ಸೋಮವಾರ, ಸೆಪ್ಟೆಂಬರ್ 27, 2021
21 °C
ಕೃಷಿ, ಕಾರ್ಮಿಕ ಕಾಯ್ದೆಗಳ ವಿರುದ್ಧ ಆ. 8ರವರೆಗೆ ಪ್ರಚಾರಾಂದೋಲನ

ಸರ್ಕಾರದಿಂದ ಜನರ ಸುಲಿಗೆ: ಕೆ. ಮಹಾಂತೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸುಧಾರಣೆ ಹೆಸರಿನಲ್ಲಿ ಕಾರ್ಮಿಕರ ಪರವಾದ ಕಾಯ್ದೆಗಳನ್ನು ಸರ್ಕಾರ ಬಲಹೀನಗೊಳಿಸಿದೆ. ಕಾರ್ಮಿಕರನ್ನು ಜೀತದಾಳುಗಳನ್ನಾಗಿಸಿದೆ. ಕನಿಷ್ಠ ವೇತನ ಮತ್ತು ಜೀವನ ಭದ್ರತೆ ಕಿತ್ತುಕೊಂಡು, ಅಗತ್ಯ ವಸ್ತಗಳ ಬೆಲೆಯನ್ನು ಗಗನಕ್ಕೇರಿಸಿ ಜನರನ್ನು ಸುಲಿಗೆ ಮಾಡುತ್ತಿದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸಿಐಟಿಯು ಮತ್ತು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಸಹಯೋಗದಲ್ಲಿ ಭಾನುವಾರ ನಡೆದ ಪ್ರಚಾರಾಂದೋಲನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ, ಕ್ವಿಟ್ ಇಂಡಿಯಾ ಚಳವಳಿ ಸ್ಮರಣಾ ದಿನವಾದ ಆಗಸ್ಟ್ 9ರಂದು ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಜುಲೈ 25ರಿಂದ ಆಗಸಸ್ಟ್ 8ರವರೆಗೆ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ಸೊಪ್ಪಿನ ಮಾತನಾಡಿ, ‘ದೇಶದಾದ್ಯಂತ ಹಾಗೂ ದೆಹಲಿ ಗಡಿಗಳಲ್ಲಿ ಎಂಟು ತಿಂಗಳಿಂದ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ರೈತರು ಮತ್ತು ಕಾರ್ಮಿಕರು ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯಿಸಿದೆ. ಸರ್ಕಾರದ ವಿರುದ್ಧ ಹಾಗೂ ಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ರೈತರು, ಕೂಲಿಕಾರರು ಹಾಗೂ ಕಾರ್ಮಿಕರು ಮನೆ ಮನೆಗಳಿಗೆ ಹೋಗಿ ಪ್ರಚಾರಾಂದೋಲನ ನಡೆಸಬೇಕು. ಆ. 9ರಂದು ದೇಶಾದ್ಯಂತ ನಡೆಯುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ಮಹದಾಯಿ ಹೋರಾಟ ಸಮಿತಿ ಸಂಚಾಲಕ ಅಮೃತ ಇಜಾರಿ, ಮುಖಂಡರಾದ ಬಿ.ಐ. ಈಳಿಗೇರ, ಶಿವಪ್ಪ ಲಮಾಣಿ, ಗುರುಸಿದ್ದಪ್ಪ ಅಂಬಿಗೇರ, ಲಲಿತಾ ಹಿರೇಮಠ, ಅಂಜನಾ ಬಡಿಗೇರ, ಹುಲಿಗೆಮ್ಮ ಚಲವಾದಿ, ಮಂಜುನಾಥ ಹುಜರಾತಿ, ಮಂಜುನಾಥ ದೊಡ್ಡಮನಿ, ವಿದ್ಯಾ ನಾಶೀಪುಡಿ, ಕರಿಯಪ್ಪ ದಳವಾಯಿ, ಬಸವಣ್ಣೆಪ್ಪ ನೀರಲಗಿ, ಶರೀಫ್ ನವಲಗುಂದ, ಹನಮಂತ ಚಲವಾದಿ, ಬುದ್ದಿವಂತ ನರೇಂದ್ರ, ಮೊಹ್ಮದರಫೀಕ್ ಮುಳಗುಂದ ಇದ್ದರು.

ಸಭೆ ನಂತರ ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಮಾರುಕಟ್ಟೆ ಪ್ರದೇಶದಲ್ಲಿ ಕರಪತ್ರ ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು