ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ: ಆಣೆ, ಪ್ರಮಾಣದ ಮೊರೆ ಹೋದ ಅಭ್ಯರ್ಥಿಗಳು

ನವಲಗುಂದ ತಾಲ್ಲೂಕಿನಲ್ಲಿ 14 ಗ್ರಾಮ ಪಂಚಾಯ್ತಿಗಳು, 90 ಮತಗಟ್ಟೆ
Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ನವಲಗುಂದ: ಗ್ರಾಮ ಪಂಚಾಯ್ತಿ ಚುನಾವಣೆಗೆ ಶುಕ್ರವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯ ಕಂಡಿದ್ದು, ಅಭ್ಯರ್ಥಿಗಳು ಮತದಾರರನ್ನು ಶತಾಯು ಗತಾಯು ಸೆಳೆಯಲು ಕೊನೆಯ ಹಂತದಲ್ಲೂ ವಿಭಿನ್ನ ತಂತ್ರಗಳನ್ನು ಅನುಸರಿಸಿದರು. ಆಣೆ, ಪ್ರಮಾಣ ಮಾಡಿಸಿಕೊಂಡು ಮತ ಖಾತ್ರಿ ಮಾಡಿಕೊಂಡರು.

ಕೆಲವರು ಭಂಡಾರ, ಇನ್ನೂ ಕೆಲವರು ಅಂಬೇಡ್ಕರ್, ಬಸವಣ್ಣ ಹೀಗೆ ಆಯಾ ಜಾತಿಗೆ ಅನುಸಾರವಾಗಿ ಮತದಾರರು ನಂಬುವ ಅಥವಾ ಅವರ ಮನೆದೇವರ ಭಾವಚಿತ್ರದ ಮೇಲೆ ಪ್ರಮಾಣ ಮಾಡಿಸಿಕೊಳ್ಳುವ ತಂತ್ರ ಮಾಡಿದರು. ದುಡಿಯಲು ಅಥವಾ ಹೊರ ಊರುಗಳಲ್ಲಿರುವ ಕ್ಷೇತ್ರದ ಮತದಾರರಿಗೆ ಫೋನ್‌ ಕರೆ ಮಾಡಿ ಭಾನುವಾರ ಬಂದು ಮತ ಚಲಾಯಿಸುವಂತೆ ಮನವೊಲಿಸುತ್ತಿದ್ದಾರೆ.

ಕಸರತ್ತು: ಎರಡು ದಿನಗಳಿಂದ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿರುವ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿ ಗ್ರಾಮ ಪಂಚಾಯ್ತಿಯ ಮತಗಳ ಲೆಕ್ಕಾಚಾರವನ್ನು ಆಯಾ ಗ್ರಾಮದ ಹಿರಿಯರಿಂದ ಪಡೆದುಕೊಂಡು ಸೋಲು, ಗೆಲುವಿಗೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಉಳಿದ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೂಡ ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಸಿದ್ಧತೆ ಪೂರ್ಣ: ನವಲಗುಂದದ ಮಾಡೆಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಸ್ಥಾಪಿಸಿದ್ದ ಚುನಾವಣಾ ಮಸ್ಟರಿಂಗ್ ಕೇಂದ್ರದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿ ಜಿ.ಬಿ. ಜಕ್ಕನಗೌಡರ ಮಾತನಾಡಿ ’ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು, 90 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ‘ ಎಂದರು.

ಅಧಿಕಾರಿಗಳಿಗೆ ಸುರಕ್ಷಿತಾ ಕಿಟ್‌

ಅಣ್ಣಿಗೇರಿ: ತಾಲ್ಲೂಕಿನ 8 ಗ್ರಾಮ ಪಂಚಾಯಿತಿಯ 109 ಸ್ಥಾನಗಳಿಗೆ ಭಾನುವಾರ ನಡೆಯಲಿರುವ ಚುನಾವಣೆಗೆ ನೇಮಕಗೊಂಡ ಸಿಬ್ಬಂದಿ ಶನಿವಾರ ತಮ್ಮ ಕಿಟ್‌ಗಳನ್ನು ಪಡೆದು ಆಯಾ ಮತಗಟ್ಟೆಗಳಿಗೆ ತೆರಳಿದರು.

ಈ ಭಾರಿ ಮತಪತ್ರ ಹಾಗೂ ಮತದಾನದ ಸಲಕರಣೆಗಳ ಜೊತೆಗೆ ಹೆಚ್ಚುವರಿಯಾಗಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸುರಕ್ಷಿತಾ ಕಿಟ್‌ ಕೂಡ ನೀಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಕೊಟ್ರೇಶ್ವರ ಗಾಳಿ ಹೇಳಿದರು.

ಪ್ರತಿಯೊಂದು ಮತಗಟ್ಟೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ ಮತ್ತು ನೂತನ ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಡಿವೈಎಸ್‌ಪಿ ಒಳಗೊಂಡಂತೆ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪಿಎಸ್ಐ ಎಲ್.ಕೆ. ಜೂಲಕಟ್ಟಿ ತಿಳಿಸಿದರು. ತಾಲ್ಲೂಕಿನಲ್ಲಿ 12 ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತ್ತು 38 ಸಾಮಾನ್ಯ ಮತಗಟ್ಟೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT