ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ ತಾರತಮ್ಯ ಧೋರಣೆ ಸರಿಯಲ್ಲ’

ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಅಸ್ತಿತ್ವಕ್ಕೆ
Last Updated 15 ಡಿಸೆಂಬರ್ 2020, 16:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ವ್ಯಾಪಕವಾಗಿ ಪ್ರಚಾರ ಪಡೆಯಲು ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ದಾನಿಗಳು ಬಹಳಷ್ಟು ಕೊಡುಗೆ ನೀಡಿದ್ದಾರೆ. ಆದ್ದರಿಂದ, ಸರ್ಕಾರ ಅನುದಾನರಹಿತ ಶಾಲೆಗಳ ಬಗ್ಗೆ ತಾರತಮ್ಯ ಧೋರಣೆ ತೋರುತ್ತಿರುವುದು ಸರಿಯಲ್ಲ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.

ನಗರದ ‌ಜೈಂಟ್ಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಶೈಕ್ಷಣಿಕ ರಂಗದಲ್ಲಿ ಸರ್ಕಾರ ಮಾಡಬೇಕಾದ ಕೆಲಸವನ್ನು ಅನುದಾನರಹಿತ ಶಾಲೆಗಳು ಮಾಡುತ್ತಿವೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಶಿಕ್ಷಕರು ಉತ್ತಮ ಕೆಲಸ ಮಾಡಿದ್ದಾರೆ. ಆದ್ದರಿಂದ, ಸರ್ಕಾರ ಇವರತ್ತ ಗಮನ ಹರಿಸಬೇಕು. ಶಿಕ್ಷಕರ ಬಗ್ಗೆಯೂ ಕಾಳಜಿ ವಹಿಸಬೇಕು, ಸಂಘದ ಎಲ್ಲ ಹೋರಾಟಗಳಿಗೂ ಬೆಂಬಲ ನೀಡುತ್ತೇನೆ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಅನುದಾನರಹಿತ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿವೆ. ಸರ್ಕಾರ, ಶಾಲೆಗಳ ನವೀಕರಣ ಕಾರ್ಯದ ನಿಯಮ ಸುಲಭಗೊಳಿಸಬೇಕು. ಕೋವಿಡ್‌ ಸಂಕಷ್ಟ ಮುಗಿಯುವ ತನಕ ಸರ್ಕಾರವೇ ಶಿಕ್ಷಕರಿಗೆ ವೇತನ ಕೊಟ್ಟು ನೆರವಾಗಬೇಕು’ ಎಂದು ಮನವಿ ಮಾಡಿದರು.

ಕೊಪ್ಪಳದ ಶಿವಶಾಂತವೀರ ಶಾಲೆ ಪ್ರಾಚಾರ್ಯ ಪ್ರವೀಣ್‌, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿ ‘ಒಬ್ಬ ವ್ಯಕ್ತಿಯಲ್ಲಿನ ಶಕ್ತಿಯನ್ನು ಉದ್ದೀಪನಗೊಳಿಸಲು ಶಿಕ್ಷಣ ನೀತಿ ಅನುಕೂಲವಾಗುತ್ತದೆ. ಪಠ್ಯ ಕಡಿಮೆಮಾಡಿ ತರಗತಿಗಳಲ್ಲಿ ಪ್ರಾಯೋಗಿಕ ಜ್ಞಾನಕ್ಕೆ ಒತ್ತು ಕೊಡಲಾಗುತ್ತದೆ. ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸಿ ಶಿಕ್ಷಕರ ಬೋಧನಾ ಕೌಶಲವನ್ನೂ ಹೆಚ್ಚು ಮಾಡಲು ಉದ್ದೇಶಿಸಲಾಗಿದೆ’ ಎಂದರು. ಕೊನೆಯಲ್ಲಿ ನೀತಿ ಬಗ್ಗೆ ಸಂವಾದ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಸಂಘದ ಆಡಳಿತ ಮಂಡಳಿ ನಿರ್ದೇಶಕ ಮಹೇಂದ್ರ ಸಿಂಘಿ, ಉಪಾಧ್ಯಕ್ಷ ಲಿಂಗರಾಜ ಪಾಟೀಲ, ಗೌರವ ಕಾರ್ಯದರ್ಶಿ ಮುರಳೀಧರ ಕೆ. ಬಾಬ್ಜಿ ಇದ್ದರು.

ಕೆಎಲ್‌ಇ ಆಸ್ಪತ್ರೆ: 24ರಂದು ಭೂಮಿಪೂಜೆ

ಹುಬ್ಬಳ್ಳಿ ಹೊರವಲಯದ ಗಬ್ಬೂರು ಕ್ರಾಸ್‌ ಬಳಿ ಇರುವ ಜಾಗದಲ್ಲಿ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಡಿ. 24ರಂದು ಭೂಮಿಪೂಜೆ ನೆರವೇರಲಿದೆ. ಒಂದೂವರೆ ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಗೃಹಸಚಿವ ಬಸವರಾಜ ಬೊಮ್ಮಾಯಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪಾಲ್ಗೊಳ್ಳಲಿದ್ದಾರೆ ಎಂದು ಶಂಕರಣ್ಣ ಮುನವಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT