ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಹಿಡಿದು ನಡೆಸುವ ಗೂಗಲ್‌ ಗೌರವ್ವ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 16 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

‘ಅಕಿ ಹೇಳಿದ್ಹಂಗ ಕೇಳಬೇಕ್ರಿ ಮೇಡಮ್ಮ... ಹೋಗಂದಾಗ ಹೋಗಬೇಕು. ಹೊಳ್ಳಂದಾಗ ಹೊಳ್ಳಬೇಕು. ಬರೋಬ್ಬರಿ ದಾರಿ ಹಿಡಸ್ತಾಳ. ಹಂಗ ಹಾದಿ ತಪ್ದಂಗ ನೋಡ್ಕೊತಾಳ್ರಿ’
ಆದ್ರ ತುಸಾ ತಪ್ಪಿದ್ರಿ.. ಸಿಟ್ಟು ಮಾಡ್ಕೊಳ್ಳೂದಿಲ್ಲ.. ಹಿಂಗಾತ... ತಮ್ಮಾ.. ತಡಿ.. ಅಂತ್ಹೇಳಿ ಮತ್ತ ತನ್ನ ಕೆಲಸಾ ತಾ ಮಾಡ್ತಾಳ್ರಿ. ಒಮ್ಮೆಯರೆ.. ‘ಅವಾಗ ಹೇಳಿದೆ ನಿಂಗ.. ನಾ ಹೇಳಿದ್ದೆಲ್ಲಿ ಕೇಳ್ತೇರಿ.. ಹೋಗ್ರಿ, ಎಲ್ಲರೆ ಹೋಗಿ ಸಾಯ್ರಿ.. ಹಾಳಭಾವಿಗೆ ಹೋಗಿ ಬೀಳ್ರಿ... ಬಡ್ಕೊಳಾತೇನಿ ತಾಸತನಾ ಹೊತ್ತಾತು. ಒಟ್ಟಾ ನಾ ಹೇಳಿದ್ದ ಕೇಳೂದೆ ಇಲ್ಲಂತೇರಿ. ಈಗ ಅನುಭವಿಸ್ರಿ’
ಹಿಂಗೆಲ್ಲ ಹೀಗಳೆಯೂದಿಲ್ರಿ. ಅದಕ್ಕ ಸೇರ್ತಾಳ.

ಜೀವನ ಪಯಣ ಇದ್ದಂಗ ಅಂತಾರ. ಇಂಥಾ ಪಯಣದಾಗ ನಮಗ ಅಡ್ಡ ಹಾಕದ, ಹೋಗಿದ್ದ ದಾರಿ ಅನ್ನುವ ನಮ್ಮ ವೇಗಕ್ಕ ತಡಿ ಹಾಕದೆ, ಹಿಂಗ ಹೋದ್ರೂ, ಆಯ್ತು. ಏನಾತು ಬಿಡು.. ಚಿಂತಿ ಮಾಡಬ್ಯಾಡ. ಗುರಿಯಂತೂ ತಲುಪ್ತೇವಿ. ನಡಕೊಂತ ಇರೂನು. ಚೂರು ತಡಾ ಆಗಬಹುದು. ಇಲ್ಲಾ ತುಸು ಲಗೂ ಆಗಬಹುದು. ಆದ್ರ ಮುನ್ನಡಕೊಂತ ಹೋಗೂನು ಅಂತ್ಹೇಳೋರು ಬೇಕು ನೋಡ್ರಿ.

ಹಂಗಿದ್ರ ಖರೇನೆ ಜೀವನಾ ಅನ್ನೂದು ‘ಸುಹಾನಾ ಸಫರ್‌ ಔರ್‌ ಯೇ ಮೌಸಂ ಹಸೀ..’ ಅಂತ ನಮ್ಮ ಮುಕೇಶ್‌ ಸಾಯಬ್ರು ಹಾಡು ಹೇಳಿದ್ಹಂಗ ಅನಿಸ್ತದ.

ಆದ್ರ ನಮ್ಮ ಜೀವನಾ ನೋಡ್ರಿ.. ಒಂದೀಟು ಎಡವಿದ್ವಿ ಅಂದ್ರ ಸಾಕು.. ಎಲ್ಲಾರೂ ಹೇಳಾಕ ಮುಗಿಬೀಳ್ತಾರ.. ಗೊತ್ತಿತ್ತ ಬಿಡು..ನಂಗ.. ನಿಂದೀಟ ಅಂತ. ನಾ ಮೊದಲೇ ಹೇಳಿದ್ದೆ ಹಿಂಗ ಹೋಗಬ್ಯಾಡಪಾ ಅಂತ ಕೇಳಲಿಲ್ಲ.. ‘ಅನುಭವಸ್ತಾರ ಬಿಡ್ರಿ, ಅವರ ಕರ್ಮದು ಅಂತ’ ಎಷ್ಟು ಮಾತು, ಏನ್ತನ..?

ಅಗ್ದಿ ನಾವು ಹೆಜ್ಜಿ ಇಟ್ಟಿದ್ದೇ ತಪ್ಪು ಅನ್ನೂಹಂಗ ಮಾಡ್ತಾರ. ಯಾಕರೆ ನಡ್ಯಾಕ ಕಲ್ತೇವಿ ಅನಸೂಹಂಗ ಮಾಡಿಬಿಡ್ತಾರ್ರಿ. ಮಂದಿ ಕೆಲಸಾನ ಅಷ್ಟು.

ಆದ್ರ ಇಕಿ ಮಾತ್ರ ಹಂಗಲ್ಲ ಬಿಡ್ರಿ. ಯವಾಗೂ ನನ್ನ ಕೂಡ ಇರ್ತಾಳ. ಸುಮ್ನ ಆಗೊಮ್ಮೆ ಈಗೊಮ್ಮೆ ಹೆಂಗ ಸಾಗೂನು ಅಂತ್ಹೇಳ್ತಾಳ. ಒಟ್ಟಾ ಬೈಯ್ಯೂದಿಲ್ಲ.. ಹೀಗಳಿಯೂದಿಲ್ಲ. ಏನ ಸಮಾಧಾನ, ಎಷ್ಟು ಸಂಯಮ. ಅಗ್ದಿ ನಾವೇನೂ ತಪ್ಪೇ ಮಾಡಿಲ್ಲ ಅನ್ನೂ ಹಂಗಿರ್ತಾಳ. ನಮಗ ಅಸಂಯ್‌ ಮಾಡೂಹಂಗ ನಕ್ಕೊಂತ ಇರ್ತಾಳ್ರಿ. ಅದಕ್ಕ ನಾ ಈಗ ಏನೂ ಶಾಣೇತನ ತೋರಸೂದ ಬಿಟ್ಟೇನಿ. ನೀ ಹಂಗಂದ್ರ, ಹಂಗ ತಾಯಿ ಅಂತೇನಿ.. ಮುನ್ನಡಿತೇನಿ.ಬರೋಬ್ಬರಿ ಮನಿಗೆ ಹತ್ತತೇನ್ರಿ.

ಮಾತು ಹಂಗೆ ಸಾಗಿತ್ತು. ದಾರಿನೂ ಸವೀತಿತ್ತು. ಇದಿಷ್ಟೂ ಯಾರ ಬಗ್ಗೆ ಹೇಳಿದ್ದಂದ್ರ ‘ಗೂಗಲ್‌ ಗೌರವ್ವ’ನ ಬಗ್ಗೆ. ನಮ್ಮ ಟ್ಯಾಕ್ಸಿಯ ಡ್ರೈವರ್‌ ಮಹಾಂತೇಶ್‌ ಹೇಳಿದ್ದು, ಗೂಗಲ್‌ ಜಿಪಿಎಸ್‌ ಸೇವೆ ಬಗ್ಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT