ಸರ್ಕಾರವೇ ಮಕ್ಕಳ ಪಂಚಮಿ ಆಚರಿಸಲಿ

7
ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಸರ್ಕಾರವೇ ಮಕ್ಕಳ ಪಂಚಮಿ ಆಚರಿಸಲಿ

Published:
Updated:
Deccan Herald

ಹುಬ್ಬಳ್ಳಿ: ನಾಗರ ಪಂಚಮಿ ದಿನದಂದು ಲಕ್ಷಾಂತರ ಲೀಟರ್‌ ಹಾಲನ್ನು ಕಲ್ಲು ನಾಗರ ಮೂರ್ತಿಗಳಿಗೆ ಹಾಕಿ ವ್ಯರ್ಥ ಮಾಡುತ್ತಿದ್ದೇವೆ. ಇದರ ಬದಲು ಸರ್ಕಾರವೇ ನಾಗರ ಪಂಚಮಿಯನ್ನು ಮಕ್ಕಳ ಪಂಚಮಿ ಎಂದು ಘೋಷಿಸಿ ಮಕ್ಕಳಿಗೆ ಹಾಲು ನೀಡಲಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ನಗರದ ಆರೂಢ ಅಂಧ ಮಕ್ಕಳ ಶಾಲೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ ಹುಬ್ಬಳ್ಳಿ ಶಹರ ತಾಲ್ಲೂಕು ಘಟಕ ಸೋಮವಾರ ಹಮ್ಮಿಕೊಂಡಿದ್ದ ‘ಕಲ್ಲು ನಾಗರ ಹಾಲು ಅಂಧ ಮಕ್ಕಳ ಪಾಲು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮೀಜಿ ಅವರು ಶಾಲೆಯ ಅಂಧ ವಿದ್ಯಾರ್ಥಿಗಳಿಗೆ ಹಾಲು ಮತ್ತು ಉಂಡೆ ವಿತರಿಸಿದರು.

‘ಹಬ್ಬಗಳು ಸಂಸ್ಕೃತಿ ಬಿಂಬಿಸುವಂತಿರಬೇಕು. ಆದರೆ, ಈಗಿನ ಕೆಲವು ಹಬ್ಬಗಳು ದುಂದುವೆಚ್ಚಕ್ಕೆ ಮತ್ತು ಮೌಢ್ಯಕ್ಕೆ ಇಂಬು ನೀಡುವಂತಿವೆ. ಕಲ್ಲು ನಾಗರ ಮೂರ್ತಿಗೆ ಹಬ್ಬದ ದಿನದಂದು ಸುಮಾರು 10 ದಶಲಕ್ಷ ಲೀಟರ್‌ ಹಾಲು ವ್ಯರ್ಥವಾಗುತ್ತಿದೆ. ಆದ್ದರಿಂದ ಈ ಹಬ್ಬವನ್ನು ಸರ್ಕಾರವೇ ಬಸವ ಪಂಚಮಿ ಅಥವಾ ಮಕ್ಕಳ ಪಂಚಮಿ ಎಂದು ಆಚರಿಸಬೇಕು’ ಎಂದರು.

‘21 ವರ್ಷಗಳಿಂದ ನಾವು ನಡೆಸುತ್ತಿರುವ ಈ ಕಾರ್ಯಕ್ರಮದ ಪರಿಣಾಮ ಸರ್ಕಾರದ ಮೇಲೂ ಆಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕ್ಷೀರ ಭಾಗ್ಯ ಯೋಜನೆ ಆರಂಭಿಸಿದೆ. ವಿವಿಧ ಸಂಘ ಸಂಸ್ಥೆಗಳು ಹಾಲು ವ್ಯರ್ಥವಾಗದಂತೆ ತಡೆಯಲು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಹಬ್ಬದ ದಿನದಂದು ಅಂಧ, ಅಂಗವಿಕಲ ಮಕ್ಕಳಿಗೆ ಹಾಲು ನೀಡಬೇಕು. ನಾನು ಹಬ್ಬ ಆಚರಣೆಗಳ ವಿರೋಧಿಯಲ್ಲ, ಆದರೆ ಆಚರಣೆಯ ನೆಪದಲ್ಲಿ ಮೌಢ್ಯದ ವಿರೋಧಿ’ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮಾಜ ಟ್ರಸ್ಟ್‌ನ ರಾಜ್ಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ತಾಲ್ಲೂಕು ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಕಲ್ಲಪ್ಪ ಯಲಿವಾಳ, ಅಮೃತ ಇಜಾರಿ, ನಾಗರಾಜ ಗೌರಿ, ದಶರಥ ವಾಲಿ, ಮೈಲಾರಿ ಧಾರವಾಡ, ಬಾಬಾಜಾನ ಮುಧೋಳ, ರಾಜಶೇಖರ ರೇವಣ್ಣವರ, ವಿದ್ಯಾ ಬಾಕಳೆ, ಮಹೇಶ ಪತ್ತಾರ ಇದ್ದರು.

ಸ್ವತಂತ್ರ್ಯ ಧರ್ಮಕ್ಕಾಗಿ ಪ್ರಧಾನಿ ಬಳಿ ನಿಯೋಗ

 ಸ್ವತಂತ್ರ್ಯ ಲಿಂಗಾಯತ ಧರ್ಮಕ್ಕಾಗಿ ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳುತ್ತೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಏನೇ ಅಡೆತಡೆಗಳು ಎದುರಾದರೂ ಸ್ವತಂತ್ರ ಧರ್ಮದ ಹೋರಾಟ ನಿರಂತರವಾಗಿರುತ್ತದೆ. ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ಅವರು ಬಂದ ಬಳಿಕ ನಮ್ಮ ಹೋರಾಟದ ಬಲ ಹೆಚ್ಚಿದೆ. ಸ್ವತಂತ್ರ ಧರ್ಮದ ಅಗತ್ಯತೆ ಕುರಿತು ರಾಜ್ಯದಾದ್ಯಂತ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಮಹದಾಯಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ತೀರ್ಪು ಕರ್ನಾಟಕದ ಪರ ಬರುವ ವಿಶ್ವಾಸವಿದೆ, ನ್ಯಾಯಪರ ಮತ್ತು ರೈತ ಪರ ಹೋರಾಟಕ್ಕೆ ಗೆಲುವು ಲಭಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !