ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಗಳಿಗೂ ಸೌಲಭ್ಯ ನೀಡಿ: ಶಿವಮೂರ್ತಿ

Last Updated 2 ಜನವರಿ 2019, 14:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕದಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಸಾಕಷ್ಟು ಅಲೆಮಾರಿ ಜನಾಂಗದವರಿದ್ದು, ಅವರಿಗೆ ರಾಜ್ಯ ಸರ್ಕಾರ ಮೂಲ ಸೌಕರ್ಯ ಕಲ್ಪಿಸಬೇಕು. ಕಂದಾಯ ರಹಿತ ಗ್ರಾಮಗಳ ಬಗ್ಗೆ ಪ್ರತ್ಯೇಕ ಅಂಕಿಅಂಶ ಮಾಹಿತಿ ಕಲೆಹಾಕಬೇಕು ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಕೆ. ಶಿವಮೂರ್ತಿ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕರ್ನಾಟಕದಲ್ಲಿ 68 ಸಾವಿರ ಜನವಸತಿ ಪ್ರದೇಶಗಳಿದ್ದು, ಸೌಲಭ್ಯ ಕಲ್ಪಿಸುವಂತೆ 15 ಸಾವಿರ ಅರ್ಜಿಗಳು ಸರ್ಕಾರಕ್ಕೆ ಬಂದಿವೆ. ಈಗಿನ ನಿಯಮದ ಪ್ರಕಾರ 50 ಮನೆಗಳು ಹಾಗೂ 150 ಜನಸಂಖ್ಯೆ ಇದ್ದರೆ ಅದನ್ನು ಕಂದಾಯ ಗ್ರಾಮವೆಂದು ಘೋಷಿಸಲು ಅವಕಾಶವಿದೆ. ಇದಕ್ಕಿಂತಲೂ ಕಡಿಮೆ ಜನ ಇದ್ದರೆ ಅವರ ಪಾಡೇನು’ ಎಂದು ಪ್ರಶ್ನಿಸಿದರು.

‘ಅಲೆಮಾರಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ. ಇದರಿಂದ ಅವರು ನಿರ್ಗತಿಕರಾಗಿದ್ದಾರೆ. ಅವರು ವಾಸವಿರುವ ಸ್ಥಳಗಳನ್ನು ಕಂದಾಯ ಗ್ರಾಮವೆಂದು ಘೋಷಿಸಿ ಯೋಜನಾ ಆಯೋಗದಲ್ಲಿ ಅವರನ್ನು ಸೇರ್ಪಡೆ ಮಾಡಬೇಕು. ಆಗ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನಷ್ಟು ಜನವಸತಿ ಕೇಂದ್ರಗಳ ಸಂಖ್ಯೆ ಪತ್ತೆ ಹಚ್ಚಬೇಕು’ ಎಂದರು.

‘ತಾಂಡಾಗಳಲ್ಲಿ ಈಗಲೂ ಕಡುಬಡತನವಿದೆ. ಅನೇಕ ಕುಟುಂಬದವರು ಹೊಟ್ಟೆಪಾಡಿಗೆ ತಮ್ಮ ಮಕ್ಕಳನ್ನೇ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೂ ಸರ್ಕಾರ ಗೌರವಯುತ ಬದುಕು ನಡೆಸಲು ಅನುಕೂಲ ಮಾಡಿಕೊಡಬೇಕು. ಉನ್ನತ ಶಿಕ್ಷಣಕ್ಕೆ ಅವಕಾಶ ಕೊಡಬೇಕು. ಈ ಎಲ್ಲ ಸೌಲಭ್ಯ ಲಭಿಸಬೇಕಾದರೆ ಪ್ರತಿ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕಬೇಕು’ ಎಂದು ಅಭಿಪ್ರಾಯಪಟ್ಟರು.

ಕೆಪಿಸಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ ಮಾತನಾಡಿ ‘ಪಂಚಾಯ್ತಿಗಳಿಗೆ ಈಗ ಸಾಕಷ್ಟು ಅಧಿಕಾರವಿದೆ. ಆದ್ದರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಸಿಇಒಗಳು ದಕ್ಷತೆಯಿಂದ ಕೆಲಸ ಮಾಡಿ ದುರ್ಬಲ ವರ್ಗದವರಿಗೆ ಸೌಲಭ್ಯಗಳನ್ನು ಕೊಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT