ಮಂಗಳವಾರ, ನವೆಂಬರ್ 12, 2019
28 °C
ಚಿನ್ನದ ಹುಡುಗಿಗೆ ಐಎಎಸ್ ಅಧಿಕಾರಿಯಾಗುವಾಸೆ

ಜನ್ಮದಿನದಂದೇ ಚಿನ್ನದ ಪದಕಗಳ ಉಡುಗೊರೆ

Published:
Updated:
Prajavani

ಧಾರವಾಡ: ತನ್ನ ಜನ್ಮದಿನದಂದೇ 14 ಚಿನ್ನದ ಪದಕಗಳನ್ನು ಪಡೆದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ ಎಂಬಿಬಿಎಸ್ ಪದವೀಧರೆ ಡಾ. ಪೂಜಾ ಹಿತ್ತಲಮನಿ ಅವರು ಐಎಎಸ್ ಅಧಿಕಾರಿ ಆಗುವ ಗುರಿ ಹೊಂದಿದ್ದಾರೆ.

ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 11ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿವಿಧ ಉದ್ದೇಶಗಳಿಗಾಗಿ ಸ್ಥಾಪಿಸಿದ ಚಿನ್ನದ ಪದಕಗಳಿಗೆ ಕೊರಳೊಡ್ಡುತ್ತಿದ್ದ ಡಾ. ಪೂಜಾ ಅವರಿಗೆ ಇಡೀ ಸಭಾಂಗಣವೇ ಚಪ್ಪಾಳೆಯ ಮಳೆಗರೆಯಿತು. ಗಣ್ಯರು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪದಕ ಸ್ವೀಕರಿಸಿ ಮಾತನಾಡಿದ ಡಾ.ಪೂಜಾ, ‘ಮಕ್ಕಳ ಹೃದಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದಿದ್ದೇನೆ. ಆ ಮೂಲಕ ವೈದ್ಯಕೀಯ ವಿಷಯದಲ್ಲಿ ಆಳವಾಗಿ ಅಧ್ಯಯನ ನಡೆಸುವ ಉದ್ದೇಶವಿದೆ. ನಂತರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿ, ಐಎಎಸ್‌ ಅಧಿಕಾರಿ ಆಗಬೇಕೆಂದಿದ್ದೇನೆ’ ಎಂದರು.

ಹುಬ್ಬಳ್ಳಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿರುವ ಇವರ ತಂದೆ ಡಾ. ರಾಯಪ್ಪ ಹಿತ್ತಲಮನಿ ಹಾಗೂ ಸ್ತ್ರೀರೋಗ ತಜ್ಞೆಯಾಗಿರುವ ಡಾ. ಗಿರಿಜಾ ಹಿತ್ತಲಮನಿ ಅವರು ಮಗಳ ಸಾಧನೆಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ‘ಬಾಲ್ಯದಿಂದಲೂ ಚೂಟಿಯಾಗಿದ್ದ ಮಗಳು, ಎಸ್‌ಎಸ್‌ಎಲ್‌ಸಿಯಲ್ಲಿ  ರಾಜ್ಯಕ್ಕೆ ರ‍್ಯಾಂಕ್ ಪಡೆದಿದ್ದಳು. ಅವಳ ಸಾಧನೆ ಸಂತಸ ತಂದಿದೆ. ಮತ್ತೊಬ್ಬಳು ಮಗಳೂ ಈಗ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಳೆ’ ಎಂದರು.

ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಶೇಖರ ಶೆಟ್ಟಿ, ‘ಮಂಗಳನ ಅಂಗಳದಲ್ಲಿ ಇಳಿಯುವ ಉತ್ಸಾಹದಲ್ಲಿರುವ ನಾವು ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವ ಮೂಲಕ ದೇಶದ ಜನರಿಗೆ ಉತ್ತಮ ಆರೋಗ್ಯ ನೀಡಬೇಕಿದೆ. ನೆರೆಯ ಪುಟ್ಟ ರಾಷ್ಟ್ರಗಳ ಆರ್ಥಿಕ ಪ್ರಗತಿ ಉತ್ತಮವಾಗಿದ್ದು, ಭಾರತ ಭ್ರಷ್ಟಾಚಾರದಲ್ಲಿ ಮಾತ್ರ ಸಾಧನೆ ತೋರುತ್ತಿರುವುದು ಬೇಸರದ ಸಂಗತಿ’ ಎಂದರು. 

‘ಎಂಬಿಬಿಎಸ್‌ ಪದವಿ ಪಡೆದರೆ ಕೇವಲ ಮನುಷ್ಯರಿಗೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯ. ಆದರೆ ನಾವು ಬದುಕುತ್ತಿರುವ ಪರಿಸರದಲ್ಲಿ ಪ್ರಾಣಿ, ಪಕ್ಷಿ, ಗಿಡಮರಗಳೂ ಇವೆ. ಹೀಗಿರುವಾಗ ಎಲ್ಲಾ ಕಲಿಕೆಯನ್ನೂ ಒಳಗೊಂಡ ಅಂತರ ಶಿಸ್ತೀಯ ಪಠ್ಯಕ್ರಮದ ಅಗತ್ಯವಿದೆ. ಜತೆಗೆ ಕಲಿಕೆಯೂ ಮೌಲ್ಯಾಧಾರಿತ, ಮೌನವ ಹಕ್ಕುಗಳನ್ನು ಒಳಗೊಂಡ ಹಾಗೂ ಆರೋಗ್ಯ ಹಕ್ಕು ಸೇರಿರಬೇಕು. ಕಾಯಿಲೆಯನ್ನು ನಿಯಂತ್ರಿಸಿ, ಆರೋಗ್ಯವನ್ನು ವೃದ್ಧಿಸುವ ಕೋರ್ಸ್‌ಗಳು ಇಂದಿನ ಅಗತ್ಯವಾಗಿದೆ. ಅತ್ಯಂತ ಘನತೆ ಇರುವ ವೈದ್ಯಕೀಯ ವೃತ್ತಿಯಲ್ಲಿ ರೋಗಿಯೇ ದೇವರು ಎಂದು ಉಪಚರಿಸಿ, ಚಿಕಿತ್ಸೆ ನೀಡುವುದನ್ನು ಯುವ ವೈದ್ಯರು ರೂಢಿಸಿಕೊಳ್ಳಬೇಕು’ ಎಂದರು.

‘ಜಾಗತಿಕಮಟ್ಟದಲ್ಲಿ ಭಾರತ ಮಧುಮೇಹದ ರಾಜ್ಯಧಾನಿಯಾಗಿದೆ. ಹೃದ್ರೋಗ ಎಲ್ಲಾ ವಯೋಮಾನದವರನ್ನೂ ಬಾಧಿಸುತ್ತಿದೆ. ಇದರೊಂದಿಗೆ ಈಗ ಶ್ವಾಸಕೋಶ ಸಂಬಂಧಿಸಿದ ಕಾಯಿಲೆಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಹೊಸ ರೋಗಗಳು ಪರಿಚಯವಾಗುತ್ತಿರುವುದರ ಜತೆಗೆ, ಹಳೇ ರೋಗಗಳೂ ಉಲ್ಬಣಿಸುತ್ತಿವೆ. ಹೀಗಾಗಿ ವೈದ್ಯಕೀಯ ಪದವಿ ಪಡೆಯುವವರು ಇಂಥವುಗಳನ್ನು ನಿಯಂತ್ರಿಸುವ ಸಂಶೋಧನಾ ಕ್ಷೇತ್ರದತ್ತಲೂ ಆಸಕ್ತಿ ಹೊಂದಬೇಕು. ಆ ಮೂಲಕ ಈ ಭೂಮಿಯನ್ನು ವಾಸಯೋಗ್ಯವನ್ನಾಗಿಸಬೇಕಿದೆ’ ಎಂದು ಡಾ. ಶೆಟ್ಟಿ ಹೇಳಿದರು.

ಸಮಾರಂಭದಲ್ಲಿ 152 ಪದವಿ ಹಾಗೂ 50 ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಎಸ್‌ಡಿಎಂ ಸಂಸ್ಥೆಯ ಅಧ್ಯಕ್ಷ ಡಾ. ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಡಿ.ಯಶೋವರ್ಮ ಕುಮಾರ್, ಕಾಲೇಜಿನ ನಿರ್ದೇಶಕ ಡಾ. ನಿರಂಜ ಕುಮಾರ್, ಜೀವಿಂದರ್ ಕುಮಾರ್, ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ, ಕರ್ನಲ್ ಡಾ. ಯು.ಎಸ್.ದಿನೇಶ್, ಡಾ. ಪಿ.ಸತ್ಯಶಂಕರ, ಡಾ.ಎಸ್.ಕೆ.ಜೋಶಿ ಇದ್ದರು. 

ಪ್ರತಿಕ್ರಿಯಿಸಿ (+)