲಿ ಹೆಚ್ಚಿರುವ ಕಾರಣ ಅಲ್ಲಿಯೇ ಹಬ್‌ ಮಾಡಲಾಗುವುದು’ ಎಂದು ಜವಳಿ ಆಯುಕ್ತ ಎಂ.ಆರ್. ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚರ್ಮ ಮತ್ತು ಕೈಮಗ್ಗದ ಉಡುಪುಗಳಿಗೆ ಉತ್ತೇಜನ ನೀಡುವುದು ಮತ್ತು ಉದ್ಯೋಗ ಸೃಷ್ಟಿಸುವುದು ನಮ್ಮ ಉದ್ದೇಶ. ಆದ್ದರಿಂದ ಲಿಡ್ಕರ್‌ ಮುಖ್ಯಸ್ಥರಿಗೆ ಪತ್ರ ಬರೆದು, ಉದ್ಯಮ ಆರಂಭಿಸುವ ಆಸಕ್ತರಿಗೆ ನಮ್ಮ ಇಲಾಖೆ ಎಲ್ಲ ನೆರವು ನೀಡುತ್ತದೆ ಎಂದು ತಿಳಿಸಿದ್ದೇನೆ. ಪರಿಶಿಷ್ಟ ಜನರಿಗೆ ಆಧುನಿಕ ಯಂತ್ರಗಳ ಬಳಕೆ ಮತ್ತು ಕೌಶಲ ತರಬೇತಿ ನೀಡಲು ನೆರವು ನೀಡಲಾಗುವುದು’ ಎಂದರು.

* ಚರ್ಮದ ಸಿದ್ಧ ಉಡುಪುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಗುರಿಯಿದೆ. ಆನ್‌ಲೈನ್‌ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು

-ಚಂದ್ರಕಾಂತ ಗಡ್ಕರಿ, ಎಲ್‌.ಎನ್‌. ಲೆದರ್‌ ಗಾರ್ಮೆಂಟ್ಸ್ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT