ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‍ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ ಸಾರ್ವಜನಿಕರ ಪ್ರವೇಶಕ್ಕೆ ಶೀಘ್ರ ಮುಕ್ತ

Last Updated 8 ಏಪ್ರಿಲ್ 2022, 4:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಂದಿರಾ ಗಾಜಿನ ಮನೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಹುದಿನಗಳಿಂದ ಪ್ರವೇಶಕ್ಕೆ ಕಾಯುತ್ತಿದ್ದ ಗಾಜಿನ ಮನೆ ಶೀಘ್ರವೇ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಇಂದಿರಾ ಗಾಜಿನ ಮನೆ ಹುಬ್ಬಳ್ಳಿಯ ಪ್ರಮುಖ ಆಕರ್ಷಣೆಗಳಲ್ಲೊಂದು. ವಾಯುವಿಹಾರ, ಮಕ್ಕಳ ಆಟಕ್ಕೆ ಹೇಳಿ ಮಾಡಿಸಿದಂತಿದೆ. ವಾರಾಂತ್ಯದಲ್ಲಿ ಸಾರ್ವಜನಿಕರು ಕುಟುಂಬ ಸಮೇತ ಬಂದು ಸಂತಸದ ಸಮಯ ಕಳೆಯುತ್ತಿದ್ದರು. ಕೆಲ ದಿನಗಳಿಂದ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ಒಟ್ಟು ₹29.87 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿತ್ತು. ₹13.31 ಕೋಟಿ ವೆಚ್ಚದಲ್ಲಿ ಮಹಾತ್ಮ ಗಾಂಧಿ ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಪಾದಚಾರಿ ಮಾರ್ಗ, ಮಕ್ಕಳ ಆಟದ ಮೈದಾನ, ಫುಡ್ ಕೋರ್ಟ್, ಬಯಲು ವ್ಯಾಯಾಮ ಪ್ರದೇಶ, ಕ್ರೀಡಾಂಗಣ, ಸ್ಕೇಟಿಂಗ್ ಮೈದಾನ ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

₹3.1 ಕೋಟಿ ವೆಚ್ಚದಲ್ಲಿ ಇಂದಿರಾ ಗಾಜಿನ ಮನೆಗೆ ಬಣ್ಣ, ಜಿಐ ಶೀಟ್ ಹಾಗೂ ಸ್ಲೈಡಿಂಗ್ ಗೇಟ್‍ಗಳನ್ನು ಅಳವಡಿಸಲಾಗಿದೆ.₹4.67 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ ಲೇಸರ್ ಷೋ, ನೀರಿನ ಪರದೆ (ವಾಟರ್ ಕರ್ಟೆನ್) ಅಭಿವೃದ್ಧಿ ಪಡಿಸಲಾಗಿದೆ.₹4.59 ಕೋಟಿ ವೆಚ್ಚದಲ್ಲಿ ಕಾರ್ ಫಜಲ್ ಪಾರ್ಕಿಂಗ್ ಹಾಗೂ ₹4.2 ಕೋಟಿ ವೆಚ್ಚದಲ್ಲಿ ಟಾಯ್ ಟ್ರೈನ್ ಓಡಿಸಲು ಅವಶ್ಯಕ ಕಾಮಗಾರಿ ಕೈಗೊಳ್ಳಲಾಗಿದೆ.

ಏಪ್ರಿಲ್‌ ಎರಡನೇ ವಾರದಲ್ಲಿ ಉದ್ಘಾಟನೆ: ಗಾಜಿನ ಮನೆ ಆವರಣದಲ್ಲಿ ನಡೆದಿದ್ದ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದು, ಏಪ್ರಿಲ್‌ ಎರಡನೇ ವಾರದಲ್ಲಿ ಅವುಗಳನ್ನು ಉದ್ಘಾಟನೆಗೊಳಿಸಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ತಿಳಿಸಿದರು.

ಬೆಳಿಗ್ಗೆ 6 ರಿಂದ 9 ರವರೆಗೆ ವಾಯುವಿಹಾರಕ್ಕೆ ಅವಕಾಶ ನೀಡಲಾಗಿದೆ. ನಂತರ 10.30 ರಿಂದ ರಾತ್ರಿ 8.30 ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಟಾಯ್ ಟ್ರೈನ್‍ನಲ್ಲಿ ಆಟವಾಡುವ ಮಕ್ಕಳಿಗೆ ₹ 20 ಶುಲ್ಕ ವಿಧಿಸಲಾಗುವುದು.ಉದ್ಯಾನ ನಿರ್ವಹಣೆಗೆ ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.

ಇಂದಿರಾ ಗಾಜಿನಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದರಿಂದ ವ್ಯಾಪಾರಕ್ಕೆ ಹಿನ್ನೆಡೆಯಾಗಿದೆ. ಪುನಃ ಆರಂಭವಾದರೆ ವ್ಯಾಪಾರ ಚೆನ್ನಾಗಿ ಆಗಬಹುದು ಎಂಬ ನಂಬಿಕೆ ಇದೆ ಎಂದು ಸಂಜೋತಾ ಚಿತ್ರ ಮಂದಿರದ ಎದುರು ಸಣ್ಣ ಅಂಗಡಿ ಇಟ್ಟುಕೊಂಡಿರುವ ದೇವಪ್ಪ ತ್ಯಾಲೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT