ಗುರುವಾರ , ಆಗಸ್ಟ್ 11, 2022
23 °C

ಗ್ರಾ.ಪಂ. ಚುನಾವಣೆ: ಲಕ್ಷಗಟ್ಟಲೇ ತೆರಿಗೆ ಸಂಗ್ರಹ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮನೆ, ವಾಣಿಜ್ಯ ಕಟ್ಟಡ, ಜಾಗದ ತೆರಿಗೆ, ಕುಡಿಯುವ ನೀರು ಸರಬರಾಜಿನ ಶುಲ್ಕಕ್ಕಾಗಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಜನರ ಮನೆ, ಮನೆಗೆ ಅಲೆದಾಡುತ್ತಿದ್ದರು. ಈಗ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೇ ತೆರಿಗೆ ಪಾವತಿಗಾಗಿ ಗ್ರಾಮ ಪಂಚಾಯ್ತಿಗೆ ಅಲೆದಾಡುತ್ತಿದ್ದಾರೆ. ಹೀಗಾಗಿ, ಲಕ್ಷಾಂತರ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ.

ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸುವ ಅಭ್ಯರ್ಥಿ ಕಡ್ಡಾಯವಾಗಿ ಎಲ್ಲ ತೆರಿಗೆಗಳ ಪಾವತಿ ಮಾಡಿರಬೇಕು. ಯಾವುದೇ ಬಾಕಿಯನ್ನು ಉಳಿಸಿಕೊಂಡಿರುವಂತಿಲ್ಲ. ಬಾಕಿ ಉಳಿಸಿಕೊಂಡಿದ್ದರೆ, ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗುತ್ತದೆ. 

ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿರುವ ಅಭ್ಯರ್ಥಿಗಳು ₹300 ರಿಂದ ಹಿಡಿದು ಸಾವಿರಾರು ರೂಪಾಯಿವರೆಗಿನ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಕೆಲವರು ಕುಡಿಯುವ ನೀರಿನ ಶುಲ್ಕವನ್ನು ಹಲವಾರು ವರ್ಷಗಳಿಂದ ಪಾವತಿಸಿರಲಿಲ್ಲ. ಅಂತಹವರು ಈಗ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಸಾಲುಗಟ್ಟಿ ಶುಲ್ಕ ತುಂಬುತ್ತಿದ್ದಾರೆ.

‘ಚುನಾವಣಾ ಆಯೋಗ ತೆರಿಗೆ ಪಾವತಿ ಬಾಕಿ ಇರಬಾರದು ಎಂದು ಸೂಚಿಸಿರುವುದರಿಂದ ₹1,000 ದಿಂದ ಹಿಡಿದು ₹2,000ರ ವರೆಗಿನ ಮೊತ್ತವನ್ನು ನೂರಾರು ಜನರು ಪಾವತಿ ಮಾಡಿದ್ದಾರೆ. ಒಂದು ಲಕ್ಷದ ಹತ್ತಿರಕ್ಕೆ ತೆರಿಗೆ ಸಂಗ್ರಹವಾಗಿದೆ. ಒಟ್ಟು ಎಷ್ಟಾಗಿದೆ ಎಂಬುದನ್ನು ಲೆಕ್ಕ ಹಾಕಬೇಕಿದೆ’ ಎನ್ನುತ್ತಾರೆ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯಂಕಪ್ಪ ಹೊಟ್ಟೆಗೌಡರ.

‘ನಮ್ಮಲ್ಲಿ ಯಾರದ್ದೂ ಬಹಳ ದೊಡ್ಡ ಮೊತ್ತದ ಬಾಕಿ ಇರಲಿಲ್ಲ. ಒಂದೆರಡು ವರ್ಷ ಬಾಕಿ ಉಳಿಸಿಕೊಂಡಿರುವವರು ಪಾವತಿ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಆರು ತಿಂಗಳೊಳಗೆ ಶೌಚಾಲಯ: ಶೌಚಾಲಯ ಹೊಂದಿರುವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿಲ್ಲ. ಆದರೆ, ಆಯ್ಕೆಯಾದ ಆರು ತಿಂಗಳ ಒಳಗೆ ಶೌಚಾಲಯ ಕಟ್ಟಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

‘ಅಭ್ಯರ್ಥಿಗಳಾಗುವವರು ಕಡ್ಡಾಯವಾಗಿ ಆಯ್ಕೆಯಾದ ಆರು ತಿಂಗಳ ಒಳಗೆ ಶೌಚಾಲಯ ಕಟ್ಟಿಸಿಕೊಳ್ಳುವುದಾಗಿ ಪತ್ರ ನೀಡಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

***

ಚುನಾವಣೆಗೆ ಸ್ಪರ್ಧಿಸುವವರು ತೆರಿಗೆ ಬಾಕಿ ಮೊತ್ತ ಪಾವತಿಸಿ, ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು. ಅಂತಹವರು ಒಂದು ವಾರದಿಂದ ತೆರಿಗೆ ಪಾವತಿಸುತ್ತಿದ್ದಾರೆ.

-ಯಂಕಪ್ಪ ಹೊಟ್ಟೆಗೌಡರ, ಪಿಡಿಒ, ಮಿಶ್ರಿಕೋಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.