ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳಿಗೆ ವರ್ಗಾವಣೆಯಾದ ಆಸ್ತಿ ಮರಳಿ ತಂದೆಗೆ

ಹಿರಿಯ ನಾಗರಿಕರ ಪಾಲನೆ–ಪೋಷಣೆ ಮತ್ತು ಕ್ಷೇಮಾಭಿವೃದ್ಧಿ ನ್ಯಾಯಮಂಡಳಿಯಲ್ಲೊಂದು ಅಪರೂಪದ ಪ್ರಕರಣ
Last Updated 25 ಜುಲೈ 2019, 19:45 IST
ಅಕ್ಷರ ಗಾತ್ರ

ಧಾರವಾಡ: ತಂದೆಯಿಂದ ಉಡುಗೊರೆಯಾಗಿ ಆಸ್ತಿ ಪಡೆದ ಮಗಳು, ನಂತರ ಅವರನ್ನೇ ಮನೆಯಿಂದ ಹೊರಹಾಕುವ ಬೆದರಿಕೆ ಹಾಕಿದ ಅಪರೂಪದ ಪ್ರಕರಣ ಇಲ್ಲಿನಹಿರಿಯ ನಾಗರಿಕರ ಪಾಲನೆ–ಪೋಷಣೆ ಮತ್ತು ಕ್ಷೇಮಾಭಿವೃದ್ಧಿ ನ್ಯಾಯಮಂಡಳಿಯಲ್ಲಿ ಇತ್ಯರ್ಥಗೊಂಡಿದ್ದು, ನೊಂದ ತಂದೆಗೆ ನ್ಯಾಯ ದೊರಕಿದೆ.

ಉಡುಗೊರೆಯಾಗಿ ಆಸ್ತಿ ಪಡೆದು ಇಳಿ ವಯಸ್ಸಿನಲ್ಲಿ ಆಸರೆಯಾಗುವುದಾಗಿ ಭರವಸೆ ನೀಡಿದ ಮಗಳು, ತಮ್ಮ ಮಾತು ಮರೆತಿದ್ದರಿಂದ ನೀಡಿದ ಆಸ್ತಿಯ ನೋಂದಣಿ ರದ್ದುಪಡಿಸುವಂತೆ ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ.

ಹುಬ್ಬಳ್ಳಿಯ ನಿವಾಸಿ ಬಸವರಾಜ ಹಾವೇರಿ ಅವರು ಸೇನೆಯಲ್ಲಿ ಕೆಲಸ ಮಾಡಿದವರು. ಸೇನಾ ನಿವೃತ್ತಿಯ ನಂತರ ಸರ್ಕಾರಿ ಕೆಲಸ ಪಡೆದು ಅಲ್ಲಿಂದಲೂ ನಿವೃತ್ತರಾಗಿದ್ದರು. ಇವರಿಗೆ ಮೂವರು ಪುತ್ರಿಯರು. ಸಿಖಂದರಾಬಾದ್‌ನಲ್ಲಿರುವ ಮಗಳು ಅರ್ಚನಾ ಹಾವೇರಿ ಅವರಿಗೆ ಅಮರಗೋಳದಲ್ಲಿರುವ ಮನೆಯನ್ನು ಉಡುಗೊರೆಯಾಗಿ ನೋಂದಾಯಿಸಿದ್ದರು.

ಮಗಳ ಹೆಸರಿನಲ್ಲಿರುವ ಮನೆಯಲ್ಲಿ ಬಸವರಾಜ ಅವರು ಇದ್ದರು. ಆದರೆ ಈ ಉಡುಗೊರೆ ಪತ್ರವನ್ನು ದುರುಪಯೋಗಪಡಿಸಿಕೊಂಡು ತನ್ನನ್ನು ಮನೆಯಿಂದ ಹೊರಕ್ಕೆ ಹಾಕುವ ಹುನ್ನಾರವನ್ನು ಮಗಳು ನಡೆಸಿದ್ದಾಳೆ. ಇದಕ್ಕಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ. ಹೀಗಾಗಿ ನೋಂದಾಯಿಸಿದ ಪತ್ರವನ್ನು ರದ್ದುಪಡಿಸುವಂತೆ ಕೋರಿ ಹಿರಿಯ ನಾಗರಿಕ ಕಾಯ್ದೆ ಅಡಿ ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದರು.

ಈ ಪ್ರಕರಣವನ್ನು ಪುರಸ್ಕರಿಸಿದ್ದ ಉಪವಿಭಾಗಾಧಿಕಾರಿ ನ್ಯಾಯಾಲಯ, ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿತ್ತು. ‘ಅರ್ಚನಾ ಅವರು ಭಾರತೀಯ ಜೀವವಿಮಾ ನಿಗಮದಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ ₹1.20ಲಕ್ಷ ವೇತನ ಪಡೆಯುತ್ತಿದ್ದಾರೆ. ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಡಲಾಗಿದೆ. ಸಾಕಷ್ಟು ಬಂಗಾರ, ಬೆಳ್ಳಿಯನ್ನೂ ನೀಡಲಾಗಿದೆ. ಮುಪ್ಪಿನ ಕಾಲಕ್ಕೆ ನಮ್ಮನ್ನು ನೋಡಿಕೊಳ್ಳುತ್ತಾಳೆ ಎನ್ನುವ ನಂಬಿಕೆಯಿಂದ 2011ರಲ್ಲಿ ಇರುವ ಮನೆಯನ್ನೂ ಉಡುಗೊರೆಯಾಗಿ ನೀಡಿದ್ದೇನೆ. ಈಗ ತೊಂದರೆ ಕೊಡುತ್ತಿದ್ದಾರೆ’ ಎಂದು ಬಸವರಾಜ ಅವರು ಆರೋಪಿಸಿದ್ದರು.

ಇದಕ್ಕೆ ಅರ್ಚನಾ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿ, ‘ತಂದೆ ಹಾಗೂ ತಾಯಿ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಸಾಕಷ್ಟು ನಿವೃತ್ತಿ ವೇತನವೂ ಇವರಿಗೆ ಸಿಗುತ್ತಿದೆ. ಆದರೆ ತಮಗೆ ತೊಂದರೆಯಾಗುತ್ತಿದೆ ಎಂದು ಒಮ್ಮೆಯೂ ಹೇಳಿಕೊಂಡಿಲ್ಲ. ಅವರು ಬಂದರೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ತಿಳಿಸಿದ್ದರು.

ಆದರೆ ವಿಚಾರಣೆ ಸಂದರ್ಭದಲ್ಲಿ ಪ್ರತಿವಾದಿ ಸಮರ್ಪಕ ಉತ್ತರ ನೀಡುವ ಬದಲು ಹಾರಿಕೆ ಉತ್ತರ ನೀಡಿದ್ದಾರೆ. ತಂದೆ ತಾಯಿ ಅವರೊಂದಿಗೆ ಪ್ರೀತಿಯಿಂದ ವರ್ತಿಸಿ ಸಮಸ್ಯೆ ಪರಿಹರಿಸಿಕೊಳ್ಳುವ ಬದಲು ಹಾರಿಕೆ ಉತ್ತರ ನೀಡಿದ್ದಾರೆ. ಅಲ್ಲದೆ, ಪಾಲಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದರಿಂದ ಅರ್ಜಿದಾರರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ನ್ಯಾಯಾಲಯ ನಿರ್ಧರಿಸಿ, ಉಡುಗೊರೆಯಾಗಿ ನೀಡಿರುವ ಆಸ್ತಿಯ ದಾಖಲೆಯಲ್ಲಿ ಅರ್ಜಿದಾರರ ಹೆಸರನ್ನು ಮೊದಲಿನಂತೆಯೇ ಮುಂದುವರಿಸುವಂತೆ ಮಹಾನಗರ ಪಾಲಿಕೆಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT