ಸೋಮವಾರ, ಜನವರಿ 20, 2020
29 °C

ಸರಣಿ ಪರೀಕ್ಷೆ ತಡೆ ಆದೇಶ ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪೂರ್ವ ಸಿದ್ಧತಾ ಸರಣಿ ಪರೀಕ್ಷೆಗಳನ್ನು ನಡೆಸದಂತೆ ಸೂಚನೆ ನೀಡಿರುವ ಶಿಕ್ಷಣ ಇಲಾಖೆಯ, ತನ್ನ ಆದೇಶವನ್ನು ಹಿಂಪಡೆಯಬೇಕು’ ಎಂದು ಉತ್ತರ ಕರ್ನಾಟಕ ಮುಖ್ಯೋಪಾಧ್ಯಾಯರ ಸಂಘಟನೆ ಹಾಗೂ ಸಂಪನ್ಮೂಲ ಶಿಕ್ಷಕರ ವೇದಿಕೆ ಅಧ್ಯಕ್ಷ ಎಸ್‌.ಎಂ. ಕೊಟಗಿ ಒತ್ತಾಯಿಸಿದರು.

‘ಸರಣಿ ಪರೀಕ್ಷೆಗೆ ತಡೆ ನೀಡಿರುವ ಇಲಾಖೆ, ತಾನೇ ಒಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಇದು ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಅಣಿಗೊಳಿಸುವ ಶಿಕ್ಷಕರ ಪ್ರಯತ್ನಕ್ಕೆ ತೊಂದರೆಯಾಗಲಿದೆ. ಜತೆಗೆ, ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ. ಅಲ್ಲದೆ, ಈ ನಿರ್ಧಾರದ ಹಿಂದೆ ಖಾಸಗಿ ಕನ್ನಡ ಶಾಲೆಗಳನ್ನು ಮುಚ್ಚುವ ಹಾಗೂ ಶಿಕ್ಷಕರ ಸಂಘಟನೆಗಳ ಬಾಯಿ ಮುಚ್ಚಿಸುವ ಹುನ್ನಾರವಿದೆ’ ಎಂದು ಹುಬ್ಬಳ್ಳಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸಂಘಟನೆಯ ಗೌರವ ಅಧ್ಯಕ್ಷ ಬಸವರಾಜ ಧಾರವಾಡ ಮಾತನಾಡಿ, ‘ಮಕ್ಕಳಿಗೆ ಸರಣಿ ಪರೀಕ್ಷೆಗಳನ್ನು ನಡೆಸುವುದರಿಂದ, ಮುಖ್ಯ ಪರೀಕ್ಷೆ ಬಗ್ಗೆ ಅವರಿಗಿರುವ ಆತಂಕ ಕ್ರಮೇಣ ನಿವಾರಣೆಯಾಗಲಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅರಿಯಲು ಹಾಗೂ ಹೆಚ್ಚಿಸಲು ಸರಣಿ ಪರೀಕ್ಷೆಗಳು ಪೂರಕವಾಗಿವೆ’ ಎಂದರು.

‘ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗುವುದರಿಂದ ಸರಣಿ ಪರೀಕ್ಷೆಯನ್ನು ನಿಷೇಧಿಸಿರುವುದಾಗಿ ಇಲಾಖೆ ಹೇಳಿದೆ. ಆದರೆ, ಅವರೇ ನಡೆಸುವ ಪೂರ್ವ ಸಿದ್ಧತಾ ಪರೀಕ್ಷೆಗೆ ಮಕ್ಕಳು ಒಂದು ಪರೀಕ್ಷೆಗೆ ₹60ರವರೆಗೆ ನೀಡಬೇಕಾಗುತ್ತದೆ. ಅದೇ ಮುಖ್ಯೋಪಾಧ್ಯಾಯರ ಸಂಘಟನೆಗಳು ನಡೆಸುವ ಪರೀಕ್ಷೆಯಲ್ಲಿ ಅದರ ಅರ್ಧದಷ್ಟು ಅಂದರೆ ₹30 ಪಾವತಿಸಬೇಕಾಗುತ್ತದೆ’ ಎಂದು ಹೇಳಿದರು.

‘ಇಲಾಖೆಯ ಯಾವುದೇ ಹೊಸ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷದ ಆರಂಭದಿಂದ ಜಾರಿಗೆ ತರಬೇಕು. ಅದು ಬಿಟ್ಟು, ವರ್ಷದ ಮಧ್ಯದಲ್ಲಿ ತಂದರೆ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಹಾಗಾಗಿ, ಸದ್ಯದ ಆದೇಶದ ಕುರಿತು ಶಿಕ್ಷಕರ ಸಂಘಟನೆ ಜತೆ ಚರ್ಚಿಸಿ, ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ಮುಂದೆ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಕಾರ್ಯದರ್ಶಿ ಎಸ್‌.ಎಸ್‌. ಮಠದ, ಸದಸ್ಯರಾದ ಎಸ್‌.ಇ. ಸಂದ್ರೆ, ಜಿ.ಕೆ. ಹಿತ್ತಲಮನಿ, ಎಸ್‌.ಎ. ಕಾಗೆ, ಆರ್‌.ಎಸ್. ತುಂಗಳ, ದಯಾನಂದ, ಎಂ.ಎಸ್. ಕೆಂಚನಗೌಡ ಹಾಗೂ ಬಿ.ಎಸ್. ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು