ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆರೋಗ್ಯದಿಂದ ಜಿಡಿಪಿ ವೃದ್ಧಿ: ಉಪ ಮುಖ್ಯಮಂತ್ರಿ ಅಶ್ವಥನಾರಾಯಣ

ಟೈಕಾನ್‌ ಆಯೋಜಿಸಿರುವ ಹೆಲ್ತ್‌ಕಾನ್‌ ಸಮಾವೇಶ
Last Updated 2 ನವೆಂಬರ್ 2019, 15:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರೋಗ್ಯ ಕ್ಷೇತ್ರದ ಬೆಳವಣಿಗೆಯಂದರೆ ಹೆಚ್ಚು ಆಸ್ಪತ್ರೆಗಳನ್ನು ಆರಂಭಿಸುವುದು, ವೈದ್ಯರನ್ನು ನೇಮಿಸುವುದು ಅಷ್ಟೇ ಅಲ್ಲ. ಉತ್ತಮ ದಿನಚರಿ ಮತ್ತು ಹವ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯಯುಕ್ತ ಬದುಕು ರೂಪಿಸಿಕೊಳ್ಳಲು ಸಾಧ್ಯ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಿಸಲು ಕೂಡ ಸಾಧ್ಯವಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ನಗರದಲ್ಲಿ ಹುಬ್ಬಳ್ಳಿ ಟೈಕಾನ್‌ ಆಯೋಜಿಸಿರುವ ಎರಡು ದಿನಗಳ ಹೆಲ್ತ್‌ಕಾನ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ವೈದ್ಯರ ಬಳಿ ಹೋದರೆ ಅವರು ನಿರ್ದಿಷ್ಟ ರೋಗ ಗುರುತಿಸಿ ಚಿಕಿತ್ಸೆ ನೀಡುತ್ತಾರೆ. ನಾವು ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಇರುವುದರಿಂದ ದೈಹಿಕ ಆರೋಗ್ಯವಷ್ಟೇ ಅಲ್ಲ, ಮಾನಸಿನ ಸ್ವಾಸ್ಥ್ಯ ಕೂಡ ಕಾಪಾಡಿಕೊಳ್ಳಬೇಕಾಗಿದೆ’ ಎಂದರು.

‘ಅತಿಯಾದ ಮೊಬೈಲ್‌, ಟಿವಿ ಬಳಕೆ ಮತ್ತು ಕೆಟ್ಟ ಜೀವನಶೈಲಿಯಿಂದ ಶೇ 60ರಷ್ಟು ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪೌಷ್ಠಿಕ ಆಹಾರ, ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆ ರೂಢಿಸಿಕೊಳ್ಳಬೇಕು. ಇಲ್ಲವಾದರೆ ಮೇಲಿಂದ ಮೇಲೆ ಆಸ್ಪತ್ರೆಗಳನ್ನು ಕಟ್ಟುವುದೇ ದೊಡ್ಡ ಸಾಧನೆ ಎನ್ನುವಂತಾಗುತ್ತದೆ’ ಎಂದರು.

‘ಕರ್ನಾಟಕದಲ್ಲಿ 2,004 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಬಹಳಷ್ಟು ಕಡೆ ವೈದ್ಯರೇ ಇಲ್ಲ. ಜನಸಂಖ್ಯೆಯಲ್ಲಿ ನಮಗಿಂತಲೂ ಮುಂದಿರುವ ತಮಿಳುನಾಡಿನಲ್ಲಿ 1,500 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅಲ್ಲಿ ಒಂದು ಆಸ್ಪತ್ರೆಗೆ ಇಬ್ಬರು, ಮೂವರು ವೈದ್ಯರು ಇದ್ದಾರೆ. ಇದರಿಂದ ಅಲ್ಲಿನ ವೈದ್ಯರು ರೋಗಿಗಳಿಗೆ ಉತ್ತಮ ಆರೋಗ್ಯದ ಸಲಹೆಗಳನ್ನೂ ನೀಡುತ್ತಾರೆ’ ಎಂದರು.

‘ಎಲ್ಲ ಕ್ಷೇತ್ರಗಳಿಗಿಂತಲೂ ಆರೋಗ್ಯ ಕ್ಷೇತ್ರ ವೇಗವಾಗಿ ಬೆಳೆಯುತ್ತದೆ. ಇದೇ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿವೆ. ಕಟ್ಟಕಡೆಯ ವ್ಯಕ್ತಿಗೂ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಬೇಕು ಎನ್ನುವ ಗುರಿ ನನ್ನದು. ಆದ್ದರಿಂದ 2022ರ ವೇಳೆಗೆ ಈ ಕ್ಷೇತ್ರದಲ್ಲಿ ಈಗಿನಕ್ಕಿಂತಲೂ ಮೂರು ಪಟ್ಟು ಹೆಚ್ಚು ಹೂಡಿಕೆ ಮಾಡಲಾಗುವುದು. ರಾಜ್ಯವನ್ನು ವೈದ್ಯಕೀಯ ಟೂರಿಸಂ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ವೈದ್ಯರನ್ನು ದೇವರೆಂದು ನೋಡುತ್ತಾರೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿಯನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಕಿಮ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಬ್ಬಂದಿ ಅಗತ್ಯವಿದ್ದು, ಸಚಿವರು ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕು. ಹೆಲ್ತ್‌ ಪಾರ್ಕ್‌ ಮಾಡಲು ಸರ್ಕಾರದಿಂದ ಭೂಮಿ ಒದಗಿಸಲು ಸಿದ್ಧ’ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ ‘ವೈದ್ಯರು ನೀಡುವ ಮಾಹಿತಿಯನ್ನು ರೋಗಿಗಳು ಹಾಗೂ ಸಂಬಂಧಿಕರು ಅನುಮಾನದ ದೃಷ್ಟಿಯಿಂದ ನೋಡಬಾರದು. ವೈದ್ಯರು ಸಮಾಜದ ಅವಿಭಾಜ್ಯ ಅಂಗ. ಅವರು ಸಣ್ಣ ತಪ್ಪು ಮಾಡಿದರೂ ದೊಡ್ಡ ಪರಿಣಾಮ ಬೀರುತ್ತದೆ’ ಎಂದರು.

’ಹುಬ್ಬಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರವೇ ಭೂಮಿಪೂಜೆ’

ಹುಬ್ಬಳ್ಳಿಯಲ್ಲಿಯೂ ಆಸ್ಪತ್ರೆ ಕಟ್ಟಲು ತಯಾರಿ ನಡೆಯುತ್ತಿದೆ. 500 ಹಾಸಿಗೆಗಳ ಆಸ್ಪತ್ರೆ ಮತ್ತು 200 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು.‌ ವೈದ್ಯಕೀಯ ಕಾಲೇಜು ನಿರ್ಮಿಸುವ ಯೋಜನೆಯೂ ಇದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

‘ಪ್ರತಿ ತಾಲ್ಲೂಕಿನಲ್ಲಿಯೂ ಕೆಎಲ್‌ಇ ಸಂಸ್ಥೆಯ ಶಾಲೆಗಳನ್ನು ಮತ್ತು ಕಾಲೇಜುಗಳನ್ನು ಆರಂಭಿಸಲಾಗುವುದು. ಬೆಳಗಾವಿಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸುವ ಗುರಿಯಿದೆ’ ಎಂದು ತಿಳಿಸಿದರು.

ಹೆಲ್ತ್‌ ಕಾನ್‌ನ ಸಂಚಾಲಕ ಡಾ. ಶಂಕರ ಬಿಜಾಪುರ, ಸಂಘಟಕ ಶಶಿಧರ ಶೆಟ್ಟರ್‌, ವಿಧಾನ ಪರಿಷತ್‌ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್‌.ವಿ. ಸಂಕನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT