ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಜನರ ಬಹುಪ್ರಿಯ ಬಜೆಟ್‌: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪ್ರಮುಖರ ವಿಶ್ಲೇಷಣೆ

Last Updated 4 ಮಾರ್ಚ್ 2022, 12:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಮೊದಲ ಬಜೆಟ್‌ ಎಲ್ಲಾ ವರ್ಗದ, ಇಲಾಖೆಗಳ ಮತ್ತು ಆಡಳಿತದ ಜನರನ್ನು ಒಳಗೊಂಡಿದೆ. ಇದು ‘ಬಹುಜನ, ಬಹುಪ್ರಿಯ ಬಜೆಟ್‌’ ಆಗಿದೆ ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವಿಶ್ಲೇಷಿಸಿದೆ.

ಬಜೆಟ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸ್ಥೆ ಅಧ್ಯಕ್ಷ ವಿನಯ್‌ ಜವಳಿ ‘ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಆದ್ಯತೆ ನೀಡಲಾಗಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕಿತ್ತೂರಿನ ಮೂಲಕ ಹುಬ್ಬಳ್ಳಿ–ಬೆಳಗಾವಿ ರೈಲು ಮಾರ್ಗಕ್ಕೆ ಅನುದಾನ ನೀಡಿದ್ದು, ಕಾಮಗಾರಿ ಚುರುಕುಪಡೆದುಕೊಳ್ಳಲು ಅನುಕೂಲವಾಗಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಗತ್ಯಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸಲು ಅದ್ಯತೆ ನೀಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಹಣ ಮೀಸಲಿಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಧಾರವಾಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಎಲ್ಲರಿಗೂ ಆರೋಗ್ಯ ಸಂಜೀವಿನಿ, ರೈಲು ಕಾಮಗಾರಿಗೆ ನೆರವು, ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸ‌ರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದರಲ್ಲಿ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ತುಮಕೂರಿನಿಂದ ಹುಬ್ಬಳ್ಳಿ ತನಕ ವಿಶೇಷ ಕೈಗಾರಿಕಾ ಕಾರಿಡಾರ್‌ ಮಾಡುವುದಾಗಿ ಹೇಳಿದ್ದಾರೆ. ಇದರ ವ್ಯಾಪ್ತಿಯಲ್ಲಿ ಯಾವ ಜಿಲ್ಲೆಗಳು ಬರುತ್ತವೆ, ಏನೆಲ್ಲಾ ಸೌಲಭ್ಯಗಳ ಲಭಿಸುತ್ತವೆ ಎನ್ನುವ ವಿವರಣೆ ಗೊತ್ತಾಗಬೇಕಿದೆ. ಸ್ಟಾರ್ಟ್‌ ಅಪ್‌ ಆರಂಭಿಸುವ ಮಹಿಳೆಯರಿಗೆ ₹10 ಲಕ್ಷ ನೀಡುವುದಾಗಿ ಘೋಷಿಸಿರುವುದು ಮಹತ್ವದ ಅಂಶವಾಗಿದೆ’ ಎಂದರು.

‘ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಸ್ಥಳ ತುಂಬಿ ಹೋಗಿದೆ. ದೊಡ್ಡ ಉದ್ಯಮಿಗಳು ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬಂದರೆ ಅವರಿಗೆ ಸ್ಥಳಾವಕಾಶವೇ ಇಲ್ಲ. ಆದ್ದರಿಂದ ಹುಬ್ಬಳ್ಳಿಯಿಂದ ಬೆಳಗಾವಿ, ಹಾವೇರಿ ಹಾಗೂ ಗದಗ ಹೋಗುವ ಮಾರ್ಗದಲ್ಲಿ ಕೈಗಾರಿಕಾ ಪ್ರದೇಶ ಗುರುತಿಸಿ ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದ್ದೆವು. ಬಹುಶಃ ವಿಶೇಷ ಕೈಗಾರಿಕಾ ಕಾರಿಡಾರ್‌ ವ್ಯಾಪ್ತಿಯಲ್ಲಿ ಈ ಸ್ಥಳಗಳು ಕೂಡ ಬರಬಹುದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್‌. ಸತೀಶ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಜಿ.ಕೆ. ಆದಪ್ಪಗೌಡರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT