ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದ ಸಫಾಯಿ ಕಾರ್ಮಿಕರಿಗೆ ಗೇಟ್‌ಪಾಸ್: ಪ್ರಧಾನಿಗೆ ಪತ್ರ

ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಸಭೆ: ರೈಲ್ವೆ ಅಧಿಕಾರಿಗಳ ಗೈರು
Last Updated 27 ಡಿಸೆಂಬರ್ 2022, 10:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಪ್ಪತ್ತೈದು ವರ್ಷಗಳಿಂದ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 120 ಸಫಾಯಿ ಕರ್ಮಚಾರಿಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದರ ಕುರಿತು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ಹೇಳಿದರು.

ನಗರದ ಸರ್ಕೀಟ್‌ ಹೌಸ್‌ನಲ್ಲಿ ಮಂಗಳವಾರ ಸಫಾಯಿ ಕರ್ಮಚಾರಿಗಳು,ಪೌರ ಕಾರ್ಮಿಕರ ಸಂಘಟನೆಗಳ ಮುಖಂಡರು, ರೈಲ್ವೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಫಾಯಿ ಕರ್ಮಚಾರಿಗಳ ವಿಷಯದಲ್ಲಿ ರೈಲ್ವೆ ಇಲಾಖೆ ತಪ್ಪು ಮಾಡಿರುವುದು ಸ್ಪಷ್ಟ. ಇದನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಗಮನಕ್ಕೂ ತರುವೆ. ಸಬೂಬು ಹೇಳದೆ ಎಲ್ಲಾ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅದಕ್ಕಾಗಿ, ನನ್ನ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುವೆ’ ಎಂದರು.

‘ನಿಲ್ದಾಣದ ಸ್ವಚ್ಛತೆಯ ಗುತ್ತಿಗೆ ಪಡೆದಿರುವ ಕಿಂಗ್ಸ್ ಏಜೆನ್ಸಿಯು ಕಾರ್ಮಿಕ ಕಾಯ್ದೆಯ ಎಲ್ಲಾ ಅಂಶಗಳನ್ನು ಉಲ್ಲಂಘಿಸಿದೆ. ಏಜೆನ್ಸಿಯನ್ನು ನಿಯಂತ್ರಣದಲ್ಲಿಡಬೇಕಾದ ರೈಲ್ವೆಯೇ, ಏಜೆನ್ಸಿ ಮೇಲೆ ಅವಲಂಬಿತವಾಗಿದೆ. 120 ಮಂದಿಯನ್ನು ಕೆಲಸದಿಂದ ತೆಗೆದರೂ ಕಣ್ಣು ಮುಚ್ಚಿ ಕುಳಿತಿದೆ. ನಾವು ಬಿಸಿ ಮುಟ್ಟಿಸಿದ ಬಳಿಕ, ಕೇಂದ್ರ ಕಾರ್ಮಿಕ ಇಲಾಖೆಯು ರೈಲ್ವೆಗೆ ನೋಟಿಸ್ ಕೊಟ್ಟಿದೆ’ ಎಂದು ಹೇಳಿದರು.

ಅಸಮಾಧಾನ: ಸಭೆ ಕುರಿತು ಮುಂಚೆಯೇ ಸೂಚನೆ ಕೊಟ್ಟಿದ್ದರೂ, ರೈಲ್ವೆ ಅಧಿಕಾರಿಗಳು ಸಭೆಗೆ ಬಾರದೆ ಪತ್ರವೊಂದನ್ನು ಕಳಿಸಿದ್ದಕ್ಕೆ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

‘ರೈಲ್ವೆಯುವರು ಬೇಕೇಂದೇ ಸಭೆಗೆ ಬಾರದೆ, ಸಫಾಯಿ ಕರ್ಮಚಾರಿಗಳ ವಿಷಯದಲ್ಲಿ ತಾವು ಕೈಗೊಂಡಿದ್ದೇವೆ ಎನ್ನಲಾದ ಕ್ರಮಗಳ ಬಗ್ಗೆ ಪತ್ರವೊಂದನ್ನು ಕಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ರೈಲ್ವೆಯವರಿಗೆ ಹೇಗೆ ಬುದ್ಧಿ ಕಲಿಸಬೇಕೆಂದು ಗೊತ್ತಿದೆ. ಐದು ಖಾತೆಗಳ ಸಚಿವನಾಗಿ ಕೆಲಸ ಮಾಡಿರುವ ಅನುಭವ ನನಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘500 ಮಂದಿಗೆ ಒಬ್ಬ ಪೌರ ಕಾರ್ಮಿಕ ನೇಮಕ’

‘ಪೌರ ಕಾರ್ಮಿಕರಿಗೆ ಕಾರ್ಯೋತ್ತಡ ತಗ್ಗಿಸಲು ರಾಜ್ಯದಲ್ಲಿ 700 ಜನಕ್ಕೆ ಬದಲಾಗಿ 500 ಮಂದಿಗೆ ಒಬ್ಬ ಪೌರ ಕಾರ್ಮಿಕನನ್ನು ನೇಮಕ ಮಾಡಲಾಗುವುದು. 11,130 ಪೌರ ಕಾರ್ಮಿಕರ ಕಾಯಂ ಕುರಿತು ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ರಚಿಸಿರುವ ಸಮಿತಿಯು ಈ ಬಗ್ಗೆ ಶಿಫಾರಸು ಮಾಡಿದ್ದು, ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಲಿದೆ’ ಎಂದು ಶಿವಣ್ಣ ಕೋಟೆ ಹೇಳಿದರು.

‘ಸರ್ಕಾರ ಪೌರ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದೆ. ಶಿಕ್ಷಣ, ಕೌಶಲಾಭಿವೃದ್ಧಿ, ಮೂಲಸೌಕರ್ಯ, ನಿವೇಶನ ಸೇರಿದಂತೆ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಕುರಿತು ನಿಯಮಾವಳಿ ರೂಪಿಸಲಾಗುತ್ತಿದ್ದು, ಎರಡ್ಮೂರು ತಿಂಗಳಲ್ಲಿ ಸಿಹಿ ಸುದ್ದಿ ಹೊರ ಬೀಳಲಿದೆ’ ಎಂದರು.

ಸಭೆಯ ಬಳಿಕ ಶಿವಣ್ಣ ಅವರು ರೈಲು ನಿಲ್ದಾಣದ ಬಳಿ ಒಂದು ವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಸಫಾಯಿ ಕರ್ಮಚಾರಿಗಳನ್ನು ಭೇಟಿ ಮಾಡಿ ಅಹವಾಲು ಆಲಿಸಿದರು. ಎಲ್ಲರನ್ನೂ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮಾಡಲು ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT