ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

66ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿಗೆ ಕ್ರಮ: ಎಂ. ಕಾರಜೋಳ ಭರವಸೆ

ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಭರವಸೆ
Last Updated 25 ಜನವರಿ 2023, 5:25 IST
ಅಕ್ಷರ ಗಾತ್ರ

ಧಾರವಾಡ: ‘ರಾಜ್ಯದಲ್ಲಿ ಸುಮಾರು 66.66 ಲಕ್ಷ ಹೆಕ್ಟೇರ್‌ನಷ್ಟು ಜಮೀನಿಗೆ ನೀರಿನ ಸೌಲಭ್ಯ ಕಲ್ಪಿಸಲು ಬೇಕಾಗುವಷ್ಟು ನೀರಿನ ಲಭ್ಯತೆ ಇದ್ದು, ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಅವರು ಹೇಳಿದರು.

ನೀರು ಮತ್ತು ನೆಲ ನಿರ್ವಹಣಾ ಸಂಸ್ಥೆಯಲ್ಲಿ ಮಂಗಳವಾರ ಜರುಗಿದ ಅಂತರರಾಷ್ಟ್ರೀಯ ಜಲ ನಿರ್ವಹಣೆ ಮತ್ತು ಹವಾಮಾನ ಬದಲಾವಣೆ ಕುರಿತ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಈಗಾಗಲೇ 30ಲಕ್ಷ ಹೆಕ್ಟೇರ್‌ ಜಮೀನಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇನ್ನುಳಿದ 10.60ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಒದಗಿಸಲು ಇಲಾಖೆ ಕಾರ್ಯ ನಿರತವಾಗಿದೆ. ಜಲ ಸಂಪನ್ಮೂಲದ ಗರಿಷ್ಠ ಸದ್ಬಳಕೆಗೆ ರಾಜ್ಯ ಸರ್ಕಾರವು ಬದ್ಧವಾಗಿದೆ. ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಯಥಾವತ್ತಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಕಾರಜೋಳ ಭರವಸೆ ನೀಡಿದರು.

‘ಅಂತರರಾಜ್ಯ ಜಲ ವಿವಾದವನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕೆಂಬುದು ರಾಜ್ಯ ಸರ್ಕಾರದ ನಿಲುವು. ಅನಗತ್ಯ ಸಂಘರ್ಷಕ್ಕೆ ದಾರಿ ಮಾಡಿಕೊಡದೇ ನ್ಯಾಯಾಲಯಗಳ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ’ ಎಂದು ತಿಳಿಸಿದರು.

‘ನೀರಿನ ನಿರ್ವಹಣೆಗೆ ಸಂಬಂಧಿಸಿದ ಕೆಲಸ ಕೇವಲ ಸರ್ಕಾರದ್ದು ಎಂದು ಭಾವಿಸದೇ ಶುದ್ಧ ಕುಡಿಯುವ ನೀರು ಪಡೆಯಲು ಸ್ವಯಂ ಪ್ರೇರಣೆಯಿಂದ ಆಯಾ ಗ್ರಾಮಪಂಚಾಯ್ತಿ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಜತೆ ಸಂಪರ್ಕದೊಂದಿಗೆ ಸೌಲಭ್ಯ ಪಡೆಯಬೇಕು. ಶುದ್ಧ ನೀರಿನಿಂದ ಮನುಷ್ಯನ ಅರ್ಧದಷ್ಟು ರೋಗಗಳನ್ನು ತಡೆಗಟ್ಟಬಹುದು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ರೈತರ ಹೊಲಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಸಮರ್ಪಕ ವಿದ್ಯುತ್ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದೇ ವೇಳೆಗೆ ರೈತರು ರಾತ್ರಿ ಪಂಪ್‌ಸೆಟ್‌ಗಳನ್ನು ಚಾಲೂ ಮಾಡಿ ಮಲಗಿಕೊಂಡಲ್ಲಿ ನೀರು ಅಪವ್ಯಯ ಆಗುವ ಸಾಧ್ಯತೆ ಇದೆ. ನೀರಿನ ಅಪವ್ಯಯ ತಡೆಗಟ್ಟುವ ದಿಸೆಯಲ್ಲಿ ರೈತರ ಸಹಭಾಗಿತ್ವವೂ ಅಗತ್ಯವಾಗಿದೆ’ ಎಂದರು.

ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಆಸ್ಟ್ರೇಲಿಯಾದ ಜಲಸಂಪನ್ಮೂಲ ಸಚಿವೆ ಡಾ. ಕರ್ಲೀನ್ ಮೇವಾಲ್ಡ್‌, ಬೇಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವೈಶಾಲಿ ಹುಲ್ಲಂಬಿ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ್, ಡಾ. ರಾಜೇಂದ್ರ ಸಿಂಗ್, ಈಜಿಪ್ಟ್‌ನ ಜಲಸಂಪನ್ಮೂಲ ತಜ್ಞ ಡಾ. ಮೊಹಮ್ಮದ್ ಆಬ್ಡೆಲ್‌ ಆಟಿ, ಎನ್‌ಆರ್‌ಎಎ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಅಶೋಕ ದಳವಾಯಿ, ರೈತ ಪ್ರತಿನಿಧಿ ಭೀಮಸೇನ ಕೋಕರೆ ಇದ್ದರು. ನೀರಿನ ಸಂರಕ್ಷಣೆಯಲ್ಲಿ ಉತ್ತಮ ಕೆಲಸ ಮಾಡಿದ ಶಿವಾಜಿ ಕಾಗಣೀಕರ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT