ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ವಿದ್ಯಾರ್ಥಿಗಳೊಂದಿಗೆ ಉದ್ಯೋಗಾಕಾಂಕ್ಷಿಗಳಿಗೂ ತೊಂದರೆ; ನೇಮಕಾತಿಗೆ ಆಗ್ರಹ
Last Updated 12 ಆಗಸ್ಟ್ 2021, 13:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದ 39,308 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಇದರಿಂದ ದೈಹಿಕ ಶಿಕ್ಷಣದ ಅರಿವು, ಆಟೋಟಗಳಿಂದ ಬಹುತೇಕ ವಿದ್ಯಾರ್ಥಿಗಳ ವಂಚಿತರಾಗಿದ್ದರೆ, ವಯೋಮಿತಿ ಮೀರಿದ ಹಲವು ಉದ್ಯೋಗಾಕಾಂಕ್ಷಿಗಳೂ ಕೆಲಸದಿಂದ ವಂಚಿತರಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿಯಂತೆ, ರಾಜ್ಯದಲ್ಲಿ ಒಟ್ಟು 43,492 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 4,752 ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯ ನಿ‍ರ್ವಹಿಸುತ್ತಿದ್ದಾರೆ. 4,696 ಸರ್ಕಾರಿ ಪ್ರೌಢಶಾಲೆಗಳಿದ್ದು, 4,128 ದೈಹಿಕ ಶಿಕ್ಷಣ ಶಿಕ್ಷಕರು ಇದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿ 38,740 ಹಾಗೂ ಪ್ರೌಢ ಶಾಲೆಗಳಲ್ಲಿ 568 ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ. 2007ರಲ್ಲಿ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷರ ನೇಮಕವಾಗಿದ್ದು ಬಿಟ್ಟರೆ, ಆ ಬಳಿಕ ನೇಮಕಾತಿ ನಡೆದಿಲ್ಲ. 2016-17ರಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವೇಳೆ 250 ದೈಹಿಕ ಶಿಕ್ಷಣ ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಯಿತು.

‘6ರಿಂದ 10ನೇ ತರಗತಿವರೆಗೆ ದೈಹಿಕ ಶಿಕ್ಷಣದ ಪಠ್ಯಕ್ರಮವಿದ್ದು, ಬೋಧನೆ, ಪರೀಕ್ಷೆಗೆ ಅವಕಾಶವಿದೆ. ಈ ವಿಷಯದಲ್ಲೂ ಉತ್ತೀರ್ಣರಾಗಬೇಕಿರುವುದು ಕಡ್ಡಾಯ ಎಂದು ಸರ್ಕಾರ ಆದೇಶಿಸಿದೆ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 200 ಮಕ್ಕಳು ಇರಬೇಕು, ಇಲ್ಲವೇ 7 ಸಹ ಶಿಕ್ಷಕರಿದ್ದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೂ ಇರಬೇಕೆಂಬ ನಿಯಮವಿದೆ. ಹಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ, ದೈಹಿಕ ಶಿಕ್ಷಕರ ನೇಮಕಾತಿ ನಡೆದಿಲ್ಲ’ ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೌಡಪ್ಪ ಎಸ್‍. ತಿಳಿಸಿದರು.

‘ಶಿಕ್ಷಕರ ನಿವೃತ್ತಿ, ತಾಲ್ಲೂಕು ವಿಷಯ ಪರಿವೀಕ್ಷಕರಾಗಿ ಬಡ್ತಿ ಹೊಂದಿದ ಕಾರಣ ಸುಮಾರು 2,000 ಪ್ರೌಢಶಾಲೆಗಳಲ್ಲೂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಪ್ರಧಾನಿ ಮೋದಿ ಅವರು ಖೇಲೋ ಇಂಡಿಯಾ, ಫಿಟ್‍ ಇಂಡಿಯಾಗೆ ಕರೆ ನೀಡಿದ್ದು, ಶಾಲಾ ಹಂತದಲ್ಲಿ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸುವ ಶಿಕ್ಷಕರ ಸಂಖ್ಯೆ ತೀರಾ ಕಡಿಮೆಯಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT