ಮಂಗಳವಾರ, ಆಗಸ್ಟ್ 9, 2022
23 °C
ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ: ಸೆಲ್ಕೊ ಸಂಸ್ಥಾಪಕ ಹರೀಶ್‌ ಹಂದೆ ಅಭಿಪ್ರಾಯ

ಬಡತನದ ಮಾತನಾಡಿದರೆ ದೇಶದ್ರೋಹಿ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಿಜವಾದ ರಾಷ್ಟ್ರೀಯವಾದಿಗಳಾದರೆ ಭಾರತದ ಬಡತನದ ಬಗ್ಗೆ ಚರ್ಚಿಸಲಿ. ಧರ್ಮ ಮತ್ತು ನಂಬಿಕೆಗಳ ಕುರಿತಲ್ಲ. ರಾಷ್ಟ್ರೀಯವಾದವನ್ನು ಸಮರ್ಥಿಸುವುದಾದರೆ, ಭಾರತದ ಬಡತನ ನಿರ್ಮೂಲನೆಗೆ ಶ್ರಮಿಸಲಿ. ಅದೇ ನಿಜವಾದ ರಾಷ್ಟ್ರೀಯವಾದ ಮತ್ತು ರಾಷ್ಟ್ರಭಕ್ತಿ. ಆದರೆ ಬಡತನದ ಕುರಿತು ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ’ ಎಂದು ಸೆಲ್ಕೊ ಸಂಸ್ಥಾಪಕ ಹರೀಶ್‌ ಹಂದೆ ಹೇಳಿದರು.

ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌, ಮೇಲುಕೋಟೆ ಹಾಗೂ ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ನಗರದ ಬಿವಿಬಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಉತ್ತಮ ಸ್ಥಾನದಲ್ಲಿದೆ ಎಂದು ಸಮಾಧಾನಪಡುತ್ತಿದ್ದೇವೆ. ರೈತರಿಗೆ ಯಾರೂ ಗೌರವ ಡಾಕ್ಟರೇಟ್‌ ನೀಡುವುದಿಲ್ಲ. ಸ್ಥಳೀಯ ಭಾಷೆ ಮಾತನಾಡುವ ಹಲವಾರು ಸಾಧಕರನ್ನು ಗುರುತಿಸುವುದಿಲ್ಲ. ಚಂದ ಇಂಗ್ಲಿಷ್‌ ಮಾತನಾಡುವವರಿಗೆ ಮಾನ್ಯತೆ ಸಿಗುತ್ತಿದೆ. ಸ್ಥಳೀಯ ಬುದ್ಧಿಮತ್ತೆ, ಜನಪದೀಯ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡುತ್ತಿಲ್ಲ. ಸಿಕ್ಕಿಂ, ಅಸ್ಸಾಂ, ಒಡಿಶಾದಂತಹ ರಾಜ್ಯಗಳಲ್ಲಿರುವ ಬುಡಕಟ್ಟು ಜನಾಂಗದವರ ಅರಿವು ಮತ್ತು ಅನುಭವವನ್ನು ಕಡೆಗಣಿಸಿ, ಅವರನ್ನು ಕೇವಲ ಶ್ರಮಿಕರಂತೆ ಪರಿಗಣಿಸಲಾಗುತ್ತಿದೆ. ಇದೇ ಆಧುನಿಕ ಗುಲಾಮಗಿರಿ ಆಗಿದೆ’ ಎಂದು ಅಭಿಪ್ರಾಯಪಟ್ಟರು.

‘2050ರ ಹೊತ್ತಿಗೆ ಎಂಬ ಗುರಿಯಿರಿಸಿಕೊಂಡರೆ ನಾವು ಹೆಚ್ಚು ಗಮನ ಕೊಡಬೇಕಾಗಿರುವುದು ಹವಾಮಾನ ಬದಲಾವಣೆಗೆ. ಅಸ್ಸಾಮಿನ ನೆರೆ, ಕರಾವಳಿಯ ನೆರೆಗೆ ಕಾರಣ ಮತ್ತು ಪರಿಣಾಮಗಳನ್ನು ಚರ್ಚಿಸಬೇಕಾಗಿದೆ. ಪತ್ರಿಕೋದ್ಯಮವು ಜಾಗತಿಕವಾಗಿ ಜೀವನಮಟ್ಟವನ್ನು ಸುಧಾರಿಸುವಂತಹ ವಿಷಯಗಳತ್ತ ಗಮನ ಹರಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.   

ಪತ್ರಕರ್ತ ಎಚ್‌.ಆರ್‌. ಶ್ರೀಶ ಮಾತನಾಡಿ, ‘ಇಂದಿನ ಪತ್ರಕರ್ತರಿಗೆ ಎಲ್ಲ ಸೌಲಭ್ಯಗಳಿದ್ದರೂ ಕೆಲಸದ ಹುಮ್ಮಸ್ಸಿಲ್ಲ. ದುಡ್ಡಿನ ಹಿಂದೆ ಬಿದ್ದಿರುವುದರಿಂದ ಜನರ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂತಹವರನ್ನು ತಿದ್ದಬೇಕಾದವರೇ ಅವರೊಂದಿಗೆ ಕೈಜೋಡಿಸುವುದು ದುರ್ದೈವ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಶೆಟ್ಟರ್‌ ಮಾತನಾಡಿ, ‘ಹಿಂದೆ ಮಾಧ್ಯಮಗಳು ಜನರಿಗೆ ಹತ್ತಿರವಾಗಿದ್ದವು. ವಾಸ್ತವದ ಬಗ್ಗೆ ಅರಿವು ಮೂಡಿಸುತ್ತಿದ್ದವು. ಈಗ ಮಾಧ್ಯಮಗಳು ಬದಲಾಗಿವೆ’ ಎಂದು ಹೇಳಿದರು.

ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ನಿರೂಪಣೆ ಮಾಡಿದರು.

ಗೋಪಾಲಕೃಷ್ಣ ಹೆಗಡೆಗೆ ಪ್ರಶಸ್ತಿ: ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಜಿ. ಹೆಗಡೆ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಪಾರಿತೋಷಕ ಹಾಗೂ ₹15,000 ನಗದು ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಪಾಟೀಲ ಪುಟ್ಟಪ್ಪ ಪ್ರಶಸ್ತಿ ಹಾಗೂ ಖಾದ್ರಿ ಶಾಮಣ್ಣ ಪ್ರಶಸ್ತಿ ದೊರೆತಿದ್ದು ಅತ್ಯಂತ ಖುಷಿ ನೀಡಿದೆ’ ಎಂದ ಅವರು, ಶಾಮಣ್ಣ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.