ಗೀತಾ ಜಯಂತಿ ಹಾಗೂ ಮಹಾಸಮರ್ಪಣೆ 19ಕ್ಕೆ

7
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪತ್ರಿಕಾಗೋಷ್ಠಿ

ಗೀತಾ ಜಯಂತಿ ಹಾಗೂ ಮಹಾಸಮರ್ಪಣೆ 19ಕ್ಕೆ

Published:
Updated:
Deccan Herald

ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಇದೇ 19ರಂದು ರಾಜ್ಯಮಟ್ಟದ 11ನೇ ಗೀತಾ ಮಹಾಸಮರ್ಪಣೆ ನಡೆಯಲಿದ್ದು, ಸುಮಾರು 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ದಿನದಿಂದ ದಿನಕ್ಕೆ ಜನರಲ್ಲಿ ಅಧ್ಯಾತ್ಮಿಕ ಮೌಲ್ಯಗಳ ಪತನವಾಗುತ್ತಿದ್ದು, ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ. ಇದರಿಂದಾಗಿ ರಾಷ್ಟ್ರೀಯ ಭಾವೈಕ್ಯದ ಕೊರತೆ ಕಾಡುತ್ತಿದೆ. ಮೊದಲಿಂದಲೂ ಅಧ್ಯಾತ್ಮಿಕ ಮೌಲ್ಯಗಳು ಉಳಿದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಭಗವದ್ಗೀತೆಯಲ್ಲಿ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳಿಗೆ ಉತ್ತರಗಳಿವೆ. ಹಾಗಾಗಿ, ನಾವು ಭಗವದ್ಗೀತಾ ಅಭಿಯಾನವನ್ನು ಶುರು ಮಾಡಿದ್ದೇವೆ. ಜಿಲ್ಲೆಯಾದ್ಯಂತ 800ಕ್ಕೂ ಹೆಚ್ಚು ಶ್ಲೋಕ ಕೇಂದ್ರಗಳಲ್ಲಿ ಗೀತೆಯ 8ನೇ ಅಧ್ಯಾಯದ ಪಾರಾಯಣ ನಡೆದಿದ್ದು, 200ಕ್ಕೂ ಹೆಚ್ಚು ಉಪನ್ಯಾಸಗಳನ್ನು ನಡೆಸಲಾಗಿದೆ’ ಎಂದರು.

‘19ರಂದು ನಡೆಯಲಿರುವ ಮಹಾಸಮರ್ಪಣೆ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಮುರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಆರ್ಷ ವಿದ್ಯಾಪೀಠದ ಚಿದ್ರೂಪಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸುವರು. ಗೀತಾಂತರಂಗ 1 ಇಂಗ್ಲಿಷ್‌ ಪುಸ್ತಕವನ್ನು ರಾಜ್ಯಪಾಲ ವಜೂಭಾಯಿ ವಾಲಾ ಲೋಕಾರ್ಪಣೆ ಮಾಡುವರು’ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ವಿಜಯ ಸಂಕೇಶ್ವರ ಭಾಗವಹಿಸುವರು. ಧಾರವಾಡದಿಂದ ಬರುವ ಶಾಲಾ ಮಕ್ಕಳು ಹಾಗೂ ಭಕ್ತರಿಗಾಗಿ ಬಸ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ.ಬಿ.ನಾತು, ಪ್ರಧಾನ ಕಾರ್ಯದರ್ಶಿ ಸುಭಾಸಸಿಂಗ್‌ ಜಮಾದಾರ, ಸಂಚಾಲಕ ಎ.ಸಿ.ಗೋಪಾಲ, ಮಾಧ್ಯಮ ಸಂಚಾಲಕ ಮನೋಹರ ಪರ್ವತಿ ಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !