ಗುರುವಾರ , ನವೆಂಬರ್ 21, 2019
20 °C

ಸರ್ಕಾರವೂ ಮಾಡಿಲ್ಲ ಹೆಗ್ಗಡೆ ಕುಟುಂಬದ ಸಮಾಜಮುಖಿ ಕಾರ್ಯ

Published:
Updated:
Prajavani

ಧಾರವಾಡ: ‘ಹೆಗ್ಗಡೆ ಅವರ ಕುಟುಂಬ ವರ್ಗ ಮಾಡಿರುವ ಸಮಾಜಮುಖಿ ಕಾರ್ಯಗಳನ್ನು ಸರ್ಕಾರವೂ ಮಾಡಿಲ್ಲ’ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಇಲ್ಲಿನ ಜೆಎಸ್‌ಎಸ್‌ ಸನ್ನಿಧಿ ಕಲಾಕ್ಷೇತ್ರದಲ್ಲಿ ಜನತಾ ಶಿಕ್ಷಣ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸ್ಥಳ ಸುರೇಂದ್ರಕುಮಾರ ಹಾಗೂ ಹರ್ಷೇಂದ್ರಕುಮಾರ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೆಗ್ಗಡೆ ಕುಟುಂಬ ವರ್ಗ ಮಾಡಿದ ಕಾರ್ಯಗಳು ಸರ್ಕಾರ ಹಾಗೂ ಸಮಾಜಕ್ಕೆ ಆದರ್ಶವಾಗಿದ್ದು, ಕಾವಂದರು ದೈವಿಕ‌ಶಕ್ತಿಯನ್ನು ಹೊಂದಿದ್ದಾರೆ. ತಮಾಷೆ, ಪ್ರೀತಿ, ಎಲ್ಲರೊಂದಿಗೆ ಸಹಕಾರ‌ ಮನೋಭಾವದಿಂದ ಹೆಗ್ಗಡೆ ಅವರ ಕುಟುಂಬ ಇದೆ. ಭೀಮ ಹಾಗೂ ಅರ್ಜುನರಂತೆ ಇಬ್ಬರು ಸಹೋದರರಾದ ಸುರೇಂದ್ರ ಹಾಗೂ ಹರ್ಷೇಂದ್ರ ಅವರು ವೀರೇಂದ್ರ ಹೆಗ್ಗಡೆ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದರು.

ಧಾರ್ಮಿಕ ಚಿಂತಕ ಮುನಿರಾಜ ರೆಂಜಾಳ್‌ ಮಾತನಾಡಿ, ‘ಕಳೆದ 50 ವರ್ಷಗಳಿಂದ ಸಮಾಜ ಸುಧಾರಣೆ ಕಾರ್ಯಗಳಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರ ಜತೆ ಸುರೇಂದ್ರ ಹಾಗೂ ಹರ್ಷೇಂದ್ರ ಅವರು ತೊಡಗಿಸಿಕೊಂಡಿದ್ದಾರೆ. ಧರ್ಮಸ್ಥಳ ಮಾದರಿಯನ್ನು ರೂಪಿಸುವಲ್ಲಿ ಇಬ್ಬರ ಶ್ರಮ ಅಪಾರ. ಅಣ್ಣ ಕಂಡ ಕನಸುಗಳನ್ನು ಸಾರ್ಥಕತೆಗೆ ತರುವಲ್ಲಿ ಇವರಿಬ್ಬರು ಶ್ರಮಿಸಿದ್ದಾರೆ’ ಎಂದು ಹೇಳಿದರು.

‘ಧರ್ಮಸ್ಥಳ ಕ್ಷೇತ್ರಕ್ಕೆ ರಾಜಕಾರಣಿ, ಚಿತ್ರ ನಟರು, ವಿವಿಧ ಗಣ್ಯರು ಬರುವಂತೆ ಮಾಡಿರುವುದು ಸುರೇಂದ್ರಕುಮಾರ ಅವರು. ಇನ್ನೂ 1978 ರಲ್ಲಿ ಹರ್ಷೇಂದ್ರ ಅವರು ಕ್ಷೇತ್ರದ ಕಾರ್ಯಕ್ಕೆ ಇಳಿದು ಇಂದಿನವರೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಧಾರ್ಮಿಕ ಕೇಂದ್ರ ಮಾತ್ರವಲ್ಲದೆ, ಸಾಂಸ್ಕೃತಿಕ ಹಾಗೂ ಸಂಸ್ಕಾರ ಕೇಂದ್ರವನ್ನಾಗಿ ಹರ್ಷೇಂದ್ರ ಅವರು ರೂಪಿಸಿದ್ದಾರೆ’ ಎಂದರು.

ಆಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಹಂಪ ನಾಗರಾಜಯ್ಯ ಮಾತನಾಡಿ, ‘ಅವಿಭಕ್ತ ಕುಟುಂಬದ ಸೌಖ್ಯವನ್ನು ಧರ್ಮಸ್ಥಳದ ಕುಟುಂಬ ವರ್ಗ ನಮಗೆ ತೋರಿಸಿಕೊಟ್ಟಿದೆ. ಎಲ್ಲೆಡೆ ವಿಭಕ್ತ ಕುಟುಂಬಗಳು ಇರುವಾಗ ವಿಭಕ್ತ ಕುಟುಂಬ ಒಂದು ಶ್ರೀಕ್ಷೇತ್ರವನ್ನು ಮುನ್ನಡೆಸುತ್ತಾ ಸಮಾಜ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ. ಯಾವ ಪೋಷಕರು ತಮ್ಮ ಮಕ್ಕಳು ಶಿಕ್ಷಕರಾಗಬೇಕು ಎಂದು ಆಸೆ ಪಡುವುದಿಲ್ಲ. ಬದಲಾಗಿ ವೈದ್ಯ, ಎಂಜಿನಿಯರ್‌ ಆಗಬೇಕೆಂದು ಬಯಸುತ್ತಿರುವುದು ವೀಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಜನತಾ ಶಿಕ್ಷಣ ಸಮಿತಿ ವತಿಯಿಂದ ಸುರೇಂದ್ರಕುಮಾರ ದಂಪತಿ ಹಾಗೂ ಹರ್ಷೇಂದ್ರಕುಮಾರ ದಂಪತಿಗೆ ಗೌರವ ಸಮರ್ಪಿಸಲಾಯಿತು.

ಸನ್ಮಾನ ಸ್ವೀಕರಿಸಿ ಸುರೇಂದ್ರಕುಮಾರ ಹಾಗೂ ಹರ್ಷೇಂದ್ರಕುಮಾರ ಮಾತನಾಡಿದರು. ಜೆಎಸ್‌ಎಸ್‌ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹಾಗೂ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. 

ಜೆಎಸ್‌ಎಸ್‌ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ, ಶ್ರೀಕಾಂತ ಕೆಂಮ್ತೂರ್‌, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂದರ್‌ ಕುಮಾರ ಇದ್ದರು.

ಪ್ರತಿಕ್ರಿಯಿಸಿ (+)