ಹುಬ್ಬಳ್ಳಿ: 'ಸರ್ಕಾರ ಡಿಜೆ ಹಚ್ಚುವ ವಿಚಾರದಲ್ಲಿ ಅನಗತ್ಯ ಕಿರಿಕಿರಿ ಮಾಡುತ್ತಿದೆ. ಡಿಜೆ ಜೊತೆಗೆ ಆಜಾನ್ ವಿರುದ್ಧವೂ ಕ್ರಮ ಕೈಗೊಳ್ಳಲಿ' ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಆಜಾನ್ ವಿಚಾರದಲ್ಲಿ ಎಲ್ಲ ಪಕ್ಷದವರೂ ನಿರ್ಲಜ್ಜರೇ ಆಗಿದ್ದಾರೆ. ಬಿಜೆಪಿ ಏನು ಸಾಚಾ ಅಲ್ಲ. ಅವರಿಗೆ ಹಿಂದುಗಳು ಬೇಕು, ಅವರ ಭಾವನೆ ಬೇಕಿಲ್ಲ. ಆಜಾನ್ ವಿಷಯ ಕುರಿತು ಹೋರಾಟ ಮಾಡಿದಾಗ ಇದೇ ಬಿಜೆಪಿ ಬಂಧನ ಮಾಡಿತ್ತು' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಡಿಜೆ ವಿಚಾರದಲ್ಲಿ ಸರ್ಕಾರ ಕಿರಿಕಿರಿ ಮಾಡೋದು ಸರಿ ಅಲ್ಲ. ಡಬಲ್ ಡಿಜೆ ಹಚ್ಚಿ ಏನಾಗತ್ತೋ ನೋಡೋಣ' ಎಂದು ಕರೆ ನೀಡಿದರು.
'ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿದರೆ ಗಲಾಟೆ ಮಾಡುತ್ತಾರೆ, ಬೆಂಕಿ ಹಚ್ಚುತ್ತಾರೆ ಎಂದೆಲ್ಲ ಹೇಳುತ್ತಿದ್ದರು. ಮೂರು ದಿನದ ಉತ್ಸವ ಯಶಸ್ವಿಯಾಗಿ ಮುಕ್ತಾಯವಾಗುತ್ತಿದೆ. ಹಿಂದುಗಳು ಶಾಂತಿಪ್ರಿಯರು. ಯಾವುದೇ ಗಲಾಟೆ ಮಾಡದೆ ಗಣಪತಿ ಉತ್ಸವ ಆಚರಿಸಿದ್ದಾರೆ' ಎಂದರು.